ಮುಂಡರಗಿ: ವೃತ್ತಿರಂಗ ಪರದೆಯ ಮುಂದೆ ಇರುವಂತಹ ನಾಟಕ ಸಂಘದ ಕಲಾವಿದರ ಸಂತೋಷ, ಪರದೆಯ ಹಿಂದೆ ಇರುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲಿಯೂ ಕಷ್ಟ, ನಷ್ಟಗಳು ಇದ್ದೇ ಇರುತ್ತದೆ. ಆದರೆ ರಂಗಭೂಮಿ ಕಲಾವಿದರ ಜೀವನದಲ್ಲಿ ಅವು ಹೆಚ್ಚಿರುತ್ತವೆ. ವೃತ್ತಿ ರಂಗಭೂಮಿಯಲ್ಲಿ ಈಗ ಕಲಾವಿದರ ಕೊರತೆ ಇದೆ. ಇದರಿಂದಾಗಿ ಅನೇಕ ವೃತ್ತಿರಂಗ ಭೂಮಿ ನಾಟಕ ಕಂಪನಿಗಳು ನಶಿಸಿಹೋಗಿವೆ ಎಂದು ಶ್ರೀ ಕುಮಾರ ವಿಜಯ ನಾಟ್ಯ ಸಂಘ ಚಿತ್ತರಗಿ ಕಂಪನಿಯ ಮಾಲೀಕ ಮಂಜುನಾಥ ಜಾಲಿಹಾಳ ಹೇಳಿದರು. ಅವರು ಶುಕ್ರವಾರ ಪಟ್ಟಣದ ಜ.ಅ.ವಿದ್ಯಾ ಸಮಿತಿಯ ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ ಮುಂಡರಗಿಯ ಆಂತರಿಕ ಗುಣಮಟ್ಟ ಭರವಸೆಯ ಕೋಶದಡಿಯಲ್ಲಿ ಕನ್ನಡ ವಿಭಾಗ ಮತ್ತು ಇಂಗ್ಲಿಷ ವಿಭಾಗಗಳ ಸಹಯೋಗದೊಂದಿಗೆ ವೃತ್ತಿ ರಂಗಭೂಮಿ ಸವಾಲುಗಳು ಕುರಿತು ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ವೃತ್ತಿ ರಂಗಭೂಮಿ, ರಂಗಭೂಮಿ ಕಲಾವಿದರು ಬರಗಾಲ, ಅತಿವೃಷ್ಟಿ ಸೇರಿದಂತೆ ವಿವಿಧ ಕಾರಣಕ್ಕಾಗಿ ಆರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿವೆ. ಹೀಗಾಗಿ ಪ್ರತಿದಿನವೂ ವೃತ್ತಿ ರಂಗಭೂಮಿಯನ್ನು ನಡೆಸುವುದು ಒಂದು ಸವಾಲಾಗಿದೆ. ಆದರೂ ಸಹ, ನಮ್ಮ ನೋವುಗಳನ್ನೆಲ್ಲ ಮರೆತು ಜನರನ್ನು ನಗಿಸಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವೆಂದು ತಿಳಿದು, ನಾವೆಲ್ಲರೂ ಸೇವೆ ಮಾಡುತ್ತಿದ್ದೇವೆ. ವೃತ್ತಿ ರಂಗಭೂಮಿಗೆ 150ರಿಂದ 200 ವರ್ಷಗಳ ಭವ್ಯವಾದ ಇತಿಹಾಸ ಇದೆ. ಸ್ವಾತಂತ್ರ್ಯ ಪೂರ್ವದಿಂದಲೂ ಸಹ ನಾಟಕಗಳ ಮೂಲಕ ಸಮಾಜವನ್ನು ತಿದ್ದುವಂತಹ ಕಾರ್ಯವನ್ನು ರಂಗಭೂಮಿ ನಿರಂತರವಾಗಿ ಮಾಡುತ್ತಾ ಬಂದಿದೆ. ಈ ಹಿಂದೆ ಕರ್ನಾಟಕ ರಾಜ್ಯಾಧ್ಯಂತ ಸುಮಾರು 90 ವೃತ್ತಿ ನಾಟಕ ಸಂಘಗಳು ಕಾರ್ಯನಿರ್ವಹಿಸುತ್ತಿದ್ದವು. ಇದೀಗ ಕಾರಣಾಂತರಗಳಿಂದ ವೃತ್ತಿರಂಗಭೂಮಿ ಕಷ್ಟದಾಯಕವಾಗಿ ಮಾರ್ಪಟ್ಟಿದೆ ಎಂದರು.ವಿಚಾರ ಸಂಕಿರಣ ಉದ್ಘಾಟಿಸಿ, ಹವ್ಯಾಸಿ ರಂಗಭೂಮಿ ಕಲಾವಿದ ವೈ.ಎನ್. ಗೌಡರ್ ಮಾತನಾಡಿ, ಸಿನಿಮಾ ಹಾಗೂ ಟಿವಿಗಳಿಂದ ರಂಗಭೂಮಿ ತೊಂದರೆಯಲ್ಲಿಲ್ಲ, ಅದನ್ನು ನಾನು ಒಪ್ಪುವುದೂ ಇಲ್ಲ. ರಂಗಭೂಮಿ ಹೆತ್ತ ತಾಯಿ ಇದ್ದಂತೆ. ಸಿನಿಮಾ, ಧಾರಾವಾಹಿಗಳು ಹೆರಿಗೆ ಮಾಡಿಸುವ ದಾದಿ ಇದ್ದಂತೆ. ತಾಯಿಗೆ ದಾದಿ ಎಂದು ಸರಿಸಮನಾಗಲು ಹೇಗೆ ಸಾಧ್ಯವಾಗುವುದಿಲ್ಲವೋ, ಹಾಗೆ ರಂಗಭೂಮಿಯನ್ನು ಮೀರಿಸುವುದು ಎಂದಿಗೂ ಸಾಧ್ಯವಿಲ್ಲ. ನಾಗರಿಕತೆಯ ಸಾಂಸ್ಕೃತಿಕ ರಾಯಭಾರಿಯೇ ರಂಗಭೂಮಿ. ಒಬ್ಬ ದೊಡ್ಡವನಾಗಿರುವ ಮನುಷ್ಯನನ್ನು ಸಣ್ಣವನನ್ನಾಗಿ ತೋರಿಸುವುದು ಕಿರುತೆರೆ, ಒಬ್ಬ ಸಣ್ಣವನಾಗಿರುವ ಮನುಷ್ಯನನ್ನು ದೊಡ್ಡವನನ್ನಾಗಿ ತೋರಿಸುವುದು ಸಿನಿಮಾ, ಆದರೆ ರಂಗಭೂಮಿಯಲ್ಲಿ ಮಾತ್ರ ಇರುವುದನ್ನು ಇರುವಂತೆ ತೋರಿಸುವ ಕಲೆ ಇದೆ. ಅದುವೇ ರಂಗಭೂಮಿ ಕಲೆ ಎಂದರು. ವೃತ್ತಿ ರಂಗಭೂಮಿಯ ಹಾಸ್ಯ ಕಲಾವಿದ ದಯಾನಂದ ಬೀಳಗಿ ಮಾತನಾಡಿ, ರಂಗಭೂಮಿಗೆ ಮನಪರಿವರ್ತನೆ ಮಾಡುವ ಶಕ್ತಿ ಇದೆ. ಗಾಂಧೀಜಿ ಸತ್ಯ ಹರಿಶ್ಚಂದ್ರ ನಾಟಕ ನೋಡಿದ್ದರಿಂದಲೇ ಮನಪರಿವರ್ತನೆಯಾಗಿ ಮಹಾತ್ಮಾ ಗಾಂಧೀಜಿಯಾದರು. ಇಂದು ಯುವಕರು ರಂಗಭೂಮಿಯಿಂದ, ರಂಗಾಸಕ್ತಿಯಿಂದ ದೂರ ಉಳಿದಿರುವುದರಿಂದಲೇ ರಂಗಭೂಮಿ ಸವಾಲು ಎದುರಿಸುವಂತಾಗಿದೆ. ಇಂದೇನಾದರೂ ರಂಗಭೂಮಿ ಉಳಿದಿದ್ದರೆ ಅನುಭವಿ ಹಿರಿಯ ರಂಗಭೂಮಿ ಕಲಾವಿದರು ಹಾಗೂ ಅನುಭವಿ ಕಂಪನಿಯ ಮಾಲೀಕರಿಂದ ಮಾತ್ರ. ಹೊಸ ಹೊಸ ಯುವ ಕಲಾವಿದರು ರಂಗಭೂಮಿಗೆ ಬಂದರೆ ಮಾತ್ರ ರಂಗಭೂಮಿ ಉಳಿಯಲು ಸಾಧ್ಯವಿದೆ. ಇಂದು ಕಲಾವಿದರಿಗಿಂತ ಕಂಪನಿ ಮಾಲೀಕರು ಎದುರಿಸುವ ಸವಾಲುಗಳು ಹೆಚ್ಚಾಗಿವೆ ಎಂದರು. ಹಿರಿಯ ರಂಗಭೂಮಿ ನಟ, ನಾಟಕ ರಚನೆಕಾರ, ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತ ಪ್ರಕಾಶ ಕಡಪಟ್ಟಿ ಮಾತನಾಡಿದರು. ಕ.ರಾ.ಬೆಲ್ಲದ ಮಹಾವಿದ್ಯಾಲಯದ ಮೇಲ್ವಿಚಾರಣಾ ಸಮಿತಿ ಉಪಕಾರ್ಯಾಧ್ಯಕ್ಷ ವೀರನಗೌಡ ಗುಡದಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾ.ಡಾ.ಡಿ.ಸಿ. ಮಠ, ಡಾ. ಸಂತೋಷ ಹಿರೇಮಠ, ಡಾ. ಕುಮಾರ ಜೆ, ಡಾ. ಸಚಿನ್ ಉಪ್ಪಾರ, ಡಾ. ಎ.ಎಸ್. ಕಲ್ಯಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಾ.ಡಿ.ಸಿ. ಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಆರ್.ಎಚ್. ಜಂಗನವಾರಿ ನಿರೂಪಿಸಿದರು.