ನಾಟಕ ಸ್ಪರ್ಧೆಗಳಿಂದ ರಂಗಭೂಮಿ ಬೆಳೆಯುತ್ತದೆ: ಡಾ.ಎಚ್.ಎಸ್. ಬಲ್ಲಾಳ್

KannadaprabhaNewsNetwork | Published : Dec 7, 2024 12:33 AM

ಸಾರಾಂಶ

ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ಇದರ 60ರ ಸಂಭ್ರಮೋತ್ಸವದ ಪ್ರಯುಕ್ತ ದಿ. ಡಾ. ಟಿ.ಎಂ.ಎ. ಪೈ, ದಿ.ಎಸ್.ಎಲ್. ನಾರಾಯಣ ಭಟ್ ಮತ್ತು ಮಲ್ಪೆ ಮಧ್ವರಾಜ್ ಸ್ಮಾರಕದಿಂದ ‘45ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ -2024’ ಆಯೋಜಿಸಲಾಯಿತು.

45ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ -2024 ಉದ್ಘಾಟನೆ

ಕನ್ನಡಪ್ರಭ ವಾರ್ತೆ ಉಡುಪಿ

ನಾಟಕ, ಯಕ್ಷಗಾನದಲ್ಲಿ ನಟನೆ ಸುಲಭವಲ್ಲ. ಇಲ್ಲಿ ಸಿನಿಮಾದಂತೆ ರಿಟೇಕ್ ಇರುವುದಿಲ್ಲ. ಪ್ರತಿಭಾವಂತ ಕಲಾವಿದರು ಮಾತ್ರ ಇಲ್ಲಿ ಮಿಂಚಬಲ್ಲರು. ಇಂತಹ ನಾಟಕ ಸ್ಪರ್ಧೆಗಳಿಂದ ರಂಗಭೂಮಿಯ ಬೆಳವಣಿಗೆ ಸಾಧ್ಯ ಎಂದು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಹೇಳಿದರು.ಅವರು ಇಲ್ಲಿನ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ಇದರ 60ರ ಸಂಭ್ರಮೋತ್ಸವದ ಪ್ರಯುಕ್ತ ದಿ. ಡಾ. ಟಿ.ಎಂ.ಎ. ಪೈ, ದಿ.ಎಸ್.ಎಲ್. ನಾರಾಯಣ ಭಟ್ ಮತ್ತು ಮಲ್ಪೆ ಮಧ್ವರಾಜ್ ಸ್ಮಾರಕ ಆಯೋಜಿಸಲಾದ ‘45ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ -2024’ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ರಂಗಭೂಮಿ ನಟರು ಸಿನಿಮಾ ರಂಗದಲ್ಲೂ ಅಭಿನಯಿಸಿ ಮಿಂಚಿದ್ದಾರೆ. ಇವತ್ತು ನಾಟಕ ವೀಕ್ಷಣೆಗೆ ಪ್ರೇಕ್ಷಕರ ಕೊರತೆಯಿದೆ. ಈ ನಿಟ್ಟಿನಲ್ಲಿ ರಂಗಭೂಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ತಂಡ ರಂಗಭೂಮಿಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ. ನಾಟಕ ವೀಕ್ಷಿಸಲು ನಾವೆಲ್ಲಾ ಪ್ರೇರೇಪಿಸಬೇಕು. ಇಂತಹ ಕೆಲಸವಾದರೆ ಮಾತ್ರ ಈ ಕಲೆಯ ಬೆಳವಣಿಗೆ ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ರಂಗಶಿಕ್ಷಣ ಮಕ್ಕಳಿಗೆ ಕೊಡಬೇಕು ಎನ್ನುವ ಉದ್ದೇಶದಿಂದ ಈ ವರ್ಷ ಕೆಲವು ಆಯ್ದ ಶಾಲೆಗಳಲ್ಲಿ ಪ್ರಾರಂಭಿಸಿದ್ದೇವೆ. ಮುಂದೆ ಅದನ್ನು ಜಿಲ್ಲಾದ್ಯಂತ ವಿಸ್ತರಿಸುವ ಚಿಂತನೆಯಿದೆ. ರಂಗಭಾಷೆ ಕಾರ್ಯಕ್ರಮದ ಮೂಲಕ ಕಾಲೇಜುಗಳ 100 ಮಂದಿ ವಿದ್ಯಾರ್ಥಿಗಳನ್ನು ಆರಿಸಿಕೊಂಡು ರಂಗ ಶಿಕ್ಷಣ ನೀಡಲಾಗುತ್ತಿದೆ. ಭವಿಷ್ಯದಲ್ಲಿ ರಂಗಭೂಮಿ ನಟರು ಹಾಗೂ ಪ್ರೇಕ್ಷಕರ ಕೊರತೆ ಎದುರಿಸಬಾರದು ಎನ್ನುವ ಚಿಂತನೆ ಇಲ್ಲಿದೆ. ರಂಗಭೂಮಿ ಸಂಸ್ಥೆಯೊಂದು ೪೫ನೇ ನಾಟಕ ಸ್ಪರ್ಧೆಯನ್ನು ಏರ್ಪಡಿಸುತ್ತಿರುವುದು ರಾಜ್ಯದಲ್ಲಿಯೇ ಪ್ರಪ್ರಥಮವಾಗಿದೆ ಎಂದು ತಿಳಿಸಿದರು.ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮಿನಾರಾಯಣ ಕಾರಂತ, ರಂಗಭೂಮಿ ಉಪಾಧ್ಯಕ್ಷರಾದ ಎನ್. ರಾಜಗೋಪಾಲ ಬಲ್ಲಾಳ್, ಭಾಸ್ಕರ ರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಶ್ರೀಪಾದ ಹೆಗ್ಡೆ ಸ್ವಾಗತಿಸಿದರು. ಗೀತಾಂ ಗಿರೀಶ್ ತಂತ್ರಿ ರಂಗಗೀತೆ ಹಾಡಿದರು.

Share this article