ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿಕನ್ನಡಪ್ರಭ ವಾರ್ತೆ ಸಂಡೂರು
ಸಮಾಜ ತಿದ್ದುವ ಬಲಿಷ್ಠ ಶಕ್ತಿ ರಂಗಭೂಮಿಗಿದೆ. ಪ್ರಸ್ತುತ ದಿನಗಳಲ್ಲಿ ರಂಗಭೂಮಿಯಲ್ಲಿ ಮಹಿಳೆಯರ ಧ್ವನಿಯಾಗಿ ಹಾಗೂ ಅವರ ಭಾಗವಹಿಸುವಿಕೆ ತುಂಬಾ ಕ್ಷೀಣಿಸುತ್ತಿದೆ ಎಂದು ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ್ ಎಸ್. ನಾನಾವಟೆ ಅಭಿಪ್ರಾಯಪಟ್ಟರು.ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಲಕ್ಷ್ಮೀ ಎಸ್ ನಾನಾವಟೆ ಶಿಕ್ಷಣ ಮಹಾವಿದ್ಯಾಲಯ ಹಾಗೂ ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿಯು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಸಮಾಜದಲ್ಲಿನ ಓರೆಕೋರೆಗಳನ್ನು ತಿದ್ದುತ್ತಾ ಸಮಾಜವನ್ನು ಬೆಳವಣಿಗೆಯತ್ತ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ರಂಗಭೂಮಿ ಕಲೆಯನ್ನು ನಾವಿಂದು ಉಳಿಸಿ, ಬೆಳೆಸಬೇಕಿದೆ. ವ್ಯಕ್ತಿಯಲ್ಲಿನ ಸೃಜನಶೀಲತೆಯನ್ನು ಹೊರ ಹಾಕಲು ಹಾಗೂ ಪ್ರತಿಭೆಗಳನ್ನು ಅರಳಿಸಲು ರಂಗಭೂಮಿ ಪ್ರಮುಖ ವೇದಿಕೆಯಾಗಿದೆ. ಆಧುನಿಕ ತಂತ್ರಜ್ಞಾನ ಬಳಕೆಯ ಪ್ರಭಾವದಿಂದ ನಮ್ಮ ಮೂಲ ರಂಗಭೂಮಿ ಹಾಗೂ ನಾಟಕ ಕಲೆಯು ಅವನತಿಯಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಸತ್ಯ ಹರಿಶ್ಚಂದ್ರ, ಶ್ರವಣ ಕುಮಾರನ ಮಾತಾ ಪಿತೃಭಕ್ತಿ ನಾಟಕಗಳು ಮಹಾತ್ಮಾ ಗಾಂಧೀಜಿಯವರ ಬದುಕನ್ನೇ ಬದಲಾಯಿಸಿದವು. ಇಂತಹ ಶಕ್ತಿ ಇರುವುದು ರಂಗಭೂಮಿ ಕಲೆಗೆ ಮಾತ್ರ ಎಂದರು.ರಂಗಭೂಮಿ ಕಲಾವಿದರೂ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಬಿ. ಕೊಟ್ರೇಶ್ ಮಾತನಾಡಿ, ಶಿಕ್ಷಕರಾದವರು ಸಹ ಪಾಠಗಳಲ್ಲಿನ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಬೋಧಿಸಿದಾಗ ಪಾಠ ಪರಿಣಾಮಕಾರಿಯಾಗುತ್ತದೆ. ಇಂದಿನ ವಿದ್ಯಾರ್ಥಿಗಳು ಅಭಿನಯ ಗೀತೆಗಳು, ರಂಗಗೀತೆಗಳು, ಬೀದಿ ನಾಟಕಗಳು ಮುಂತಾದ ಕಲೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಳ್ಳಾರಿಯ ಇಬ್ರಾಹಿಂಪುರದ ಚಿಗುರು ಕಲಾತಂಡದವರು ರಂಗಗೀತೆ ಹಾಡಿದರಲ್ಲದೆ, ಕಿರು ನಾಟಕ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದೆಯರಾದ ರೇಣುಕಾ ಬಾವಳ್ಳಿ ಹಾಗೂ ಸರ್ವಮಂಗಳ ಅವರನ್ನು ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಹಿರಿಯ ರಂಗಕರ್ಮಿ ಶಿವ ನಾಯಕದೊರೆ, ರಂಗ ಕಲಾವಿದ ಎಸ್.ಎಂ. ಹುಲುಗಪ್ಪ, ಕಾಲೇಜಿನ ಪ್ರಾಚಾರ್ಯ ಯು. ದೇವರಾಜ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ಬಿಇಡಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.