ಧಾರವಾಡ:ಪ್ರಸ್ತುತ ಹೊಸ-ಹೊಸ ಪ್ರತಿಭೆಗಳು ರಂಗಭೂಮಿಯತ್ತ ಬರುತ್ತಿರುವುದರಿಂದ ರಂಗಭೂಮಿ ಚೇತರಿಕೆ ಕಾಣುತ್ತಿದೆ. ಪ್ರೇಕ್ಷಕರು ಸಹ ಉತ್ತಮ ಹಾಗೂ ಅರ್ಥಪೂರ್ಣ ನಾಟಕಗಳನ್ನು ವೀಕ್ಷಿಸಲು ಬಯಸುತ್ತಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕರು, ಚಿಂತಕ ಡಾ. ಕೆ.ಆರ್. ದುರ್ಗಾದಾಸ ಹೇಳಿದರು.ಸ್ನೇಹಿತರು ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾಸಂಘ ಹಾಗೂ ರಂಗಾಯಣ ಜಂಟಿಯಾಗಿ ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಆಯೋಜಿಸಿದ್ದ ರಂಗಸ್ನೇಹಿತ ಪ್ರಶಸ್ತಿ ಪ್ರದಾನದಲ್ಲಿ ಮಾತನಾಡಿದರು.ರಂಗಭೂಮಿಗೆ ಅನೇಕ ಮಹನೀಯರು ತಮ್ಮದೇ ಆದ ಕಾಣಿಕೆ ನೀಡಿದ್ದು, ಅವರನ್ನು ಸದಾ ಸ್ಮರಿಸಬೇಕು. ರಂಗಭೂಮಿಯಲ್ಲಿ ಕಾರ್ಯ ಮಾಡುತ್ತಿರುವ ಕಲಾವಿದರು ಅದರತ್ತ ಗಮನ ಹರಿಸಿ ಮುಂದೆ ಉತ್ತಮ ನಟ, ನಿರ್ದೇಶಕ, ಸಂಘಟಕರಾಗಲು ಪ್ರಯತ್ನಿಸಬೇಕು ಎಂದರು.ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ, ರಂಗಭೂಮಿಗೆ ಈ ಹಿಂದೆ ಅನೇಕ ಹಿರಿಯರು ಉತ್ತಮ ವೇದಿಕೆ ನೀಡುತ್ತಾ ಬಂದಿದ್ದು ಇಂದಿಗೂ ರಂಗಭೂಮಿ ತನ್ನದೆ ಆದ ವಿಶೇಷತೆಯಿಂದ ಸಾಗುತ್ತಿದೆ. ಹೊಸ ಹೊಸ ನಾಟಕಗಳು ರಂಗದ ಮೇಲೆ ಬರುತ್ತಿರುವುದು ಶ್ಲಾಘನೀಯ. ಎಲ್ಲ ಸಂಘಟನೆಗಳು ಕೂಡಿ ವಿಶ್ವರಂಗಭೂಮಿ ದಿನಾಚರಣೆ ಮಾಡುತ್ತಿರುವುದು ವಿಶೇಷ ಎಂದು ಹೇಳಿದರು. ಚಿಂತಕ ಡಾ. ಶಿವಾನಂದ ಶೆಟ್ಟರ ಮಾತನಾಡಿ, ಯುವ ಕಲಾವಿದರು ರಂಗ ಕಲೆಯ ಮೂಲಕ ಉತ್ತಮ ವೇದಿಕೆಗಳನ್ನು ಕಲ್ಪಿಸಿಕೊಳ್ಳಬೇಕು ಮತ್ತು ರಂಗಭೂಮಿಯ ಏಳ್ಗೆಗಾಗಿ ಗಟ್ಟಿತನದಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಅದರಲ್ಲಿ ಮುಂದುವರಿದು ಸದೃಢರಾಗಬೇಕು ಎಂದರು.ಇದೇ ವೇಳೆ ಹಿರಿಯ ರಂಗಕಲಾವಿದರಾದ ಮಾಲತಿ ಬೆಣ್ಣೂರ ಅವರಿಗೆ ರಂಗ ಸ್ನೇಹಿತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೃಷಿ ವಿಶ್ವವಿದ್ಯಾಲಯದ ಕುಲಸಚಿವರಾದ ಜಯಲಕ್ಷ್ಮಿ ರಾಯಕೋಡ ಮಾತನಾಡಿದರು. ಕೃಷಿ ವಿವಿ ಹಣಕಾಸು ನಿಯಂತ್ರಣಾಧಿಕಾರಿ ಶಿವಪುತ್ರ ಹೊನ್ನಳ್ಳಿ, ಡಾ. ಚಂದ್ರಶೇಖರ ರೊಟ್ಟಿಗವಾಡ, ವಿಜಯೀಂದ್ರ ಅರ್ಚಕ, ಭಾಗ್ಯಶ್ರೀ ನಾಮಸೇವಿ, ವೀರಣ್ಣ ಹೊಸಮನಿ, ಸಂತೋಷ ಮಹಾಲೆ ಇದ್ದರು.
ಆನಂತರ ಏಕವ್ಯಕ್ತಿ ರಂಗ ಪ್ರಯೋಗದಲ್ಲಿ ಪವನ ದೇಶಪಾಂಡೆ ಅವರು ‘’ಕೃಷ್ಣಂ ವಂದೇ ಜಗದ್ಗುರಂ’’ ಅಭಿಷೇಕ ಎಸ್.ಕೆ. ಅವರು ‘ಕೊನೆಯ ಅಂಕ’ ಹಾಗೂ ನಾಟ್ಯಧರ್ಮಿ ಕಲಾ ತಂಡದಿಂದ ಉರಿಯ ಉಯ್ಯಾಲೆ ನಾಟಕ ಪ್ರದರ್ಶನಗೊಂಡಿತು. ರಾಜ್ಯದ ವಿವಿಧ ಅಕಾಡೆಮಿಗಳಿಗೆ ಆಯ್ಕೆಯಾದ ಡಾ. ಕೆ.ಆರ್. ದುರ್ಗಾದಾಸ, ಗಾಯತ್ರಿ ಹಡಪದ, ಡಾ. ನಿಂಗಪ್ಪ ಮುದೇನೂರ ಹಾಗೂ ಡಾ. ಬಸವರಾಜ ಕಲೆಗಾರ ಅವರನ್ನು ಸನ್ಮಾನಿಸಲಾಯಿತು.