ರಂಗಭೂಮಿ ಎನ್ನುವುದು ಮನುಷ್ಯನ ಮುಖಕ್ಕೆ ಹಿಡಿದ ಕೈ ಗನ್ನಡಿ

KannadaprabhaNewsNetwork |  
Published : Apr 17, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ  ಬಾಟಂ    | Kannada Prabha

ಸಾರಾಂಶ

ಚಿತ್ರದುರ್ಗದ ಬಾಪೂಜಿ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದಶಿವಸಂಚಾರ ನಾಟಕೋತ್ಸವದ ಸಮಾರೋಪದಲ್ಲಿ ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಲಪತಿ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಾಂಸ್ಕೃತಿಕ ವಾತಾವರಣ ಇರುವಲ್ಲಿ ಯುದ್ಧಗಳು ಸಂಭವಿಸುವುದಿಲ್ಲ. ರಂಗಭೂಮಿ ಎನ್ನುವುದು ಮನುಷ್ಯನ ಮುಖಕ್ಕೆ ಹಿಡಿದ ಕೈಗನ್ನಡಿ. ಅದರಲ್ಲಿ ನಮ್ಮ ಬದುಕನ್ನೇ ನಾವು ನೋಡಿಕೊಳ್ಳುತ್ತೇವೆ ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬಾಪೂಜಿ ಸಮೂಹ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶಿವಕುಮಾರ ಕಲಾ ಸಂಘದಿಂದ ಹಮ್ಮಿಕೊಳ್ಳಲಾದ ಶಿವಸಂಚಾರ ನಾಟಕೋತ್ಸವದ ಸಮಾರೋಪದಲ್ಲಿ ಮಾತನಾಡಿದ ಅವರು, ಈ ಬಾರಿಯ ಶಿವಸಂಚಾರದ ನಾಟಕಗಳು ಪ್ರೇಕ್ಷಕರಲ್ಲಿ ಚಿಂತನೆಗೆ ಒಳಪಡಿಸುತ್ತವೆ. ಉತ್ತಮ ಸಂಸ್ಕಾರ, ಜನ ಜೀವನದ ವಾಸ್ತವದ ಬದುಕು ಮತ್ತು ಅದರ ನಿರ್ವಹಣೆಗೆ ಕೈಗೊಂಡ ತೀರ್ಮಾನಗಳು ಹೀಗೆ ಸಾಗುತ್ತಾ ಹೋಗುತ್ತವೆ. ಅಧಿಕಾರ ಎಂಬುದು ಮನುಷ್ಯನನ್ನು ಭ್ರಷ್ಟರನ್ನಾಗಿ ಮಾಡುತ್ತದೆ. ಕಳಂಕವಿಲ್ಲದೇ ನೆಮ್ಮದಿ ಬದುಕನ್ನು ಕಾಣುವ ವ್ಯಕ್ತಿ ಎಂದರೆ ಅದು ರೈತ ಮಾತ್ರ. ನಿಷ್ಠೆಯಿಂದ ಬದುಕು ನಡೆಸುತ್ತಾನೆ. ದೇಶಕ್ಕೇ ಮಾದರಿಯಾಗುತ್ತಾನೆ ಎಂದರು.

ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಮಾತನಾಡಿ, ನಾಟಕಗಳ ಮೂಲಕ ಭ್ರಾತೃತ್ವ, ಸಮಾನತೆ, ಬಾಂಧವ್ಯ, ಮೂಡುತ್ತದೆ. ಈಗಲೂ ಹಳ್ಳಿಗಳಲ್ಲಿ ನಾಟಕ ಆಡಲಿಕ್ಕೆ ಜನಸಮೂಹ ಸೇರಿಕೊಳ್ಳುತ್ತದೆ. ಹಬ್ಬದ ರೀತಿಯಲ್ಲಿ ಇಡೀ ಹಳ್ಳಿಯನ್ನೇ ಸಿಂಗಾರಗೊಳಿಸಿರುತ್ತಾರೆ. ಅದು ಬರೀ ನಾಟಕ ಪ್ರದರ್ಶನವಾಗಿರದೆ ಬದುಕು ಮತ್ತು ಮನೋರಂಜನೆಯ ಭಾಗವಾಗಿರುತ್ತದೆ. ಎಲ್ಲರೂ ಒಟ್ಟಾಗಿ ಕೂಡಿ ಆಡುವ ವಾತಾವರಣ ಸೃಷ್ಟಿಯಾಗುತ್ತದೆ.

ಇಂದಿನ ಆದರ್ಶಗಳು ವಿಶ್ಲೇಷಣೆಗೆ ಮಾತ್ರ ಸೀಮಿತಗೊಂಡಿವೆ. ಬದುಕಿನಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಅಪರೂಪ. ಇಂದು ಮನುಷ್ಯ ತನ್ನ ಏಕಾಗ್ರತೆಯನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವುದಿಲ್ಲ. ಬದುಕಿನ ರೀತಿ ನೀತಿ ಮತ್ತು ಶೈಲಿಗಳಲ್ಲಿ ಬದಲಾಗಿದೆ. ಇದಕ್ಕೆ ಕಾರಣ ಸಂಸ್ಕಾರ ಜೊತೆಗೆ ಸಾಹಿತ್ಯ ಅಧ್ಯಯನದ ಕೊರತೆಯಾಗಿದೆ. ನಾಟಕಗಳ ಮೂಲಕ ಮನುಷ್ಯನ ಮಾನಸಿಕ ಬದಲಾವಣೆಗೆ ಒತ್ತು ನೀಡುವಂತಹ ಕಾರ್ಯ ನಡೆಸಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ ನಾಟಕಗಳು ಮನುಷ್ಯನ ಬದುಕಿನ ಒಂದು ಭಾಗ. ಅನೇಕ ರೀತಿಯಾಗಿ ಬದುಕಿನ ಪಾಠವನ್ನು ಕಲಿಸುತ್ತದೆ. ಜಾಲತಾಣದಲ್ಲಿ ಮುಳುಗಿದ ಜನರು ಆರೋಗ್ಯಕ್ಕಿಂತ ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದಾರೆ. ಇಂದಿನ ಅತಿವೇಗದ ಕಾಲದಲ್ಲಿ ಸಂಪೂರ್ಣವಾಗಿ ಕಲೆಯನ್ನು ಆಸ್ವಾದಿಸುವುದು ವಿರಳವಾಗಿದೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಅಹೋಬಲಪತಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಬಾಪೂಜಿ ಸಮೂಹ ಸಂಸ್ಥೆಯ ಕಾರ್ಯದರ್ಶಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಕೆ.ಎಂ.ವೀರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ವಿಶ್ವಸ್ಥ ಸಮಿತಿಯ ಖಜಾಂಚಿ ಹಾಗೂ ಸಾಹಿತಿ ಡಾ.ಜಿ.ಎನ್ ಮಲ್ಲಿಕಾರ್ಜುನಪ್ಪ, ಶಿವಸಂಚಾರದ ಶಿವಯೋಗಿ ಸಿದ್ಧರಾಮ, ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ, ಗ್ರಾಪಂ ಮಾಜಿ ಉಪಾಧ್ಯಕ್ಷ ದಿವಾಕರ್, ಸಮಾಜ ಸೇವಕ ಆರ್.ಶೇಷಣ್ಣಕುಮಾರ್, ಹಿರಿಯ ಕಲಾವಿದ ಕೆ.ಜಂಬುನಾಥ, ಸಾಹಿತಿ ಹುರುಳಿ ಬಸವರಾಜ್, ರಂಗನಿರ್ದೇಶಕ ಕೆ.ಪಿ.ಎಂ ಗಣೇಶಯ್ಯ ಇದ್ದರು. ಪಂಡಿತಾರಾಧ್ಯ ಮಹಾಸ್ವಾಮೀಜಿ ವಿರಚಿತ ಶಿವಯೋಗಿ ಸಿದ್ಧರಾಮೇಶ್ವರ ನಾಟಕವನ್ನು ರಂಗಕರ್ಮಿ ವೈ.ಡಿ ಬದಾಮಿ ನಿರ್ದೇಶನದಲ್ಲಿ ಸಾಣೇಹಳ್ಳಿ ಶಿವಸಂಚಾರ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ
ಪಿಪಿ ವೃತ್ತದಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪನೆಗೆ ಮುನ್ನುಡಿ