ಹಾನಗಲ್ಲ: ರಂಗಭೂಮಿ ನಿಂತ ನೀರಲ್ಲ. ಜವಾಬ್ದಾರಿಯುತ ಪ್ರದರ್ಶನ ಕಲೆಯಾಗಿ ಶತಮಾನಗಳಿಂದ ಸಮಾಜಕ್ಕೆ ಸತ್ಸಂದೇಶಗಳನ್ನು ನೀಡಿ ಶಕ್ತಿಯುತವಾಗಿ ಬೆಳೆದಿದೆ ಎಂದು ಸಾಹಿತಿ ಸತೀಶ ಕುಲಕರ್ಣಿ ತಿಳಿಸಿದರು.
ಹಾಗನಲ್ಲ ತಾಲೂಕಿನ ರಂಗ ಗ್ರಾಮ ಶೇಷಗಿರಿಯಲ್ಲಿ ಶೇಷಗಿರಿಯ ಗಜಾನನ ಯುವಕ ಮಂಡಳದ ಸಹಯೋಗದಲ್ಲಿ ನೀನಾಸಂ ನಾಟಕೋತ್ಸವದ ಅಂಗವಾಗಿ ಆಯೋಜಿಸಿದ್ದ ರಂಗ ತಿರುಗಾಟ ಉದ್ಘಾಟಿಸಿ ಮಾತನಾಡಿದರು.ಯಾವುದೇ ಗೋಡೆಗಳನ್ನು ಕಟ್ಟಿಕೊಳ್ಳದೆ ಬದುಕುಬೇಕಾದ ಅಗತ್ಯ ಇಂದಿನದಾಗಿದೆ. ಮಾತು ಮನಸ್ಸು ಒಂದಾಗಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಬೇಕಾದ ನೈತಿಕ ಸಂದೇಶಗಳನ್ನು ರಂಗಭೂಮಿ ಸಮರ್ಥವಾಗಿ ನೀಡುತ್ತಿದೆ. ಭೇದವಳಿದು ಪ್ರೀತಿ ಉಳಿಯಲಿ, ಹೊಸ ಚಿಂತನಗಳು ಮೊಳಗಲಿ. ನಾಳೆಗಳು ಸುಂದರವಾಗಲಿ ಎಂಬುದೇ ಈಗ ಎಲ್ಲರ ಮನದಾಳದ ಮಾತಾಗಿದೆ ಎಂದರು.ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ರಂಗಭೂಮಿಗೆ ಶೇಷಗಿರಿ ಕೊಡುಗೆ ಗಿರಿಗಾತ್ರದ್ದಾಗಿದೆ. ಹಳ್ಳಿಯ ಹುಡುಗರ ಸಣ್ಣ ಪ್ರಯತ್ನ ಈಗ ನಾಡಿನಗಲಕ್ಕೂ ಚಾಚಿದೆ. ಕೇವಲ ರಂಗ ಪ್ರದರ್ಶನಕ್ಕೆ ಸೀಮಿತವಾಗದೆ ಇಡೀ ದೇಶದಿಂದ ರಂಗಾಸಕ್ತರು ಇಲ್ಲಿ ಬಂದು ನಾಟಕ ಪ್ರದರ್ಶಿಸಬೇಕೆಂಬ ಹಂಬಲ ಉಳ್ಳವರಾಗಿದ್ದಾರೆ. ಅದಕ್ಕೆ ಬೇಕಾಗುವ ಎಲ್ಲ ರಂಗ ಸಜ್ಜಿಕೆಯನ್ನು ಆಧುನಿಕ ತಂತ್ರಜ್ಞಾನ ಒಳಗೊಂಡು ನೀಡಲು ಸಜ್ಜಾಗಿದೆ. ಶೇಷಗಿರಿ ಈಗ ರಂಗಭೂಮಿಯ ಹೆಮ್ಮೆ. ಇದರ ಪ್ರಗತಿಯಲ್ಲಿ ಪ್ರಮುಖ ಕೊಡುಗೆ ನೀಡಿದ್ದ ದಿ. ಸಿ.ಎಂ. ಉದಾಸಿ ಅವರ ನೆನೆಪು ಮಾತ್ರ ಇಲ್ಲಿ ಸದಾ ಹಸಿರು. ಇಲ್ಲಿನ ರಂಗಾಸಕ್ತರ ತ್ಯಾಗ ಸೇವೆಯಿಂದ ದೊಡ್ಡ ಹೆಸರು ಮಾಡಿದೆ ಎಂದರು.
ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ ಮುಖ್ಯ ಅತಿಥಿಯಾಗಿ ಮಾತನಾಡಿ, ನಮ್ಮ ಜನಪದ ಸಂಸ್ಕೃತಿ ಉಳಿಸುವಲ್ಲಿ ನಾಟಕಗಳ ಪಾತ್ರ ಮಹತ್ವದ್ದು. ಬದಲಾದ ಕಾಲಕ್ಕೆ ರಂಗ ಪ್ರದರ್ಶನಗಳು ಜನ ಮಾನಸದಿಂದ ದೂರವೆಂದು ಭಾವಿಸುವ ಕಾಲವನ್ನು ಮೀರಿ ಈಗ ರಂಗಭೂಮಿ ಜನ ಮಾನಸದ ಅತ್ಯಂತ ಹತ್ತಿರಕ್ಕೆ ಬಂದಿದೆ ಎಂಬುದನ್ನು ಸಾದರ ಪಡಿಸಿದ ಶೇಷಗಿರಿಯ ಸಾಧನೆ ಎಲ್ಲ ಕಾಲಕ್ಕೂ ಸಲ್ಲುವ ಮಾತಾಗಿದೆ ಎಂದರು.ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಶೇಷಗಿರಿ ಗಜಾನನ ಯುವ ಮಂಡಳದ ಅಧ್ಯಕ್ಷ ಪ್ರಭು ಗುರಪ್ಪನವರ, ರಂಗ ನಿರ್ದೆಶಕ ರಾಘು, ಕಲಾವಿದ ಕರಿಯಪ್ಪ ಹಂಚಿನಮನಿ ಅತಿಥಿಗಳಾಗಿದ್ದರು. ರಾಜೇಂದ್ರ ಹೆಗಡೆ, ಗೂಳಪ್ಪ ಅರಳಿಕಟ್ಟಿ, ಶೇಖರ ಭಜಂತ್ರಿ, ಮಂಜುನಾಥ ಹತ್ತಿಯವರ, ಸುಭಾಸ ಹೊಸಮನಿ, ನಿರಂಜನ ಗುಡಿ, ನರಸಿಂಹ ಕೋಮಾರ, ಎಂ.ಆರ್.ಹೆಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರತೀಕ್ಷಾ ಕೋಮಾರ ಪ್ರಾರ್ಥಿಸಿದರು. ನಾಗರಾಜ ಧಾರೇಶ್ವರ ಆಶಯ ನುಡಿ ನುಡಿದರು. ಜಮೀರ ಪಠಾಣ ಸ್ವಾಗತಿಸಿದರು. ಸಿದ್ದು ಕೊಂಡೋಜಿ ನಿರೂಪಿಸಿದರು.