ಹಾನಗಲ್ಲ: ಮಾನವೀಯತೆ ಎಚ್ಚರಿಸುವ ಕಾವ್ಯ ಬದುಕಿನ ಕಿಟಕಿಯಂತೆ, ಬದುಕನ್ನು ಚಿತ್ರಿಸುವ ರಂಗಭೂಮಿ ಕಲೆಗೆ ಮನುಷ್ಯ ಧ್ವನಿಯಾಗುವ ಅಗತ್ಯ ಇಂದಿನದಾಗಿದ್ದು, ಹೊಸ ತಲೆಮಾರು ನಾಟಕ ಕಲೆಯತ್ತ ವಾಲಬೇಕಾಗಿದೆ ಎಂದು ಖ್ಯಾತ ಕವಿ ಜಯಂತ್ ಕಾಯ್ಕಿಣಿ ಕರೆ ನೀಡಿದರು.
ರಂಗಭೂಮಿ ಸಂಯುಕ್ತ ಮನಸ್ಸನ್ನು ಘೋಷಿಸುತ್ತದೆ. ನಾಟಕ ಕಾವ್ಯಗಳಲ್ಲಿರುವ ಧ್ವನಿ ಸಮಾಜಕ್ಕೆ ಪ್ರೇರಣೆಯಾಗುತ್ತವೆ. ಮಾನವೀಯತೆ ಎಚ್ಚರಿಸುವ ನಾಟಕ ಕವಿತೆಗಳು ನಿಜವಾದ ಸಮಾಜಮುಖಿ ಕಾರ್ಯ. ಹೊಸ ತಲೆಮಾರು ಈ ನಾಟಕ ಮತ್ತು ಕಾವ್ಯದ ಸೃಜನಶೀಲ ಕೃಷಿಗೆ ಮುಂದಾಗಬೇಕು ಎಂದರು.
ಹುಬ್ಬಳ್ಳಿಯ ಕವಿ ರಂಜಾನ್ ಹೆಬಸೂರ ಸತೀಶ ಕುಲಕರ್ಣಿ ಅವರ ಕಾವ್ಯ ಕುರಿತು ಮಾತನಾಡಿ, ಕವಿ ಸತೀಶ ಕುಲಕರ್ಣಿ ಜನ ಮಿಡಿತ ಬಲ್ಲವರು. ಗಾಂಧಿ ವಾದಕ್ಕೆ ಆಕರ್ಷಿತರಾದವರು. ಸೌಹಾರ್ದ ನೆಲೆಗಟ್ಟಿನ ಬದುಕು ಬರಹವಾದ ಸತೀಶ ಮನುಷ್ಯವಾದವನ್ನು ಅಳವಡಿಸಿಕೊಂಡವರು. ಅವರ ಬರಹಗಳೆಲ್ಲ ಸಮಾಜವನ್ನು ಎಚ್ಚರಿಸುವ ಶಕ್ತಿ ಸಾಹಿತ್ಯ. ಅವರ ಬೀದಿ ನಾಟಕಗಳು ಕಾಲ ಕಾಲಕ್ಕೆ ಎಚ್ಚರಿಕೆಯಾಗಿ ಹೊರ ಹೊಮ್ಮಿವೆ ಎಂದರು.ಖ್ಯಾತ ಛಾಯಾಗ್ರಾಹಕ ಹುಬ್ಬಳ್ಳಿಯ ಶಶಿಧರ ಸಾಲಿ ಮಾತನಾಡಿ, ಸಂಬಂಧಗಳನ್ನು ಬೆಸೆಯುವ ಸಾಹಿತ್ಯ ಚಟುವಟಿಕೆ ನಮ್ಮ ಸ್ನೇಹ, ಪ್ರೀತಿಯನ್ನು ಇಮ್ಮಡಿಗೊಳಿಸುವ ಶಕ್ತಿಯನ್ನು ಹೊಂದಿವೆ ಎಂದರು.
ಡಾ. ವಿಶ್ವನಾಥ ಬೋಂದಾಡೆ, ಪ್ರೊ. ಮಾರುತಿ ಶಿಡ್ಲಾಪುರ, ದೀಪಾ ಗೋನಾಳ, ಶಂಕ್ರಣ್ಣ ಗುರಪ್ಪನವರ, ಪ್ರಾಚಾರ್ಯರಾದ ಡಿ. ಸೋಮನಾಥ, ಮಂಜುನಾಥ ವಡ್ಡರ, ಬಸವರಾಜ ಪಾಟೀಲ, ಎಸ್.ವಿ. ಹೊಸಮನಿ, ಪ್ರೊ. ಸಿ. ಮಂಜುನಾಥ, ಶೇಖರ ಭಜಂತ್ರಿ, ಕುಮಾರ ಕಾಟೇನಹಳ್ಳಿ, ಲಿಂಗರಾಜ ಸೊಟ್ಟಪ್ಪನವರ, ಬಸವರಾಜ ಪೂಜಾರ, ಸಾವಿತ್ರಿ ಸಿಂಘ, ಮಲ್ಲಿಕಾರ್ಜುನ ಶಾಂತಗಿರಿ ಪಾಲ್ಗೊಂಡಿದ್ದರು.
ಕಾವ್ಯ ಗಾಯನ: ಇದೇ ಸಂದರ್ಭದಲ್ಲಿ ಸಂಗೀತ ಕಲಾವಿದರಾದ ನರಸಿಂಹ ಕೋಮಾರ, ಪ್ರತೀಕ್ಷಾ ಕೋಮಾರ, ನಿಖಿತಾ ಮಾಳಗಿ ರಂಗ ಗೀತೆಗಳನ್ನು ಹಾಡಿದರು.