ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಸಾರಂಗಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀಕೋಡಿಯಮ್ಮ ದೇವಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಗ್ರಾಮೀಣ ಸೊಗಡಿನ ರಂಗಕುಣಿತ ರಾಜ್ಯ ಮಟ್ಟದ ಸ್ಪರ್ಧೆಯು ಮಳೆರಾಯನ ಅವಕೃಪೆಯ ನಡುವೆಯೂ ಅದ್ಧೂರಿಯಾಗಿ ನಡೆಯಿತು.ಬಾಯಿಬೀಗ, ಕನ್ನಂಕಾಡಿ, ಹಸಿರು ಬಂಡಿ, ಮಡೆ ಸಿಡಿಮದ್ದು ಹಾಗೂ ಹುಣಸೂರಿನ ದೇವರ ಗುಡ್ಡಗಳ ಕುಣಿತದೊಂದಿಗೆ ನಡೆದ ಶ್ರೀಕೋಡಿಯಮ್ಮನವರ ಉತ್ಸವಕ್ಕೆ ಮೆರುಗು ನೀಡುವಂತೆ ಗ್ರಾಮೀಣ ಕಲೆಗಳಿಗೆ ಪ್ರೋತ್ಸಾಹ ನೀಡುವ ರಂಗ ಕುಣಿತ ಸ್ಪರ್ಧೆಗಳು ಎಲ್ಲರ ಗಮನ ಸೆಳೆಯಿತು.
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ 14ರಂಗ ಕುಣಿತದ ತಂಡಗಳು ಅದ್ಧೂರಿಯಾಗಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ತಮಟೆಯ ಸದ್ದಿಗೆ ಲಯಬದ್ಧವಾಗಿ ಕುಣಿದು ಸೈ ಎನ್ನುವಂತೆ ನೃತ್ಯ ಪ್ರದರ್ಶನ ನೀಡಿದವು.ಸಮಾಜ ಸೇವಕ ಮಲ್ಲಿಕಾರ್ಜುನ ಮಾತನಾಡಿ, ಗ್ರಾಮೀಣ ಪ್ರದೇಶದ ರೈತರ ಜೀವನಾಡಿ ರಂಗ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾರಂಗಿ ಗ್ರಾಮಸ್ಥರು ರಾಜ್ಯ ಮಟ್ಟದ ಸ್ಪರ್ಧೆ ಆಯೋಜಿಸಿರುವುದು ಮಾದರಿಯಾಗಿದೆ. ಇಂತಹ ಕಲೆಗಳನ್ನು ಉಳಿಸಿ ಬೆಳೆಸಲು ಸ್ಪರ್ಧೆಗಳು ಸ್ಫೂರ್ತಿಧಾಯಕ ವಾಗಿದೆ ಎಂದರು.
ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 14 ತಂಡಗಳು ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣ ಮಾಡಿದರು. ಸ್ಪರ್ಧೆಯಲ್ಲಿ ವಿಜೇತ ಪ್ರಥಮ 10 ಸಾವಿರ ರು., ದಬ್ಬೆಘಟ್ಟ (ತುರುವೆಕೆರೆ ತಾಲೂಕು) ತಂಡ ಪಡೆಯಿತು. ದ್ವಿತೀಯ ನಾಗಮಂಗಲ ತಾಲೂಕಿನ ಲಾಳನಕೆರೆ ತಂಡ 6 ಸಾವಿರ ರು., ತೃತೀಯ ಮೈಸೂರು ತಾಲೂಕು ಇಲವಾಲ ತಂಡ 4 ಸಾವಿರ ರು.. ನಾಲ್ಕನೇ ಬಹುಮಾನ ಹಿರೀಸಾವೆ, ದೇವರಮಾವಿನಕೆರೆ, ನಗರ್ತಿ, ಗುಂಜೇವು ಗ್ರಾಮದ ತಂಡಗಳಿಗೆ ತಲಾ 3 ಸಾವಿರ ರು. ಬಹುಮಾನ ನೀಡಲಾಯಿತು.ತಾಲೂಕಿನ ಹೆಗ್ಗಡಹಳ್ಳಿ, ಶ್ಯಾರಹಳ್ಳಿ, ಗುಡುಗನಹಳ್ಳಿ, ಸೊರೆಕಾಯಿಪುರ, ಲೋಕನಹಳ್ಳಿ, ಹೊನ್ನೆನಹಳ್ಳಿ, ಸಾರಂಗಿ ಗ್ರಾಮಗಳ 7 ತಂಡಗಳಿಗೆ ತಲಾ 2 ರು. ಸಮಾಧಾನಕರ ಬಹುಮಾನವಾಗಿ ನೀಡಲಾಯಿತು.
ಗ್ರಾಮದ ಮುಖಂಡರಾದ ಈಶ, ರಮೇಶ್, ಜಯರಂಗ, ಗ್ರಾಪಂ ಸದಸ್ಯ ರಮೇಶ್, ರೇವಣ್ಣ, ಜಯರಾಮು, ಸಾರಂಗಿ ನಾಗಣ್ಣ, ಬೆಟ್ಟೇಗೌಡ, ದೇವೇಗೌಡ, ಮರಿಸ್ವಾಮಿಗೌಡ, ಸತೀಶ್, ಬಸವೇಗೌಡ, ಲಿಂಗರಾಜು, ಮಂಜೇಗೌಡ, ಗಿರೀಶ್, ಸಚಿನ್, ದೇವರಾಜು, ಅಣ್ಣೀಗೌಡ, ಯೋಗೇಗೌಡ, ವಿಶ್ವನಾಥ್, ನವೀನ್ ಸೇರಿದಂತೆ 5 ಸಾವಿರಕ್ಕೂ ಹೆಚ್ಚಿನ ಜನರು ಮಳೆಯ ನಡುವೆಯೂ ರಂಗಕುಣಿತ ಸ್ಪರ್ಧೆ ವೀಕ್ಷಿಸಿ ಗ್ರಾಮೀಣ ಕಲಾವಿದರನ್ನು ಉತ್ತೇಜಸಿ ಪ್ರೋತ್ಸಾಹಿಸಿದರು.