)
ಬೆಂಗಳೂರು ಕಳೆದ ವರ್ಷ ಮಲ್ಪೆ ಬಂದರಿನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಪ್ರಕರಣವನ್ನು ಸಮರ್ಥಿಸಿಕೊಂಡು ಮಾತನಾಡಿದ್ದ ಹಿನ್ನೆಲೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.ಪ್ರಕರಣದ ಸಂಬಂಧ ತಮ್ಮ ವಿರುದ್ಧದ ಎಫ್ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಪ್ರಮೋದ್ ಮದ್ವರಾಜ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಬಗೆಹರಿಸಲು ಮಲ್ಪೆ ಮೀನುಗಾರರ ಸಂಘ ಹಾಗೂ ಇನ್ನಿತರರ ಪ್ರಮುಖ ಮೀನುಗಾರಿಕಾ ಸಂಘಗಳು 2025ರ ಮಾರ್ಚ್ 22ರಂದು ಮಲ್ಪೆ ಬಂದರಿನಲ್ಲಿ ಸಭೆ ಹಮ್ಮಿಕೊಂಡಿದ್ದವು.
ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಮೋದ್ ಮಧ್ಯರಾಜ್ ‘ನಮ್ಮ ಮನೆಗೆ ಕಳ್ಳರು ಬಂದಾಗ, ಪೊಲೀಸರು ಬರುವುದಕ್ಕೆ 5-6 ಗಂಟೆ ತಡವಾದರೆ ನಾವು ಏನು ಮಾಡುತ್ತೇವೆ? ಕಳ್ಳರನ್ನು ಕಟ್ಟಿ ಹಾಕಲೇಬೇಕು. ಕಳ್ಳಿಗೆ ಮಚ್ಚು-ಖಡ್ಗದಲ್ಲಿ ಹೊಡೆದೆವಾ? ಕೆನ್ನೆಗೆ ಎರಡು ಬಾರಿಸಲಾಗಿದೆ’ ಎಂದು ಹೇಳಿಕೆ ನೀಡಿದ್ದರು.ಅಪರಾಧಕ್ಕೆ ಪ್ರೇರಣೆ: ಈ ಹಿನ್ನೆಲೆಯಲ್ಲಿ ಪ್ರಮೋದ್ ಮಧ್ವರಾಜ್ ಅವರು ಮಹಿಳೆಗೆ ಸಾರ್ವಜನಿಕವಾಗಿ ಕಟ್ಟಿಹಾಕಿ ಹೊಡೆದದ್ದನ್ನು ಸಮರ್ಥನೆ ಮಾಡಿಕೊಳ್ಳುತ್ತಾ ಸಾರ್ವಜನಿಕರು ಅಪರಾಧ ಮಾಡಿಸಲು ಪ್ರೇರಣೆ ನೀಡಿದ್ದಾರೆ. ದ್ವೇಷ ಭಾವನೆ ಮೂಡಿಸಲು ಹಾಗೂ ದೊಂಬಿ ಸೃಷ್ಟಿಸಲು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಿ.ಕೆ.ರವಿ ದೂರು ನೀಡಿದ್ದರು.ಪೊಲೀಸರು ಗಲಭೆ ಸೃಷ್ಟಿಸಲು ಪ್ರಚೋದನೆ ನೀಡಿದ ಹಾಗೂ ಅಕ್ರಮ ಕೂಟ ಸೇರಿದ ಅಪರಾಧ ಸಂಬಂಧ ಎಫ್ಐಆರ್ ದಾಖಲಿಸಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.