ಹೊಸಪೇಟೆ: ವಿಜಯನಗರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ವಿಜಯನಗರ ಜಿಲ್ಲೆಯ ಹೊಸಪೇಟೆ, ಹರಪನಹಳ್ಳಿ ಉಪವಿಭಾಗದ ವ್ಯಾಪ್ತಿ ನಡೆದ ಐದು ಕಳ್ಳತನ ಪ್ರಕರಣ ಭೇದಿಸಿ, 7 ಜನರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹24.75 ಲಕ್ಷ ಮೌಲ್ಯದ 165 ಗ್ರಾಂ ತೂಕದ ಚಿನ್ನಾಭರಣ, 15 ಬೈಕ್ ವಶಪಡಿಸಿಕೊಂಡಿದ್ದಾರೆ.
ಹೊಸಪೇಟೇ ವಿಭಾಗ:
ಜಿಲ್ಲೆಯ ಹೊಸಪೇಟೆ ಉಪವಿಭಾಗದ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಏ.20ರಂದು ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣದ ವಿಚಾರಣೆ ಕೈಗೊಂಡಿದ್ದ ಪೊಲೀಸರು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಎಸ್.ಶ್ರೀನಿವಾಸ, ಬಾಲಕನನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹4.60 ಲಕ್ಷ ಮೌಲ್ಯದ 33 ಗ್ರಾಂ ಚಿನ್ನಾಭರಣ, ₹6.40 ಲಕ್ಷ ಮೌಲ್ಯದ 6 ದ್ವಿಚಕ್ರ ವಾಹನ ಸೇರಿ ₹11 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಚಿತ್ತವಾಡಿ ಠಾಣೆ:
ಮತ್ತೊಂದು ಕಾರ್ಯಾಚರಣೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸೈಯದ್ ಮೆಹಬೂಬ್ ಖಾದ್ರಿ ಎಂಬಾತನನ್ನು ಬಂಧಿಸಿ, ₹4.75 ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಹರಪನಹಳ್ಳಿ ಉಪ ವಿಭಾಗದ ಹರಪನಹಳ್ಳಿ ಠಾಣೆ ವ್ಯಾಪ್ತಿಯ ತರಳುಬಾಳು ಕಲ್ಯಾಣ ಮಂಟಪದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಮಧ್ಯಪ್ರದೇಶ ಮೂಲದ ವಾಖರ್ ಅಹಮದ್ ಶೇಖ್, ಮುಜಾವರ್ ಜಾಫರ್ ಎಂಬವರನ್ನು ಬಂಧಿಸಿ, ₹3.50 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಹೂವಿನಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿ ಕಳೆದ ಜೂ.22ರಂದು ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಮೀರಾಕೊರನಹಳ್ಳಿಯ ಕೋಟೇಶ ಹುಲಿಕಟ್ಟಿ ಎಂಬಾತನನ್ನು ಬಂಧಿಸಿ, ₹3 ಲಕ್ಷ ಮೌಲ್ಯದ 52 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.