ಮಾಜಿ ಮೇಯರ್‌ ಮನೆಯಲ್ಲಿ ಸೆಕ್ಯೂರಿಗಾರ್ಡ್‌ನಿಂದಲೇ ಕಳ್ಳತನ?

KannadaprabhaNewsNetwork |  
Published : Apr 22, 2024, 02:04 AM IST
ಸಾಂದರ್ಭಿಕ | Kannada Prabha

ಸಾರಾಂಶ

ಮಾಜಿ ಮೇಯರ್‌ ನಾರಾಯಣಸ್ವಾಮಿ ಜಾಲಹಳ್ಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ, ಪತ್ನಿ ಹಾಗೂ ಪುತ್ನೂ ತಮಿಳುನಾಡಿನ ತಿರುವಣ್ಣಾಮಲೈ ದೇವಾಲಯಕ್ಕೆ ತೆರಳಿದ್ದ ವೇಳೆ ಮನೆಯ ಸೆಕ್ಯೂರಿಟಿ ಗಾರ್ಡ್‌ನಿಂದಲೇ ಕಳ್ಳತನ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ದೂರು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಜಿ ಮೇಯರ್‌ ಆರ್‌.ನಾರಾಯಣಸ್ವಾಮಿ ಅವರ ಮನೆಯಲ್ಲಿ ನಗದು ಸೇರಿದಂತೆ 1.29 ಕೋಟಿ ರು. ಮೌಲ್ಯದ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವ ಸಂಬಂಧ ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.ಈ ಸಂಬಂಧ ಮಾಜಿ ಮೇಯರ್‌ ನಾರಾಯಣಸ್ವಾಮಿ ನೀಡಿದ ದೂರಿನ ಮೇರೆಗೆ ಸೆಕ್ಯೂರಿಟಿ ಗಾರ್ಡ್‌ ನೇಪಾಳ ಮೂಲದ ನರಬಹುದ್ದೂರ್‌ ಶಾಯಿ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ಆತನ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?

ದೂರುದಾರ ನಾರಾಯಣಸ್ವಾಮಿ ಅವರು ಏ.18ರಂದು ಬೆಳಗ್ಗೆ 7.30ಕ್ಕೆ ಮನೆಯಿಂದ ಜಾಲಹಳ್ಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಅವರ ಪತ್ನಿ ಮತ್ತು ಪುತ್ರ ತಮಿಳುನಾಡಿನ ತಿರುವಣ್ಣಾಮಲೈ ದೇವಸ್ಥಾನಕ್ಕೆ ತೆರಳಿದ್ದರು. ಪ್ರಚಾರ ಮುಗಿಸಿ ಮಧ್ಯಾಹ್ನ 3 ಗಂಟೆಗೆ ಮನೆಗೆ ಬಂದಿರುವ ನಾರಾಯಣಸ್ವಾಮಿ ಊಟ ಮಾಡಿ, ಸೆಕ್ಯೂರಿಟಿ ಗಾರ್ಡ್‌ ನರಬಹುದ್ದೂರ್‌ ಶಾಯಿಗೂ ಊಟ ನೀಡಿದ್ದಾರೆ. ನಂತರ ಮನೆಗೆ ಬೀಗ ಹಾಕಿಕೊಂಡು ಮಧ್ಯಾಹ್ನ 3.30ಕ್ಕೆ ನಾರಾಯಣಸ್ವಾಮಿ ಮತ್ತೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ.

ಹಿಂಬದಿ ಬಾಗಿಲು ತೆರೆದು ಕಳ್ಳತನ:

ಚುನಾವಣಾ ಪ್ರಚಾರ ಮುಗಿಸಿಕೊಂಡು ರಾತ್ರಿ 8 ಗಂಟೆಗೆ ಮನೆಗೆ ವಾಪಾಸ್‌ ಬಂದಾಗ, ಮನೆಯ ಹಿಂಬದಿ ಬಾಗಿಲು ತೆರೆದಿರುವು ಕಂಡು ಬಂದಿದೆ. ಈ ವೇಳೆ ಸೆಕ್ಯೂರಿಟಿ ನರಬಹುದ್ದೂರ್‌ ಶಾಯಿಯನ್ನು ಕರೆದಿದ್ದು, ಆತ ಎಲ್ಲಿಯೂ ಕಂಡು ಬಂದಿಲ್ಲ. ಆತನ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್‌ ಆಫ್‌ ಬಂದಿದೆ.

ಸೆಕ್ಯೂರಿಟಿ ಗಾರ್ಡ್‌ ನಾಪತ್ತೆ:

ಮನೆಯ ಒಳಗೆ ತೆರಳಿ ನೋಡಿದಾಗ ಮನೆಯ ಮೂರು ರೂಮ್‌ನ ವಾರ್ಡ್‌ರೂಬ್‌ಗಳು ತೆರೆದಿದ್ದು, ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಂದಿರುವುದು ಕಂಡು ಬಂದಿದೆ. ವಾರ್ಡ್‌ರೂಬ್‌ನಲ್ಲಿ ಇರಿಸಿದ್ದ ನಗದು, ಚಿನ್ನಾಭರಣಗಳು, ಬೆಳ್ಳಿವಸ್ತುಗಳು ಸೇರಿದಂತೆ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ಸೆಕ್ಯೂರಿಟಿ ಗಾರ್ಡ್‌ ನರಬಹುದ್ದೂರ್ ಶಾಯಿಯೇ ಕಳ್ಳತನ ಮಾಡಿ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನೆಲ್ಲಾ ಕಳ್ಳತನ?

ಸಂಜಯನಗರದ ಆರ್‌ಎಂವಿ 2ನೇ ಹಂತದ ಮನೆಯಲ್ಲಿ ಏ.18ರಂದು ಈ ಘಟನೆ ನಡೆದಿದೆ. 4 ಲಕ್ಷ ರು. ನಗದು, 99.75 ಲಕ್ಷ ರು. ಮೌಲ್ಯದ 1.4 ಕೆಜಿ ತೂಕದ ಚಿನ್ನಾಭರಣಗಳು, 18.92 ಲಕ್ಷ ರು. ಮೌಲ್ಯದ 22 ಕೆ.ಜಿ. ಬೆಳ್ಳಿವಸ್ತುಗಳು, 6.50 ಲಕ್ಷ ರು. ಮೌಲ್ಯದ ಮೂರು ವಾಚ್‌ಗಳು ಸೇರಿದಂತೆ ಒಟ್ಟು 1.29 ಕೋಟಿ ರು. ಮೌಲ್ಯದ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ