ಕನ್ನಡಪ್ರಭ ವಾರ್ತೆ ತುಮಕೂರು ಅಂಧ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ನಾಯಕಿ ಟಿ.ಸಿ.ದೀಪಿಕಾ ಹಾಗೂ ರಾಜ್ಯದ ಇತರೆ ಇಬ್ಬರು ಮಹಿಳಾ ಆಟಗಾರ್ತಿಯರನ್ನು ನಗರದಲ್ಲಿ ಭಾನುವಾರ ಅದ್ಧೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಿ, ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದಿಂದ ಆಯೋಜಿಸಿದ್ದ ಈ ಅಭಿನಂದನಾ ಸಮಾರಂಭದ ಅಂಗವಾಗಿ ಬೆಳಗ್ಗೆ ಪುರಭವನ ವೃತ್ತದಿಂದ ತಂಡದ ನಾಯಕಿ ಟಿ.ಸಿ.ದೀಪಿಕಾ, ಕೊರಟಗೆರೆ ತಾಲೂಕಿನ ಕಾವ್ಯ ಹಾಗೂ ಶಿವಮೊಗ್ಗದ ಕಾವ್ಯ ಈ ಮೂವರನ್ನು ಬೆಳ್ಳಿರಥದಲ್ಲಿ ಕೂರಿಸಿ ಬಾಲಭವನದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಜಾನಪದ ಕಲಾತಂಡಗಳ ವೈಭವದೊಂದಿಗೆ ಸಾವಿರಾರು ಜನ ಈ ಸಂಭ್ರಮದಲ್ಲಿ ಭಾಗಿಯಾದರು.ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಚಿತ್ರದುರ್ಗ ಕ್ಷೇತ್ರ ಸಂಸದರಾದ ಗೋವಿಂದ ಕಾರಜೋಳ ಅವರು ಟಿ.ಸಿ.ದೀಪಿಕಾ ಅವರ ತಂಡ ಕೊಲಂಬೋದಲ್ಲಿ ನೇಪಾಳದ ಜೊತೆ ಸೆಣಸಾಡಿ ಭಾರತಕ್ಕೆ ಜಯ ತಂದುಕೊಟ್ಟಿದ್ದಾರೆ. ಅಂಧ ಮಕ್ಕಳಾಗಿಯೂ ಇವರ ಸಾಧನೆ ಅಪ್ರತಿಮವಾದುದು. ಈ ಜಿಲ್ಲೆಯ ಮಗಳಾಗಿ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸಿರುವ ದೀಪಿಕಾ ಈ ದೇಶದ ಹೆಮ್ಮೆಯ ಹೆಣ್ಣು ಮಗಳು ಎಂದು ಶ್ಲಾಘಿಸಿದರು.ಬಾಲ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಕಣ್ಣಿನ ತೊಂದರೆ ಇದ್ದರೂ ಈ ಹೆಣ್ಣು ಮಕ್ಕಳ ಸಾಧನೆ ಅನನ್ಯವಾದದ್ದು. ಇವರ ಸಾಧನೆ ಇತರರಿಗೆ ಸ್ಪೂರ್ತಿಯಾಗಬೇಕು. ಇಡೀ ರಾಷ್ಟ್ರವನ್ನು ಪ್ರತಿನಿಧಿಸಿರುವ ಹೆಣ್ಣು ಮಕ್ಕಳಲ್ಲಿ ತಂಡದ ನಾಯಕಿ ಈ ಜಿಲ್ಲೆಯವರು ಎಂಬುದು ನಮ್ಮ ಹೆಮ್ಮೆ. ಕಾಡುಗೊಲ್ಲ ಸಮುದಾಯದ ಬಡ ಕುಟುಂಬದ ಹೆಣ್ಣು ಮಗಳ ಈ ಸಾಧನೆಯನ್ನು ನಾವೆಲ್ಲಾ ಸ್ಮರಿಸಬೇಕು. ಇವರ ಜೊತೆ ಆಟವಾಡಿರುವ ರಾಜ್ಯದ ಇತರರನ್ನೂ ಇಲ್ಲಿ ಕರೆಸಿ ಅಭಿನಂದಿಸುತ್ತಿರುವುದು ಶ್ಲಾಘನೀಯ ಎಂದರು. ತುಮಕೂರು ಗ್ರಾಮಾಂತರ ಶಾಸಕರಾದ ಬಿ.ಸುರೇಶ್ ಗೌಡ ಮಾತನಾಡಿ, ಈ ರಾಜ್ಯದ ೪೪ ತಾಲೂಕುಗಳಲ್ಲಿ ಕಾಡುಗೊಲ್ಲರು ನಿರ್ಣಾಯಕವಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯಕ್ಕೆ ನ್ಯಾಯ ಸಿಗಬೇಕಾಗಿದೆ. ಎಸ್ಟಿ ವರ್ಗಕ್ಕೆ ಸೇರ್ಪಡೆ ಮಾಡಬೇಕೆನ್ನುವ ವಿಚಾರವಾಗಿ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ ಸೇರಿದಂತೆ ಹಲವರು ಈ ಹಿಂದೆ ಚರ್ಚಿಸಿ, ಕೇಂದ್ರದೊಂದಿಗೆ ಮಾತನಾಡಿದ್ದಾರೆ. ಎಲ್ಲ ಅರ್ಹತೆಯೂ ಇರುವುದರಿಂದ ಖಂಡಿತವಾಗಿಯೂ ಈ ಸಮುದಾಯ ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಯಾಗುವ ಆಶಾಭಾವನೆ ಇದೆ. ಇದಕ್ಕಾಗಿ ನಾವೂ ಸಹ ಕೆಲಸ ಮಾಡುತ್ತೇವೆ ಎಂದರು.