ಕುಣಿಗಲ್ ನಲ್ಲಿ ಇವೆ 81 ಏಕೋಪಾಧ್ಯಾಯ ಶಾಲೆಗಳು

KannadaprabhaNewsNetwork | Published : Jul 23, 2024 12:39 AM

ಸಾರಾಂಶ

ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೇರಳವಾಗಿ ಕುಸಿಯುತ್ತಿದೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೇರಳವಾಗಿ ಕುಸಿಯುತ್ತಿದೆ. 85 ಶಾಲೆಗಳಲ್ಲಿ ಒಂಟಿ ಶಿಕ್ಷಕರ ಪಾಡು ಹೇಳತೀರದಾಗಿದೆ. ಕುಣಿಗಲ್ ತಾಲೂಕಿನಲ್ಲಿರುವ 199 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 89 ಶಾಲೆಗಳಲ್ಲಿ ಒಂಟಿ ಶಿಕ್ಷಕರಿದ್ದಾರೆ. ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಕುಸಿದಿದೆ. ಸುಮಾರು ಶಾಲೆಗಳಲ್ಲಿ ಐದಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇರುವುದು ವಿಪರ್ಯಾಸ.

ಸಿದ್ದಯ್ಯನ ಕಟ್ಟೆ ತೆಪ್ಸಂದ್ರ ನಿಂಗಿಕೊಪ್ಲು ಸೇರಿದಂತೆ ಹಲವಾರು ಶಾಲೆಗಳಲ್ಲಿ ಕೇವಲ ಒಂದು ಅಥವಾ ಎರಡು ವಿದ್ಯಾರ್ಥಿಗಳಿದ್ದಾರೆ. ಸಿ ಟಿಪಾಳ್ಯ, ಬೂದಾನಹಳ್ಳಿ, ಕೋಗಟ್ಟ, ಕನ್ಗುಡಿ, ಅರ್ಜುನಳ್ಳಿ ತೊರೆ, ಬೊಮ್ಮನಹಳ್ಳಿ ಹಾಗೂ ಕನ್ನಗುಣಿ ಸೇರಿದಂತೆ ಬಹುತೇಕ ಶಾಲೆಗಳಲ್ಲಿ ಮೂರು ವಿದ್ಯಾರ್ಥಿಗಳಿದ್ದಾರೆ.

ಒಂಟಿ ಶಿಕ್ಷಕರ ಹಲವಾರು ಶಾಲೆಗಳಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದು ಕಷ್ಟ ಎಂಬುದು ಸತ್ಯವಾಗಿದ್ದು ಕೆಲವೊಮ್ಮೆ ನೆಪ ಮಾತ್ರಕ್ಕೆ ಶಾಲೆಗೆ ಹೋಗಿ ಪುನಃವಾಪಸ್ ಬರುತ್ತಾರೆ ಎಂಬುದು ಪೋಷಕರ ಅಳಲಾಗಿದೆ. ಒಂಟಿ ಶಿಕ್ಷಕರ ಶಾಲೆಯಲ್ಲಿ ಬಿಸಿಯೂಟದ ಹಲವಾರು ಸಮಸ್ಯೆಗಳಿದ್ದು ಯಾರೂ ಕೂಡ ಹೇಳುವುದು ಕೇಳುವುದು ಇಲ್ಲ ಎಂಬುದು ಪೋಷಕರ ವಾದ.

ಒಂಟಿ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅಧಿಕಾರಿಗಳ ಗಮನಕ್ಕೆ ತಂದು ರಜೆ ನೀಡಬೇಕು ಸಂಬಂಧಪಟ್ಟ ಸ್ಥಳಕ್ಕೆ ಮತ್ತೋರ್ವ ಶಿಕ್ಷಕನನ್ನು ನೇಮಿಸಬೇಕು. ಆದರೆ ಇದ್ಯಾವ ವ್ಯವಸ್ಥೆ ನಡೆಯುತ್ತಿಲ್ಲ. ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕಿದೆ. ಹೆಚ್ಚಾಗಿ ತರಬೇತಿ ಸಭೆ ಸಮಾರಂಭ ಇವುಗಳಿಗೆ ಶಿಕ್ಷಕರು ಹೋಗುತ್ತಾರೆ ಎಂಬ ದೂರಿದೆ.

ಇಂತಹ ಪರಿಸ್ಥಿತಿಯಲ್ಲಿ ಪೋಷಕರು ಬಡತನ ಇದ್ದರೂ ಕೂಡ ಕನ್ನಡ ಶಾಲೆಗಳನ್ನು ಬಿಟ್ಟು ಇಂಗ್ಲಿಷ್ ಬೋಧನಾ ಕ್ರಮ ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಮಾದರಿ ಶಾಲೆಯನ್ನು ಪ್ರಾರಂಭಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಪೋಟೋ ಇದೆ : 22 ಕೆಜಿಎಲ್ 1 : ಸಾಂಧರ್ಭಿಕ ಚಿತ್ರ ಬಳಸಿ

Share this article