ಕರಡು ಪಟ್ಟಿಯಲ್ಲಿರುವ 9,44,623 ಮತದಾರರ ಪೈಕಿ 4,68,325 ಪುರುಷರು, 4,76,255 ಮಹಿಳೆಯರು ಹಾಗೂ 43 ಇತರೆ ಮತದಾರರಿದ್ದಾರೆ. ಇದೇ ವೇಳೆ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಒಟ್ಟು 218 ಸೇವಾ ಮತದಾರರ ಕರಡು ಪಟ್ಟಿಯನ್ನೂ ಸಹ ಪ್ರಕಟಿಸಲಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 9,44,623 ಕರಡು ಮತದಾರರಿದ್ದು ಈ ಮಾಹಿತಿಯನ್ನು ಗಣತಿ ನಮೂನೆಗಳ ಮೂಲಕ ಸ್ವೀಕರಿಸಿ ಡಿಜಿಟಲೀಕರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಪ್ರಭು ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್ಐಆರ್-2026ರ ಪ್ರಗತಿ ಹಾಗೂ ಚುನಾವಣಾ ಸಂಬಂಧಿತ ವಿಷಯಗಳ ಕುರಿತು ಮಾಹಿತಿ ನೀಡಿ ಮಾತನಾಡಿ, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 10,69,504 ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿತ್ತು. ಈ ಪೈಕಿ ಆಗಸ್ಟ್ 17ರವರೆಗೆ 9,44,623 ಮತದಾರರ ಗಣತಿ ನಮೂನೆಗಳ ಮಾಹಿತಿಯನ್ನು ಸ್ವೀಕರಿಸಿ ಬಿಎಲ್ ಒ ಆ್ಯಪ್ ಮೂಲಕ ಅಪ್‌ಡೇಟ್ ಮಾಡಲಾಗಿದೆ. ಗೌರಿಬಿದನೂರು ಕ್ಷೇತ್ರದಲ್ಲಿ 1,89,197, ಬಾಗೇಪಲ್ಲಿಯಲ್ಲಿ 1,83,728, ಚಿಕ್ಕಬಳ್ಳಾಪುರದಲ್ಲಿ 1,91,567, ಶಿಡ್ಲಘಟ್ಟದಲ್ಲಿ 1,84,975 ಹಾಗೂ ಚಿಂತಾಮಣಿ ಕ್ಷೇತ್ರದಲ್ಲಿ 1,95,156 ಮತದಾರರ ಮಾಹಿತಿಯನ್ನು ಡಿಜಿಟಲೀಕರಣ ಮಾಡಲಾಗಿದೆ. ಕರಡು ಪಟ್ಟಿಯನ್ನು ಸಂಬಂಧಪಟ್ಟ ಎಲ್ಲ ಮತಗಟ್ಟೆಗಳು, ಗ್ರಾಮ ಪಂಚಾಯಿತಿ ಕಚೇರಿಗಳು, ಸಹಾಯಕ ಮತದಾರ ನೋಂದಣಾಧಿಕಾರಿಗಳ ಕಚೇರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಾಗುವಂತೆ ಪ್ರಕಟ ಮಾಡಲಾಗಿದೆ ಎಂದು ಹೇಳಿದರು.
ಕರಡು ಪಟ್ಟಿಯಲ್ಲಿರುವ 9,44,623 ಮತದಾರರ ಪೈಕಿ 4,68,325 ಪುರುಷರು, 4,76,255 ಮಹಿಳೆಯರು ಹಾಗೂ 43 ಇತರೆ ಮತದಾರರಿದ್ದಾರೆ. ಇದೇ ವೇಳೆ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಒಟ್ಟು 218 ಸೇವಾ ಮತದಾರರ ಕರಡು ಪಟ್ಟಿಯನ್ನೂ ಸಹ ಪ್ರಕಟಿಸಲಾಗಿದೆ ಎಂದರು.
ಸೆ. 23 ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ:
ಜಿಲ್ಲೆಯಲ್ಲಿ ಪ್ರಕಟವಾಗಿರುವ ಕರಡು ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಇಂದಿನಿಂದ ಸೆಪ್ಟೆಂಬರ್ 23 ರವರೆಗೆ ಅವಕಾಶವಿದ್ದು, ಎಸ್ಐಆರ್ -2026ರ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ತಮ್ಮ ಹೆಸರು, ವಿಳಾಸ ಹಾಗೂ ಮತದಾರರ ವಿವರಗಳನ್ನು ಪರಿಶೀಲಿಸಿ, ಯಾವುದೇ ಲೋಪ ಕಂಡುಬಂದಲ್ಲಿ ನಿಗದಿತ ಅವಧಿಯೊಳಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಅವರು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಸಂಬಂಧ ನೋಟಿಸ್ ನೀಡಿ ವಿಚಾರಣೆ ಹಾಗೂ ವಿಲೇವಾರಿ ಪ್ರಕ್ರಿಯೆಯನ್ನು ಅಕ್ಟೋಬರ್ 22 ರವರೆಗೆ ಕೈಗೊಳ್ಳಲಾಗುತ್ತಿದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.
ಗಣತಿ ನಮೂನೆಗಳನ್ನು ಹಿಂತಿರುಗಿಸದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ 1,24,881 ಮತದಾರರನ್ನು ಎಎಸ್ ಡಿಡಿಒ ವರ್ಗಕ್ಕೆ ಗುರುತಿಸಲಾಗಿದ್ದು, ಇವರಲ್ಲಿ 28,814 ಮಂದಿ ಮೃತರು, 78,380 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 9,836 ಮಂದಿ ಈಗಾಗಲೇ ಬೇರೆಡೆ ನೋಂದಾಯಿತರಾಗಿರುವವರು ಹಾಗೂ 7,844 ಮಂದಿ ಗೈರುಹಾಜರಾಗಿರುವವರು ಎಂದು ಗುರುತಿಸಲಾಗಿದೆ. ಅಲ್ಲದೆ 7 ಮಂದಿಯನ್ನು ಇತರೆ ವರ್ಗದಲ್ಲಿ ಗುರುತಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 43,173 ಅನಾಮಲಿ ಹಾಗೂ 11,670 ನೋ-ಮ್ಯಾಪಿಂಗ್ ಪ್ರಕರಣಗಳೆಂದು ಗುರ್ತಿಸಲಾಗಿದೆ. ಇವರಿಗೆ ಸಂಬಂಧಪಟ್ಟ ಬಿಎಲ್ಒ ಗಳ ಮೂಲಕ ನೋಟಿಸ್ ಜಾರಿಗೊಳಿಸಿ, ವಿಚಾರಣೆ ನಡೆಸಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ನಂತರ ನಿಯಮಾನುಸಾರ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಅಥವಾ ಇತರೆ ತಿದ್ದುಪಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೊಸ ಮತದಾರರ ಸೇರ್ಪಡೆಗೆ 2026ರ ಅಕ್ಟೋಬರ್ ಮೊದಲ ವಾರದವರೆಗೆ ಅವಕಾಶವಿರುತ್ತದೆ. ಈಗಾಗಲೇ 18 ಸಾವಿರಕ್ಕೂ ಹೆಚ್ಚು ಯುವ ಮತದಾರರು ನಿಗದಿತ ಅರ್ಜಿ ನಮೂನೆಯನ್ನು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಸಲ್ಲಿಸಿರುತ್ತಾರೆ. ಅಕ್ಟೋಬರ್ ಮೊದಲನೆ ವಾರದ ವರೆಗೆ ಅರ್ಹರಾಗುವ ಯುವ ಮತದಾರರು ಸಹ ಪಟ್ಟಿ ಸೇರ್ಪಡೆಗಾಗಿ ಸ್ಥಳೀಯ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ಜಿಲ್ಲೆಯಲ್ಲಿ ಪ್ರಕಟವಾಗಿರುವ ಕರಡು ಮತದಾರರ ಪಟ್ಟಿಯ ಬಂಡಲ್ ಗಳನ್ನು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳೆ ಖುದ್ದಾಗಿ ವಿತರಣೆ ಮಾಡಿದರು.
ಕಾಂಗ್ರೆಸ್ ಪಕ್ಷದ ಪ್ರತಿನಿಧಿ ಎಲ್. ಮಧುಸೂದನ್, ಬಿಜೆಪಿ ಪ್ರತಿನಿಧಿ ಲಕ್ಷ್ಮೀ ನಾರಾಯಣಗುಪ್ತ, ಜಿ.ನಾರಾಯಣಸ್ವಾಮಿ, ಜೆಡಿಎಸ್ ಪಕ್ಷದ ಪ್ರತಿನಿಧಿ ಬಿ.ಎನ್.ಮುನಿಯಪ್ಪ, ಬಹುಜನ ಸಮಾಜ ಪಕ್ಷದ ಪ್ರತಿನಿಧಿ ಡಾ. ದ್ಯಾವಪ್ಪ, ನ್ಯಾಷನಲ್ ಪೀಪಲ್ಸ್ ಪಕ್ಷದ ಪ್ರತಿನಿಧಿ ಚಂದ್ರಶೇಖರ್, ಕಮ್ಯೂನಿಷ್ಟ್ ಪಕ್ಷದ ಪ್ರತಿನಿಧಿ ಮುನಿಕೃಷ್ಣಪ್ಪ, ಜಿ.ಸಿದ್ದಗಂಗಪ್ಪ ರವರು ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಂದ ಸ್ವೀಕರಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಆರ್. ಮಂಜುನಾಥ, ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.