ಕನ್ನಡಪ್ರಭ ವಾರ್ತೆ ಬೆಂಗಳೂರು
ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರೇ ನೀಡುತ್ತಿರುವ ಆಂತರಿಕ ಮಾಹಿತಿ ಪ್ರಕಾರ, ಹಲವು ಬಹುರಾಷ್ಟ್ರೀಯ ಹಾಗೂ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ತೀವ್ರ ತಾರತಮ್ಯ ಮಾಡಲಾಗುತ್ತಿದೆ. ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಕಂಪನಿಯೊಂದರಲ್ಲಿ ಶೇ.75 ರಷ್ಟು ಹಿಂದಿ ಭಾಷಿಕರು ಹಾಗೂ ಶೇ.25ರಷ್ಟು ತೆಲುಗು ಭಾಷಿಕರಿದ್ದು, ಕನ್ನಡಿಗರಿಗೆ ಸ್ಥಳವೇ ಇಲ್ಲ. ಇನ್ನು ಕೆಲವೆಡೆ ಶೇ.80ರಷ್ಟು ಪರಭಾಷಿಕರಿದ್ದರೆ ಕನ್ನಡಿಗರ ಸಂಖ್ಯೆ ಶೇ.10ರಿಂದ 20ರಷ್ಟು ಮಾತ್ರ. ಇನ್ನು ಕೆಲ ಕಂಪನಿಗಳಲ್ಲಿರುವ ಕನ್ನಡಿಗರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಖಾಸಗಿ ಮತ್ತು ಐಟಿಬಿಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕೆಲ ನೌಕರರು ಈ ಕುರಿತು ತಮ್ಮ ಅನುಭವ ಹಂಚಿಕೊಂಡಿರುವ ದಾಖಲೆಗಳು ಮತ್ತು ಮಾಹಿತಿಗಳು ಲಭ್ಯವಾಗಿವೆ ಎಂದು ಎಂದು ಕರವೇ ಮಾಹಿತಿ ನೀಡಿದೆ.
ಆಂತರಿಕ ಮೂಲದಿಂದ ಮಾಹಿತಿ ಸಂಗ್ರಹ:ಕರವೇ ಆಗ್ರಹ ಅಭಿಯಾನದಲ್ಲಿ ಕೇವಲ ಭೌತಿಕ ಭೇಟಿಯಷ್ಟೇ ಅಲ್ಲದೆ, ಯಾವುದೇ ಕಂಪನಿಗಳು ತಪ್ಪಿಸಿಕೊಳ್ಳದಂತೆ ಎಚ್ಚರವಹಿಸಿ ರಾಜ್ಯದಲ್ಲಿರುವ ಸುಮಾರು 2 ಸಾವಿರಕ್ಕೂ ಅಧಿಕ ಖಾಸಗಿ ಕಂಪನಿಗಳ ಇ-ಮೇಲ್ ವಿಳಾಸಗಳನ್ನು ಸಂಗ್ರಹಿಸಲಾಗುತ್ತಿದೆ. ಎಲ್ಲಾ ಕಂಪನಿಗಳಿಗೂ ಅಧಿಕೃತ ಪತ್ರ ರವಾನಿಸಿ ಸ್ಥಳೀಯ ಉದ್ಯೋಗಿಗಳ ಪ್ರಮಾಣದ ವಿವರ ನೀಡುವಂತೆ ಕೋರಲಾಗುತ್ತಿದೆ. ಕೆಲ ಕಂಪನಿಗಳು ಮಾಹಿತಿ ನೀಡಲು ನಿರಾಕರಿಸಿದರೂ ಅಥವಾ ಕಾಲಾವಕಾಶ ಕೇಳಿದರೂ, ಆಂತರಿಕ ಮೂಲಗಳಿಂದ ನೈಜ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಕರವೇ ನಡೆಸುತ್ತಿರುವ ಅಭಿಯಾನದಲ್ಲಿ ಅಪಪ್ರಚಾರಗಳಿಗೆ ಆಸ್ಪದ ನೀಡದಂತೆ ಎಚ್ಚರವಹಿಸಿ, ಬೆಂಗಳೂರಿನಲ್ಲಿ ತಲಾ 10 ಜನರ ನಿಯಂತ್ರಿತ ತಂಡಗಳನ್ನು ರಚಿಸಿ ಐಟಿಬಿಟಿ ಕಂಪನಿಗಳ ಕಚೇರಿಗಳಿಗೆ ಭೇಟಿ ನೀಡಿ ಆಗ್ರಹಪತ್ರ ನೀಡಲಾಗುತ್ತಿದೆ. ಬೆಂಗಳೂರಿನ ನಂತರ ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ದಾವಣಗೆರೆ, ಕೊಪ್ಪಳ ಸೇರಿ ಇತರ ಜಿಲ್ಲೆಗಳಲ್ಲೂ ತಂಡಗಳು ಕೆಲಸ ಆರಂಭಿಸಿದ್ದು, ಹಬ್ಬದ ಬಳಿಕ ಈ ಅಭಿಯಾನ ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ನವೆಂಬರ್ ತಿಂಗಳು ಪೂರ್ತಿ ಸಮೀಕ್ಷೆ ನಡೆಸಿ, ತಿಂಗಳ ಅಂತ್ಯದೊಳಗೆ ದತ್ತಾಂಶ ಕ್ರೋಢೀಕರಿಸಲಾಗುವುದು. ಡಿಸೆಂಬರ್ ಮೊದಲ ಅಥವಾ 2ನೇ ವಾರದಲ್ಲಿ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಕರವೇ ತೀರ್ಮಾನಿಸಿವೆ. ಜೊತೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ‘ಖಾಸಗಿ ಹಾಗೂ ಸಾರ್ವಜನಿಕ ವಲಯದಲ್ಲಿ ಕನ್ನಡಿಗರಿಗೆ ಶೇ. 80 ರಷ್ಟು ಉದ್ಯೋಗ ಮೀಸಲಾತಿ’ ಭರವಸೆ ಈಡೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ. ಈ ಹಿಂದೆ ನಂದಿನಿ ವಿಚಾರದಲ್ಲಿ ಕನ್ನಡಿಗರ ಭಾವನೆಗಳು ಚುನಾವಣೆಯಲ್ಲಿ ಪ್ರಭಾವ ಬೀರಿದಂತೆಯೇ, ಉದ್ಯೋಗ ಮೀಸಲಾತಿ ವಿಚಾರದಲ್ಲೂ ಕನ್ನಡಿಗರ ಹಿತ ಕಡೆಗಣಿಸಿದರೆ ರಾಜಕೀಯವಾಗಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.