ಜಿಲ್ಲಾಡಳಿತದ ಐದು ಲಕ್ಷ ಗಿಡ ನೆಡುವ ಯೋಜನೆಗೆ ಎದುರಾದ ಸಂಕಷ್ಟ । ವೆಂಕಟೇಶ್ ಮೂರ್ತಿ ಬೇಸರ
ಪರಿಸರ ಸಂರಕ್ಷಣೆ ಮತ್ತು ಹಸಿರೀಕರಣದ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ಕೈಗೊಂಡಿರುವ ಐದು ಲಕ್ಷ ಗಿಡಗಳನ್ನು ನೆಟ್ಟು ಪೋಷಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಅರಣ್ಯ ಇಲಾಖೆಯಲ್ಲೇ ಸಸಿ ಕೊರತೆ ಎದುರಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಹಸಿರು ಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್. ಪಿ. ವೆಂಕಟೇಶ್ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಹಸಿರೀಕರಣ ಅಭಿಯಾನಕ್ಕೆ ಅಗತ್ಯವಿರುವ ಸಸಿಗಳು ತಮ್ಮ ಬಳಿ ಲಭ್ಯವಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ದೇಶಾದ್ಯಂತ ಗಂಭೀರವಾಗಿ ಕಾಣಿಸಿಕೊಳ್ಳುತ್ತಿದೆ. ಪರಿಸರ ತಜ್ಞರ ಪ್ರಕಾರ ಜಗತ್ತಿನ ತೀವ್ರ ತಾಪಮಾನ ಹೆಚ್ಚುತ್ತಿರುವ ನೂರು ನಗರಗಳಲ್ಲಿ ಸುಮಾರು 90 ನಗರಗಳು ಭಾರತದಲ್ಲಿಯೇ ಇವೆ. ಈ ಬಾರಿ ಬೇಸಿಗೆಯಲ್ಲಿ ದೇಶದ ಅನೇಕ ನಗರಗಳಲ್ಲಿ 45 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣಾಂಶ ದಾಖಲಾಗಿತ್ತು. ಕರ್ನಾಟಕದಲ್ಲಿಯೂ ಉರಿ ಬಿಸಿಲಿನ ತೀವ್ರತೆ ಹೆಚ್ಚಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಪರಿಸರ ಹದಗೆಡುವುದಕ್ಕೆ ಅರಣ್ಯ ನಾಶ, ಜಲಮೂಲಗಳ ಒಣಗುವಿಕೆ, ನಗರೀಕರಣ, ಕಾಂಕ್ರೀಟ್ ಕಟ್ಟಡಗಳ ಹೆಚ್ಚಳ, ಹೆದ್ದಾರಿಗಳು ಮತ್ತು ಫ್ಲೈ ಓವರ್ ನಿರ್ಮಾಣಕ್ಕಾಗಿ ಮರಗಳ ಕಡಿತ, ವಾಹನಗಳ ಹೊಗೆ, ಕೈಗಾರಿಕೆಗಳಿಂದ ಹೊರಬರುವ ಮಾಲಿನ್ಯ ಪ್ರಮುಖ ಕಾರಣಗಳಾಗಿವೆ. ಹೀಗಾಗಿ ಪರಿಸರ ಸಂರಕ್ಷಣೆಗಾಗಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದು ಮತ್ತು ಅವುಗಳನ್ನು ಪೋಷಿಸುವುದು ಅತ್ಯಗತ್ಯವಾಗಿದೆ ಎಂದರು.ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಐದು ಲಕ್ಷ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ರಮ ಕೈಗೊಂಡಿದೆ. ವಿವಿಧ ಸರ್ಕಾರಿ ಇಲಾಖೆಗಳು, ಶಾಲಾ ಕಾಲೇಜುಗಳು, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರನ್ನು ಈ ಅಭಿಯಾನದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಲಾಗುತ್ತಿದೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ಹಸಿರೀಕರಣ ಕಾರ್ಯಕ್ರಮಕ್ಕೆ ಅಗತ್ಯವಾದ ಸಸಿಗಳೇ ಅರಣ್ಯ ಇಲಾಖೆಯಲ್ಲಿಲ್ಲ ಎಂಬುದು ಯೋಜನೆಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯನ್ನು ಉಂಟುಮಾಡಿದೆ. ಜಿಲ್ಲಾಡಳಿತ ಸಸಿಗಳ ಬೇಡಿಕೆ ಸಲ್ಲಿಸಿದಾಗ, ಅಗತ್ಯ ಪ್ರಮಾಣದ ಗಿಡಗಳು ಲಭ್ಯವಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪತ್ರ ಬರೆದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಅವರು ಈ ಗಂಭೀರ ಸಮಸ್ಯೆಯ ಕಡೆ ತಕ್ಷಣ ಗಮನ ಹರಿಸಬೇಕೆಂದು ಆಗ್ರಹಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಸಿರೀಕರಣ ಅಭಿಯಾನಗಳನ್ನು ಯಶಸ್ವಿಗೊಳಿಸಲು ಎಂದು ಒತ್ತಾಯಿಸಿದರು.