ಬಳ್ಳಾರಿ: ಬಿಸಿಲೂರು ಖ್ಯಾತಿಯ ಬಳ್ಳಾರಿಯಲ್ಲಿ ಮಂಗಳವಾರ ಸಂಜೆ ಸುಮಾರು ಒಂದು ಗಂಟೆಗೂ ಅಧಿಕ ಹೊತ್ತು ಗುಡುಗು, ಸಿಡಿಲಿನ ರಭಸದ ಮಳೆ ಸುರಿಯಿತು.

ಸಿಡಿಲು, ಗುಡುಗು, ಗಾಳಿಯೊಂದಿಗೆ ಬಳ್ಳಾರಿಯತ್ತ ಮುಖವೊಡ್ಡಿದ ವರುಣನ ಆರ್ಭಟಕ್ಕೆ ಸುಮಾರು 500ಕ್ಕೂ ಅಧಿಕ ಮರಗಳು ಹಾಗೂ 76 ವಿದ್ಯುತ್ ಕಂಬಗಳು ಧರೆಗುಳಿದವು. ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆ ತುಂತುರು ಮಳೆಯಾಗಿದ್ದು, ಬಳ್ಳಾರಿಯಲ್ಲಿ ಅತಿ ಹೆಚ್ಚು 46 ಮಿ.ಮೀ. ಮಳೆಯಾಗಿದೆ. ಸಂಡೂರು 2 ಮಿ.ಮೀ, ಕುರುಗೋಡು 1.8 ಮಿ.ಮೀ, ಸಿರುಗುಪ್ಪ 1 ಮಿ.ಮೀ ಹಾಗೂ ಕಂಪ್ಲಿ ತಾಲೂಕಿನಲ್ಲಿ 1.5 ಮಿ.ಮೀ ಮಳೆಯಾದ ವರದಿಯಾಗಿದೆ.

ನೆಲಕ್ಕುರುಳಿದ ಮರಗಳು

ಮಳೆ-ಗಾಳಿಗೆ ಮರಗಳು ನೆಲಕ್ಕುರುಳಿದ್ದರಿಂದ ನಗರದ ಅನೇಕ ಕಡೆಗಳಲ್ಲಿ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಇಲ್ಲಿನ ಎಸ್ಪಿ ವೃತ್ತದ ಬಳಿಯ ಮಾರುತಿ ನಗರದಲ್ಲಿ ಬೃಹತ್ ಮರವೊಂದು ನೆಲಕ್ಕುರುಳಿದ್ದು, ಮರದ ಕೆಳಗಿದ್ದ ಕಾರ್ ಸಂಪೂರ್ಣ ಜಖಂಗೊಂಡಿದೆ. ಪಾರ್ವತಿ ನಗರದ ಬಸವಭವನದ ಬಳಿ ಮರವೊಂದು ಉರುಳಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದರಿಂದ ವಾಹನ ಸವಾರರು ಆತಂಕದಲ್ಲಿಯೇ ಓಡಾಡುವಂತಾಯಿತು. ಬಸವೇಶ್ವರನಗರ 2ನೇ ಕ್ರಾಸ್, ವೀರನಗೌಡ ಕಾಲನಿ, ವಾಜಪೇಯಿ ಬಡಾವಣೆ, ಬ್ಯಾಂಕರ್ಸ್ ಕಾಲನಿ, ಐಶ್ವರ್ಯ ನಗರ, ಇಂದಿರಾನಗರ, ವಿದ್ಯಾನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಹತ್ತಾರು ಮರಗಳು ನೆಲಕ್ಕುರುಳಿದ ವರದಿಯಾಗಿದೆ.

ಪಾಲಿಕೆ ಆಯುಕ್ತ ಭೇಟಿ, ಪರಿಶೀಲನೆ


ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಅವರು ನಗರದ ನಾನಾ ಕಡೆ ಸಂಚರಿಸಿ ಪರಿಶೀಲನೆ ನಡೆಸಿದರಲ್ಲದೆ, ಮರಗಳ ತೆರವಿಗೆ ಕ್ರಮ ಕೈಗೊಂಡರು. ವಿದ್ಯುತ್ ಕಂಬಗಳು ಹಾಗೂ ಮರಗಳಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಹಾನಿಯಾಗದಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರು ಸಂಬಂಧಿಸಿದ ಸಿಬ್ಬಂದಿಗೆ ಸೂಚನೆ ನೀಡಿದರು. ಅನೇಕ ಕಾಲೋನಿಗಳಲ್ಲಿ ವಿದ್ಯುತ್‌ ಕಂಬಗಳು, ಪರಿವರ್ತಕಗಳು ಗಾಳಿಗೆ ಬಿದ್ದ ಪರಿಣಾಮ ಜೆಸ್ಕಾಂ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತರಾಗಿ ಕಂಬ ತೆರವಿನೊಂದಿಗೆ ಹೊಸ ಕಂಬ, ಪರಿವರ್ತಕಗಳ ಅಳವಡಿಕೆ ಕಾರ್ಯಕ್ಕೆ ಮುಂದಾದರು.

ಸತತ ಸುಮಾರು 1 ಗಂಟೆಗೂ ಅಧಿಕ ಹೊತ್ತು ಸುರಿದ ಮಳೆಯಿಂದ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡವು. ಬಿರುಸಿನ ಮಳೆಯಿಂದ ತೆಗ್ಗು ಪ್ರದೇಶಗಳ ಕುಟುಂಬಗಳ ಮನೆಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು. ಮನೆಗಳಲ್ಲಿನ ಪಡಿತರ, ಅಡುಗೆ ಸಾಮಗ್ರಿಗಳು, ಬಟ್ಟೆಗಳು ನೀರಿನಲ್ಲಿ ತೇಲಾಡುವಂತಾಗಿತ್ತು. ಮನೆಯಲ್ಲಿದ್ದ ನೀರನ್ನು ಕುಟುಂಬಸ್ಥರು ಹೊರ ಹಾಕುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಇದಲ್ಲದೆ, ವ್ಯಾಪಾರ ಮಳಿಗೆಗಳಲ್ಲಿನ ಕೆಳ ಮಳಿಗೆಯಲ್ಲಿನೀರು ಸಂಗ್ರಹಗೊಂಡು ವಾಹನಗಳನ್ನು ಹೊರ ತೆಗೆಯಲು ಹರಸಾಹಸಪಟ್ಟರು.

ಬಿಸಿಲಿನಿಂದ ಬಳಲಿದ್ದ ಬಳ್ಳಾರಿ ಜನತೆಗೆ ಮಂಗಳವಾರ ಸಂಜೆ ಸುರಿದ ಮಳೆ ತಂಪೆರೆಯಿತಲ್ಲದೆ, ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದರಿಂದ ವಿದ್ಯುತ್ ಸ್ಥಗಿತಗೊಂಡು ಇಡೀ ನಗರ ಕತ್ತಲಿಗೆ ವಾಲಿತು.