ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ2019ರಲ್ಲಿ ಕೇವಲ 16 ಮಕ್ಕಳಿದ್ದು, ಮುಚ್ಚುವ ಹಂತದಲ್ಲಿದ್ದ ತಾಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೀಗ ಬರೋಬ್ಬರಿ 180 ಮಕ್ಕಳು ಓದುತ್ತಿದ್ದಾರೆ. ವಿದ್ಯಾರ್ಥಿಗಳ ಕೊರತೆಯಿಂದಾಗಿ ಇತಿಹಾಸದ ಪುಟ ಸೇರಬೇಕಿದ್ದ ಶಾಲೆಯೊಂದು ಹೊಸ ಇತಿಹಾಸ ನಿರ್ಮಿಸಿದೆ.
65 ವರ್ಷಗಳ ಇತಿಹಾಸವನ್ನು ಹೊಂದಿರುವ ಕೂಕ್ರಬೆಟ್ಟು ಶಾಲೆ ನಾಲ್ಕು ವರ್ಷಗಳ ಹಿಂದೆ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿತ್ತು. 1ರಿಂದ 7ನೇ ತರಗತಿ ಹೊಂದಿರುವ ಶಾಲೆಯಲ್ಲಿ ಕೆಲವು ತರಗತಿಗಳು ಮಕ್ಕಳಿಲ್ಲದೆ ಖಾಲಿಯಿದ್ದವು. ಈ ಹಂತದಲ್ಲಿ ಹಳೆವಿದ್ಯಾರ್ಥಿಗಳು ಶಾಲೆಯಲ್ಲಿ ಸಭೆ ಸೇರಿ, ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಅವರನ್ನು ಸಂಪರ್ಕಿಸಿ ಶಾಲೆಗೆ ಆಹ್ವಾನಿಸಿದರು.ಬಂಟ್ವಾಳ ತಾಲೂಕಿನ ದಡ್ಡಲಕಾಡಿನಲ್ಲಿ ಮುಚ್ಚುವ ಹಂತದಲ್ಲಿದ್ದ ಶಾಲೆಗೆ ಮರುಜೀವ ನೀಡಿದ್ದ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಪ್ರಕಾಶ್ ಅಂಚನ್ ಅವರು 2019 ಫೆಬ್ರುವರಿ 2ರಂದು ತಮ್ಮ ತಂಡದೊಂದಿಗೆ ಮರೋಡಿಗೆ ಬಂದರು. ಗ್ರಾಮದ ಮನೆಮನೆಗೆ ಖುದ್ದಾಗಿ ಭೇಟಿ ನೀಡಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿದರು. ಅಂದು ಶಾಲೆಯಲ್ಲೇ ವಾಸ್ತವ್ಯ ಹೂಡಿ ಶಾಲೆಯು ಈ ಸ್ಥಿತಿಗೆ ತಲುಪಲು ಕಾರಣವಾದ ಅಂಶ ಮತ್ತು ಉಳಿಸಲು ಮಾಡಬೇಕಾದ ಯೋಜನೆ ರೂಪಿಸಿದರು.
ಸಮಿತಿ ರಚನೆ: ಮರುದಿನ ಶಾಲೆಯಲ್ಲಿ ಗ್ರಾಮಸ್ಥರ ಸಭೆ ಕರೆದು ಶಾಲೆ ಉಳಿಸಬೇಕಾದ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿ, ಸ್ಥಳೀಯವಾಗಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ರಚಿಸಲಾಯಿತು. ಸಭೆಯಲ್ಲಿ 40ಕ್ಕೂ ಅಧಿಕ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಯಿಂದ ಕೂಕ್ರಬೆಟ್ಟು ಶಾಲೆಗೆ ದಾಖಲಿಸುವ ಭರವಸೆ ನೀಡಿದರು. ಈ ಮೂಲಕ ಮುಚ್ಚಬೇಕಿದ್ದ ಶಾಲೆಗೆ ಶಾಲೆಗೆ ಮರುಜೀವ ದೊರಕಿತ್ತು.ನಂತರದಲ್ಲಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಶಿಕ್ಷಣಾಭಿಮಾನಿಗಳು, ಜನಪ್ರತಿನಿಧಿಗಳು, ದಾನಿಗಳು ಮತ್ತು ಮಕ್ಕಳ ಪೋಷಕರ ಪ್ರಯತ್ನದಿಂದ ಹಂತಹಂತವಾಗಿ ಶಾಲೆಯು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಈ ಹಿಂದೆ ಮರೋಡಿಯ ಒಂದು ಭಾಗಕ್ಕಷ್ಟೇ ಸೀಮಿತವಾಗಿದ್ದ ಈ ಶಾಲೆಯಲ್ಲಿ ಇಂದು ಮರೋಡಿ ಮಾತ್ರವಲ್ಲದೆ ಸುತ್ತಮುತ್ತಲಿನ ಪೆರಾಡಿ, ಕಾಶಿಪಟ್ಣ, ಕೊಕ್ರಾಡಿ, ಸಾವ್ಯ, ಕುತ್ಲೂರು, ನಾರಾವಿ, ಶಿರ್ತಾಡಿ ಮತ್ತಿತರ ಗ್ರಾಮಗಳ ಮಕ್ಕಳು ಕಲಿಯುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳು: ನಂತರದಲ್ಲಿ ಶಾಲೆಯನ್ನು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್‌ನಿಂದ ದತ್ತು ಪಡೆಯಲಾಯಿತು. ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲಾಯಿತು. ಕನ್ನಡದೊಂದಿಗೆ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅನುಮತಿ ಪಡೆಯಲಾಯಿತು. ಹೆಚ್ಚುವರಿ ಗೌರವ ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಯಿತು. ಜತೆಗೆ ಶಾಲೆಯಲ್ಲಿ ಯೋಗ, ಕರಾಟೆ, ನೃತ್ಯ, ಯಕ್ಷಗಾನ ಮುಂತಾದ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಯಿತು. ಟ್ರಸ್ಟ್ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.ದಾನಿಗಳ ನೆರವಿನಿಂದ ಶಾಲೆಗೆ ಬೇಕಾದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಯಿತು. ಇದರ ಫಲವಾಗಿ ಶಾಲೆಯಲ್ಲಿ 2020ರ ವೇಳೆಗೆ ಮಕ್ಕಳ ಸಂಖ್ಯೆ 80ಕ್ಕೆ ಏರಿದರೆ, 2021ಕ್ಕೆ 120ಕ್ಕೆ ಹೆಚ್ಚಾಗಿದೆ. ಅಂತೆಯೇ 2022ರಲ್ಲಿ 140 ದಾಟಿದರೆ, 2023ರಲ್ಲಿ180 ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. ಶಾಲೆಯಲ್ಲಿ ಪ್ರಸ್ತುತ ಮುಖ್ಯಶಿಕ್ಷಕಿ ಸೇರಿದಂತೆ ನಾಲ್ವರು ಕಾಯಂ ಶಿಕ್ಷಕಿಯರು, ಮೂರು ಅತಿಥಿ ಶಿಕ್ಷಕಿಯರು ಮತ್ತು ಮೂವರು ಗೌರವ ಶಿಕ್ಷಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸ್ಮಾರ್ಟ್ ಕ್ಲಾಸ್ ಸೌಲಭ್ಯ: ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ ಯೋಜನೆಯಡಿ ಐಇಇಇ ಅಡ್ವಾನ್ಸಿಂಗ್ ಟೆಕ್ನಾಲಜಿ ಫಾರ್ ಹ್ಯೂಮಾನಿಟಿ ಸಂಸ್ಥೆಯಿಂದ ಕೂಕ್ರಬೆಟ್ಟು ಶಾಲೆಗೆ ಸುಮಾರು 2.40 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲಾಗಿದೆ. ಎಂಆರ್‌ಪಿಎಲ್‌ನ ಸಿಎಸ್‌ಆರ್ ನಿಧಿಯಲ್ಲಿ 10 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗಿದೆ. ನೂತನ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ 2 ಲಕ್ಷ ರುಪಾಯಿ ಒದಗಿಸಲಾಗಿದೆ.ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಅಧ್ಯಕ್ಷ ಜಯಂತ ಕೋಟ್ಯಾನ್ ಮಾತನಾಡಿ, ಮುಚ್ಚುವ ಹಂತದಲ್ಲಿದ್ದ ಕೂಕ್ರಬೆಟ್ಟು ಶಾಲೆಗೆ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಎಲ್ಲರ ಸಹಕಾರದಿಂದ ಕಾಯಕಲ್ಪ ನೀಡಲಾಗಿದೆ. ನಾಲ್ಕು ವರ್ಷದಲ್ಲಿ ಮಕ್ಕಳ ಸಂಖ್ಯೆ 11 ಪಟ್ಟು ಹೆಚ್ಚಾಗಿದೆ. ಶಾಸಕ ಹರೀಶ್ ಪೂಂಜ ಹಾಗೂ ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಅನುದಾನದಲ್ಲಿ ಎಂಟು ಕೊಠಡಿಗಳ ಕಟ್ಟಡ ನಿರ್ಮಿಸಲಾಗಿದೆ. ಸಂಘಸಂಸ್ಥೆ, ದಾನಿಗಳ ಸಹಕಾರದಿಂದ ಶಾಲೆಗೆ ಬೇಕಾದ ಮೂಲಸೌಕರ್ಯಗಳನ್ನು ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.