ಚರ್ಮವಾದ್ಯಗಳ ಸದ್ದು ಕೇಳುವವರುಂಟು, ಕೊಳ್ಳುವವರಿಲ್ಲ!

KannadaprabhaNewsNetwork |  
Published : Dec 05, 2025, 12:45 AM IST
554656 | Kannada Prabha

ಸಾರಾಂಶ

ಹಾರ್ಮೋನಿಯಂ, ಚರ್ಮವಾದ್ಯಗಳು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಭಜನಾ ಸಂಘ, ನಾಟ್ಯ ಸಂಘ, ಸಂಗೀತ ಕಛೇರಿಗಳಲ್ಲಿ ಇವುಗಳಿಂದ ಹೊರಡುವ ನಾದಸ್ವರಗಳು ಕೇಳುವುದೇ ಇಂಪು. ಆದರೆ, ಕಲಿಕಾಸಕ್ತಿ ಕುಸಿತವಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಆಧುನಿಕತೆ ಭರಾಟೆಯಲ್ಲೂ ಮೊಬೈಲ್‌ಗಳಲ್ಲೂ ತಬಲಾ, ಮೃದಂಗ, ಡೋಲಕ್‌ಗಳ ಸದ್ದು ಕೇಳುವವರುಂಟು. ಆದರೆ, ಕಲಿಕಾಸಕ್ತರ ಸಂಖ್ಯೆ ತೀವ್ರ ಕುಸಿತವಾಗಿದ್ದು ಚರ್ಮವಾದ್ಯಗಳ ಮಾರಾಟವನ್ನೇ ಜೀವನವಾಗಿಸಿಕೊಂಡಿದ್ದ ಹಳೇಹುಬ್ಬಳ್ಳಿಯ ಸುರೇಶ ಬಗರಿಕಾರ ಕುಟುಂಬ ವ್ಯಾಪಾರವಿಲ್ಲದೇ ಸಂಕಷ್ಟಕ್ಕೆ ಸಿಲುಕಿದೆ.

ಹಾರ್ಮೋನಿಯಂ, ಚರ್ಮವಾದ್ಯಗಳು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಭಜನಾ ಸಂಘ, ನಾಟ್ಯ ಸಂಘ, ಸಂಗೀತ ಕಛೇರಿಗಳಲ್ಲಿ ಇವುಗಳಿಂದ ಹೊರಡುವ ನಾದಸ್ವರಗಳು ಕೇಳುವುದೇ ಇಂಪು. ಆದರೆ, ಕಲಿಕಾಸಕ್ತಿ ಕುಸಿತವಾಗಿದ್ದು, ಈ ವಾದ್ಯ ಪರಿಕರಗಳ ಮಾರಾಟಗಾರರಿಗೆ ವ್ಯಾಪಾರವೇ ಇಲ್ಲದಾಗಿದೆ.

ಸುರೇಶ ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರಿನವರು. ಇವರ ತಂದೆ ಮಾರುತಿ ಬಗರಿಕಾರ ಹಾಗೂ ಅಜ್ಜ ಗಿಡ್ಡಪ್ಪ ಬಗರಿಕಾರ ಇದೇ ವೃತ್ತಿಯಲ್ಲಿ ಜೀವನ ಕಳೆದವರು. 8-10 ವರ್ಷಗಳಿಂದ ಹಳೇ ಹುಬ್ಬಳ್ಳಿಯಲ್ಲಿ ಬಂದು ನೆಲೆಸಿರುವ ಸುರೇಶ, ತಲೆತಲಾಂತರವಾಗಿ ಬಂದಿರುವ ಚರ್ಮವಾದ್ಯ ತಯಾರಿಕೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮೊದಲು ಉತ್ತಮವಾಗಿದ್ದ ವ್ಯಾಪಾರವು ಇಂದು ಖರೀದಿಸುವವರು, ರಿಪೇರಿ ಮಾಡಿಸುವವರು ಬಾರದೆ ಇರುವುದರಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

ಕೊಳ್ಳುವವರೇ ಇಲ್ಲ:

ಇಲ್ಲಿ ತಬಲಾ, ಮೃದಂಗ, ಡೋಲಕ್‌ ಸೇರಿದಂತೆ ವಿವಿಧ ಬಗೆಬಗೆಯ ವಾದ್ಯ ತಯಾರಿಸಲಾಗುತ್ತಿದೆ. ನಾಲ್ಕೈದು ವರ್ಷಗಳ ಹಿಂದೆ ನಿತ್ಯವೂ ಎರಡ್ಮೂರು ವಾದ್ಯಗಳು ಮಾರಾಟವಾಗುತ್ತಿದ್ದವು. ಆದರೆ, ಇಂದು ತಿಂಗಳಿಗೆ ಒಂದು-ಎರಡು ಮಾರಾಟವಾಗುವುದೇ ಹೆಚ್ಚು. ಇಲ್ಲಿಗೆ ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಚಿತ್ರದುರ್ಗ, ಬೆಂಗಳೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿ ಖರೀದಿಸುತ್ತಾರೆ.

ಕಲಿಯುವವರೇ ಇಲ್ಲ:

ಮೊದಲು ಉತ್ತರ ಕರ್ನಾಟಕ ಭಾಗದಲ್ಲಿ ಸಂಗೀತ, ಚರ್ಮವಾದ್ಯ ಕಲಿಯುವವರ ಸಂಖ್ಯೆ ಹೇರಳವಾಗಿತ್ತು. ಜತೆಗೆ ಇಲ್ಲಿನ ಕಲಾವಿದರ ದೇಶ-ವಿದೇಶದಲ್ಲೂ ಹೆಸರು ಮಾಡಿದ್ದರು. ಚರ್ಮವಾದ್ಯ ನುಡಿಸುವವರಿಗೆ ಸುರೇಶ ಚಿರಪರಿಚಿತರು. ಇವರಲ್ಲಿ ಖ್ಯಾತ ತಬಲಾ ವಾದಕರಾದ ರಘುನಾಥ ನಾಕೋಡ, ಶ್ರೀಹರಿ ಜಗ್ಗಾವಿ, ಜಯತೀರ್ಥ ಪಂಚಮುಖಿ, ಡಾ. ನಾಗಲಿಂಗ ಮುರಗಿ ಸೇರಿದಂತೆ ಹಲವು ತಬಲಾ ಕಲಾವಿದರು ಇವರ ಬಳಿ ಖರೀದಿ, ರಿಪೇರಿ ಮಾಡಿಸುತ್ತಾರೆ. ಇಷ್ಟೇ ಅಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿರುವ ಚರ್ಮವಾದ್ಯ ಪರಿಕರ ಮಾರಾಟಗಾರರು, ತಬಲಾ ವಾದಕರು ಇವರ ಬಳಿಯೇ ಬಂದು ರಿಪೇರಿ ಮಾಡಿಸಿಕೊಂಡು ಹೋಗುತ್ತಾರೆ. ಇದೀಗ ಇವೆರೆಲ್ಲರೂ ಬೆಂಗಳೂರು, ಕಲ್ಕತ್ತಾ ಸೇರಿದಂತೆ ವಿವಿಧೆಡೆ ತಂಗಿದ್ದಾರೆ.

ಸುರೇಶ ಹಳೇ ಹುಬ್ಬಳ್ಳಿಯ ಆನಂದನಗರದ ಗುರುನಾಥನಗರದಲ್ಲಿ ಸುರೇಶ ತಬಲಾ ಮೇಕರ್‌ ಎಂಬ ಅಂಗಡಿಯನ್ನಿಟ್ಟುಕೊಂಡು ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಕೆಲವು ಬಾರಿ ವ್ಯಾಪಾರವಿಲ್ಲದೇ ಸಣ್ಣಪುಟ್ಟ ಸಂಗೀತ ಕಾರ್ಯಕ್ರಮಗಳಿಗೆ ಇವರೇ ತಬಲಾ ವಾದಕರಾಗಿ ಹೋಗುತ್ತಾರೆ.ತಬಲಾ ಸೇರಿದಂತೆ ಚರ್ಮವಾದ್ಯಗಳ ತಯಾರಿಕೆಯಲ್ಲಿ ಅನುಭವ ಹೊಂದಿರುವ ಸುರೇಶ ಬಗರಿಕಾರ ಅವರನ್ನು ಹೊರತುಪಡಿಸಿದರೆ ಈ ಭಾಗದಲ್ಲಿ ಬೇರ್‍ಯಾರು ಇಲ್ಲ. ಇಂತಹವರನ್ನು ಸರ್ಕಾರ ಗುರುತಿಸಿ ಬೆಳೆಸುವ ಕಾರ್ಯವಾಗಬೇಕಿದೆ.

ಡಾ. ನಾಗಲಿಂಗ ಮುರಗಿ, ತಬಲಾ ವಾದಕರುಇದೇ ವೃತ್ತಿಯನ್ನು ನಂಬಿಕೊಂಡು ನನ್ನ ಕುಟುಂಬವಿದೆ. ಸೂಕ್ತ ವ್ಯಾಪಾರವಿಲ್ಲದೇ ವೃತ್ತಿಯನ್ನೇ ಕೈಬಿಡುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಸಂಕಷ್ಟದಲ್ಲಿರುವ ನಮ್ಮಂತಹವರನ್ನು ಗುರುತಿಸಿ ಆರ್ಥಿಕವಾಗಿ ಸಹಕಾರ ನೀಡಬೇಕು.

ಸುರೇಶ ಬಗರಿಕಾರ, ಚರ್ಮವಾದ್ಯ ತಯಾರಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡೆಲ್ಲಿಯಲ್ಲಿ ಬಿಜೆಪಿ ರೆಬಲ್ಸ್‌ ಟೀಂ:ಬಿಎಲ್‌ಎಸ್‌ ಜತೆ ರಮೇಶ ಚರ್ಚೆ
ಮಳೆ, ಚಳಿ ಪರಿಣಾಮ: ಸೊಪ್ಪು, ತರಕಾರಿ ಬೆಲೆ ಏರಿಕೆ