ಇತ್ತೀಚಿಗೆ ಸಾಹಿತ್ಯದಲ್ಲಿ ವಿಮರ್ಶೆಯೇ ಇಲ್ಲವಾಗಿದೆ

KannadaprabhaNewsNetwork |  
Published : Jan 12, 2026, 03:00 AM IST
ಸಂವಾದ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಹಾರೂಗೇರಿ: ಬೆಳಗಾವಿ ಜಿಲ್ಲಾ ಮಟ್ಟದ 17 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಸಾಹಿತ್ಯ ಸಮ್ಮೇಳನದ ಗಣಿತ ಭಾಸ್ಕರ ರಾಜಾದಿತ್ಯ ವೇದಿಕೆಯಲ್ಲಿ ನಡೆದ ಸಮ್ಮೇಳನ ಸರ್ವಾಧ್ಯಕ್ಷರಾದ ಡಾ.ವಿ.ಎಸ್.ಮಾಳಿ ಅವರೊಂದಿಗೆ ಸಾಹಿತ್ಯಾಸಕ್ತರು ಸಂವಾದ ನಡೆಸಿದರು. ಸಂವಾದದಲ್ಲಿ ಸಾಹಿತ್ಯಾಸಕ್ತರು ಆಸಕ್ತಿಯಿಂದ ಭಾಗವಹಿಸಿದ್ದು, ಕೇಳುಗರ ಪ್ರಶ್ನೆಗಳಿಗೆ ಸರ್ವಾಧ್ಯಕ್ಷರು ಚುರುಕಾದ ಉತ್ತರಗಳನ್ನು ನೀಡುವ ಮೂಲಕ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಹಾರೂಗೇರಿ:

ಬೆಳಗಾವಿ ಜಿಲ್ಲಾ ಮಟ್ಟದ 17 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಸಾಹಿತ್ಯ ಸಮ್ಮೇಳನದ ಗಣಿತ ಭಾಸ್ಕರ ರಾಜಾದಿತ್ಯ ವೇದಿಕೆಯಲ್ಲಿ ನಡೆದ ಸಮ್ಮೇಳನ ಸರ್ವಾಧ್ಯಕ್ಷರಾದ ಡಾ.ವಿ.ಎಸ್.ಮಾಳಿ ಅವರೊಂದಿಗೆ ಸಾಹಿತ್ಯಾಸಕ್ತರು ಸಂವಾದ ನಡೆಸಿದರು. ಸಂವಾದದಲ್ಲಿ ಸಾಹಿತ್ಯಾಸಕ್ತರು ಆಸಕ್ತಿಯಿಂದ ಭಾಗವಹಿಸಿದ್ದು, ಕೇಳುಗರ ಪ್ರಶ್ನೆಗಳಿಗೆ ಸರ್ವಾಧ್ಯಕ್ಷರು ಚುರುಕಾದ ಉತ್ತರಗಳನ್ನು ನೀಡುವ ಮೂಲಕ ಗಮನ ಸೆಳೆದರು.ಸಾಹಿತಿ ವೀರಣ್ಣ ಮಡಿವಾಳರ ಕೇಳಿದ ಇತ್ತೀಚೆಗೆ ಪುಸ್ತಕದ ವಿಮರ್ಶೆಗೆ ವಿವೇಕ ಮತ್ತು ವಿನಯವೇ ಇಲ್ಲ. ನಿಮ್ಮ ಅಭಿಪ್ರಾಯವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ಹೌದು, ಇತ್ತೀಚಿನ ಸಾಹಿತ್ಯದಲ್ಲಿ ವಿಮರ್ಶೆ ಇಲ್ಲದಂತಾಗಿದೆ. ಯಾಕಂದರೆ ಕೆಲವು ಸಂದರ್ಭಗಳಲ್ಲಿ ವಿಮರ್ಶೆಗಳು ಒಬ್ಬ ಕವಿ ಕಾದಂಬರಿಕಾರ, ಸಾಹಿತಿಯ ಬರವಣಿಗೆಯನ್ನು ನಿಂದಿಸುವ ಮೂಲಕ ಅವರ ಸಾಹಿತ್ಯಿಕ ಬದುಕನ್ನು ಹಾಳು ಮಾಡಿದ ಹಲವಾರು ಘಟನೆಗಳು ನಡೆದಿವೆ. ವಿಮರ್ಶೆ ಎನ್ನುವುದು ಸದಾಶಯವಾಗಿರಬೇಕು. ಅದರಲ್ಲಿರುವ ಭಾವಗಳನ್ನು ಎತ್ತಿ ತೋರಿಸುತ್ತಿರಬೇಕು ಎಂದು ಹೇಳಿದರು. ಇನ್ನು, ಸಾಹಿತಿ ಡಾ.ರತ್ನ ಬಾಳಪ್ಪನವರ ಅವರ, ತಮ್ಮ ಯಾವ ಪುಸ್ತಕದಲ್ಲಿಯೂ ಮಹಿಳೆಯರ ಪರವಾಗಿ ಏಕೆ ಧ್ವನಿ ಎತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಂದರ್ಭಕ್ಕೆ ಅನುಸಾರವಾಗಿ ಮಹಿಳೆಯರ ಬಗ್ಗೆ ಮಾತನಾಡಿದ್ದೇನೆ. ಹಾಗೆ ನನ್ನ ಮೊದಲ ಡಾಕ್ಟರೇಟ್ ಸಂಶೋಧನೆಯಲ್ಲಿ ಕುಂತಿ ಮತ್ತು ದ್ರೌಪದಿಯ ಪಾತ್ರದ ಕುರಿತು ಮಹಿಳೆಯರ ಮೇಲೆ ಆದ ದೌರ್ಜನ್ಯದ ಕುರಿತು ಬರೆದಿದ್ದೇನೆ ಎಂಬುದನ್ನು ತಿಳಿಸಿದರು.ಸಾಹಿತಿ ಡಾ.ಎ.ಕೆ.ಜಯವಿರರ ಸಾಹಿತಿಗಳು ಸಾಂಸ್ಕೃತಿಕ ರಾಜಕಾರಣ ಎದುರಿಸಬೇಕಾದ ಸಂದರ್ಭ ಬಂದಿದೆ, ನಿಮ್ಮ ಅಭಿಪ್ರಾಯವೇನು? ಪ್ರಶ್ನೆಗೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದಕ್ಕೆ ಮಹತ್ವ ನೀಡಬೇಕಾಗಿತ್ತು, ಅದನ್ನು ಬಿಟ್ಟು ಬೇರೆ ವಿಷಯಗಳಿಗೆ ಹೆಚ್ಚಿನ ಮಾನ್ಯತೆ ನೀಡುತ್ತಿರುವುದು ವಿಷಾಧನೀಯವಾಗಿದೆ. ಅದನ್ನು ಮಾಧ್ಯಮಗಳು ಅಗತ್ಯವಾದ ವಿಚಾರಗಳನ್ನು ಚರ್ಚೆಗೆ ತರದೆ ಅನಗತ್ಯವಾದ ವಿಚಾರಗಳನ್ನು ಚರ್ಚೆ ಮಾಡುವ ಮೂಲಕ ನಮ್ಮೆಲ್ಲರ ಮನಸ್ಸುಗಳನ್ನು ಕೆಡಿಸಿದ್ದಾರೆ. ಯಾವಾಗ ಸಾಹಿತಿಗಳು ಕುರ್ಚಿಗಾಗಿ ಆಸೆ ಪಡದೆ ಅದನ್ನು ತ್ಯಾಗ ಮಾಡುತ್ತಾರೆ, ಆಗ ಮಾತ್ರ ಸಾಂಸ್ಕೃತಿಕ ರಾಜಕಾರಣದಿಂದ ಮುಕ್ತಿ ಹೊಂದಬಹುದು ಎಂಬುದನ್ನು ಅಧ್ಯಕ್ಷರು ವಿವರಿಸಿದರು.

ಸಮಾರೋಪದಲ್ಲಿ ಮಾತನಾಡಿದ ಸರ್ವಾಧ್ಯಕ್ಷರಾದ ಡಾ.ವಿ.ಎಸ್.ಮಾಳಿ, ಹಾರೂಗೇರಿ ಶಿಕ್ಷಣ ಕಾಶಿ ಇಲ್ಲಿಯ ಮಣ್ಣಿನಲ್ಲಿ ಜಾತಿ, ಮತ, ಪಂಥ, ಕುಲ, ಧರ್ಮ, ಭಾಷೆ ಎಲ್ಲ ಭೇದ ಭಾವಗಳನ್ನು ಮರೆತು ಎಲ್ಲರೂ ಒಗ್ಗೂಡಿ ಯಶಸ್ವಿಯಾಗಿ ಸಮ್ಮೇಳನ ನಡೆಸಿದ ಕೀರ್ತಿ ಈ ನಾಡಿನ ಮಣ್ಣಿನ ಜನತೆಗೆ ಸಲ್ಲುತ್ತದೆ. ಹಾರೂಗೇರಿ ಬರಿ ಕೇವಲ ಆರ್ಥಿಕವಾಗಿ ಶ್ರೀಮಂತ ಮಾತ್ರವಲ್ಲದೆ ಸಾಂಸ್ಕೃತಿಕವಾಗಿಯೂ ಶ್ರೀಮಂತ ಎನ್ನುವುದಕ್ಕೆ ಈ ಸಮ್ಮೇಳನದ ಯಶಸ್ಸೇ ಸಾಕ್ಷಿ. ಎರಡೂ ದಿನಗಳಿಂದ ಹಾರೂಗೇರಿ ನಗರವನ್ನು ಮದುಮಗಳಂತೆ ಸಿಂಗರಿಸಿ ಕಿರಿಯನಾದ ನನ್ನನ್ನು ಅಧ್ಯಕ್ಷನನಾಗಿಸಿ ದೊಡ್ಡ ಗೌರವ ನೀಡಿದ ಎಲ್ಲರಿಗೂ ನಾನು ಚಿರಋಣಿ ಎಂದರು.ಸಂವಾದದಲ್ಲಿ ಸಾಹಿತಿಗಳಾದ ಡಾ.ವೈ.ಎಂ.ಯಾಕೊಳ್ಳಿ, ಡಾ.ಅಶೋಕ ನರಡೆ, ಡಾ.ಅರುಣ ಕಲ್ಲೋಳಿಕರ, ನಿರ್ಮಲ ಬಟ್ಟಲ, ಡಾ. ಶೋಭಾ ಕೋಕಟನೂರ, ಎಲ್.ಎಸ್.ಶಾಸ್ತ್ರಿ ಮುಂತಾದವರು ಭಾಗವಹಿಸಿದ್ದರು.ಬಾಕ್ಸ್‌

ನಿರ್ಣಯಗಳು ಏನೇನು...?

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು ಏಳು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಂ.ವೈ.ಮೆಣಸಿನಕಾಯಿ ಸಮ್ಮೇಳನದ ನಿರ್ಣಯ ಮಂಡಿಸಿದರು.1)ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳು ಸುಧಾರಣೆ ಕೊಳ್ಳಬೇಕು ಮತ್ತು ಅತ್ಯುತ್ತಮ ಗುಣಮಟ್ಟದಿಂದ ಕೂಡಿರಬೇಕು.

2) ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಅತಿಯಾಗಿದ್ದು, ಆ ಕೊರತೆಯನ್ನು ನೀಗಿಸಲು ಶಿಕ್ಷಣ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು.3) ಗೋಕಾಕ್ ಫಾಲ್ಸ್, ಗೊಡಚಿನಮಲ್ಕಿ ದಬದಮೆ, ಯೋಗಿ ಕೊಳ್ಳ, ಧೂಪದಾಳ ಪಕ್ಷಿಧಾಮ, ಸೊಗಲ ಕ್ಷೇತ್ರ, ಸೌದತ್ತಿ ಎಲ್ಲಮ್ಮನ ಕ್ಷೇತ್ರ, ಕಾಗವಾಡದ ಕಗ್ಗೋಡರಾಯನ ಬಸದಿ ಮುಂತಾದ ಧಾರ್ಮಿಕ, ಐತಿಹಾಸಿಕ ಪ್ರೇಕ್ಷಣೀಯ ತಾಣಗಳನ್ನು ಒಳಗೊಂಡಂತೆ ಅವುಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಮಾಡುವಲ್ಲಿ ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕು.4) ಪ್ರಸಿದ್ಧ ಸಂಶೋಧಕರಾದ ಪ್ರೊ ಕೆ ಜಿ ಕುಂದನಗಾರ ಮತ್ತು ಶಿ ಚ ನಂದಿಮಠ ಹಾಗೂ ಖ್ಯಾತ ಸಾಹಿತಿ ಕೃಷ್ಣಮೂರ್ತಿ ಪುರಾಣಿಕರ ಹೆಸರುಗಳಲ್ಲಿ ಪ್ರತಿಷ್ಠಾನ ಸ್ಥಾಪನೆ ಆಗಬೇಕು.5) ಕುಲಗೋಡ ತಮ್ಮಣ್ಣ ಹಾಗೂ ಕೌಜಲಗಿ ನಿಂಗಮ್ಮ ಇವರ ಹೆಸರುಗಳಲ್ಲಿ ರಾಜ್ಯಮಟ್ಟದ ಜನಪದ ಕಲೆಗಳ ರಂಗ ತರಬೇತಿ ಶಾಲೆ ರಂಗಾಯಣ ಮಾದರಿಯಂತೆ ಸ್ಥಾಪನೆಗೊಳ್ಳಬೇಕು.6) ಹಾರೂಗೇರಿಯನ್ನು ತಾಲೂಕ ಕೇಂದ್ರವನ್ನಾಗಿ ಮಾಡಬೇಕು.7) ದೇಶದಲ್ಲಿ ಪ್ರತಿ ತಾಲೂಕಿಗೂ ಪ್ರತಿ ಜಿಲ್ಲೆಗೂ ಕೇಂದ್ರದಿಂದ ಸಿಗುವಷ್ಟು ಅನುದಾನ ಸಿಗಬೇಕು. ಅಂದರೆ ದೇಶ ಪ್ರಗತಿ ಪಥದತ್ತ ಬೇಗನೆ ಸಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ