ಬಿಆರ್‌ಟಿಎಸ್‌ ಬದಲು ಷಟ್ಪಥ ನಿರ್ಮಾಣದ ಕೂಗು

KannadaprabhaNewsNetwork | Published : Jan 12, 2025 1:17 AM

ಸಾರಾಂಶ

₹ 1000 ಕೋಟಿ ವೆಚ್ಚದಲ್ಲಿ ಬಿಆರ್‌ಟಿಎಸ್‌ನ್ನು ಕಳೆದ ಆರು ವರ್ಷದ ಹಿಂದೆ ಸರ್ಕಾರ ಪರಿಚಯಿಸಿತ್ತು. ಆದರೆ, ಇದೀಗ ಬೇಡವಾಗಿದೆ. ಇದನ್ನು ತೆಗೆದುಹಾಕಿ ಎಂಬ ಬೇಡಿಕೆ, ಇದಕ್ಕಾಗಿ ಹೋರಾಟಗಳು ಸಹ ನಡೆದಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುತ್ತಿರುವ ಬಿಆರ್‌ಟಿಎಸ್ ಬದಲು ಎಲ್‌ಆರ್‌ಟಿ (ಲೈಟ್‌ ರೈಲ್‌ ಟ್ರಾನ್ಸಿಟ್‌) ಜಾರಿಗೊಳಿಸಬೇಕೆಂಬ ಪ್ರಯತ್ನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಇದ್ದಾರೆ. ಆದರೆ, ಯಾವ ಎಲ್‌ಆರ್‌ಟಿನೂ ಬೇಡ. ಇರುವ ಪ್ರತ್ಯೇಕ ರಸ್ತೆಯನ್ನು ತೆರವುಗೊಳಿಸಿ ಎಲ್ಲ ವಾಹನಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ಕೊಟ್ಟರೆ ಸಾಕು. ತಾನಾಗಿಯೇ ಸುಗಮ ಸಂಚಾರವಾಗುತ್ತದೆ ಎಂಬ ಆಗ್ರಹ ಇದೀಗ ಕೇಳಿ ಬರುತ್ತಿದೆ.

₹ 1000 ಕೋಟಿ ವೆಚ್ಚದಲ್ಲಿ ಬಿಆರ್‌ಟಿಎಸ್‌ನ್ನು ಕಳೆದ ಆರು ವರ್ಷದ ಹಿಂದೆ ಸರ್ಕಾರ ಪರಿಚಯಿಸಿತ್ತು. ಆದರೆ, ಇದೀಗ ಬೇಡವಾಗಿದೆ. ಇದನ್ನು ತೆಗೆದುಹಾಕಿ ಎಂಬ ಬೇಡಿಕೆ, ಇದಕ್ಕಾಗಿ ಹೋರಾಟಗಳು ಸಹ ನಡೆದಿದೆ. ಒತ್ತಡಕ್ಕೆ ಮಣಿದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಎಲ್‌ಆರ್‌ಟಿ ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಅವರು ಸಮೀಕ್ಷೆಯನ್ನೂ ನಡೆಸಿದ್ದಾರೆ. ಎಲ್‌ಆರ್‌ಟಿ ಪರಿಚಯಿಸಲು ಬೇಕಾದ ಪ್ರಾಥಮಿಕ ತಯಾರಿ ಕೂಡ ಆಗಿದೆ ಎಂದು ಮೂಲಗಳು ತಿಳಿಸುತ್ತವೆ.

ಮುಕ್ತ ಮಾಡಿ:

ಎಲ್‌ಆರ್‌ಟಿ ಪರಿಚಯಿಸಿದರೆ ಏಕಕಾಲಕ್ಕೆ 250 ಜನರು ಪ್ರಯಾಣಿಸಬಹುದು. ಜತೆಗೆ ವಿದ್ಯುತ್‌ ಚಾಲಿತ ಲೈಟ್‌ ರೈಲ್‌ ಇದಾಗಿರುವುದರಿಂದ ಪರಸರದ ಮೇಲೂ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಆದಕಾರಣ ಹುಬ್ಬಳ್ಳಿ-ಧಾರವಾಡಕ್ಕೆ ಎಲ್‌ಆರ್‌ಟಿ ಸೂಕ್ತ ಎಂಬ ಅಭಿಪ್ರಾಯ ಒಂದೆಡೆ ಬಂದರೆ, ಮತ್ತೊಂದೆಡೆ ಎಲ್ಲೆಡೆ ವಿಫಲವಾಗಿರುವ ಬಿಆರ್‌ಟಿಎಸ್‌ ಜಾರಿಗೊಳಿಸಿ ಅದರಿಂದ ಆಗುತ್ತಿರುವ ತೊಂದರೆ ಗಮನಿಸಿದ್ದೇವೆ. ಬಿಆರ್‌ಟಿಎಸ್‌ ಬೇಡ; ಎಲ್‌ಆರ್‌ಟಿನೂ ಬೇಡ. ಈಗಿರುವ ಬಿಆರ್‌ಟಿಎಸ್‌ನ ಪ್ರತ್ಯೇಕ ಕಾರಿಡಾರ್‌ ತೆರವುಗೊಳಿಸಬೇಕು. ಷಟ್ಪಥ ಹೇಗಾದರೂ ಇದೆ. ಮಧ್ಯೆ ಬ್ಯಾರಿಕೇಡ್‌ ಅಳವಡಿಸಿ ಒನ್‌ ವೇ ಮಾಡಿಬಿಟ್ಟರೆ ಸಂಚಾರವೆಲ್ಲವೂ ಸುಗಮವಾಗುತ್ತದೆ. ಮಿಶ್ರಪಥದಲ್ಲಿನ ಟ್ರಾಫಿಕ್‌ ಕಿರಿಕಿರಿಯೂ ಇರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಎಲ್‌ಆರ್‌ಟಿ ಬಗ್ಗೆ ಚಿಂತನೆ ಶುರುವಾದ ಬಳಿಕ ಇನ್ನೇನು ಬಿಆರ್‌ಟಿಎಸ್‌ ಹೋಗಿ ಬಿಡುತ್ತಿದೆ ಎಂದುಕೊಂಡು ಕಾರಿಡಾರ್‌ನಲ್ಲಿ ಖಾಸಗಿ ವಾಹನಗಳು ಸಂಚರಿಸುತ್ತಿವೆ.

ಬಿಆರ್‌ಟಿಎಸ್‌ ಬಸ್‌ ತೆಗೆದು ಹುಬ್ಬಳ್ಳಿ-ಧಾರವಾಡ ಮಧ್ಯೆ ಹೆಚ್ಚು ಬಸ್‌ ಓಡಿಸಬೇಕು. ಅದರಲ್ಲಿ ಕೆಲವೊಂದಿಷ್ಟು ವೋಲ್ವೋ (ಹವಾನಿಯಂತ್ರಿತ) ಬಸ್‌ ಓಡಿಸಬಹುದು. ಸಾಮಾನ್ಯ, ವೇಗದೂತ, ವೋಲ್ವೋ ಹೀಗೆ ಮೂರು ಬಗೆಯ ಬಸ್‌ ಓಡಿಸಲು ಪ್ರಾರಂಭಿಸಿದರೆ ಯಾರಿಗೆ ಯಾವ ಬಗೆಯ ಬಸ್‌ ಬೇಕೋ ಅದರಲ್ಲಿ ಪ್ರಯಾಣಿಸಬಹುದು. ಆಗ ಸಂಚಾರವೂ ಸುಗಮವಾಗುತ್ತದೆ. ಖಾಸಗಿ ವಾಹನಗಳಿಗೂ ಟ್ರಾಫಿಕ್‌ ಸಮಸ್ಯೆ ಇರುವುದಿಲ್ಲ ಎಂಬ ಅಭಿಪ್ರಾಯ ಪ್ರಜ್ಞಾವಂತಹರದ್ದು.

ಒಟ್ಟಿನಲ್ಲಿ ಬಿಆರ್‌ಟಿಎಸ್‌ ಸ್ಥಗಿತಗೊಳಿಸಿ ಎಲ್‌ಆರ್‌ಟಿ ಪ್ರಾರಂಭಿಸಲು ಚಿಂತನೆ ನಡೆದಿರುವ ಬೆನ್ನಲ್ಲೇ ಇದೀಗ ಬಿಆರ್‌ಟಿಎಸ್ಸೂ ಬೇಡ; ಎಲ್‌ಆರ್‌ಟಿನೂ ಬೇಡ. ಪ್ರತ್ಯೇಕ ಕಾರಿಡಾರ್‌ ತೆರೆವುಗೊಳಿಸಿಬಿಡಿ ಸಾಕು ಎಂಬ ಬಗ್ಗೆ ಚರ್ಚೆ ತೀವ್ರವಾಗಿರುವುದಂತೂ ಸತ್ಯ.ಬಿಆರ್‌ಟಿಎಸ್‌ನಲ್ಲಿ ಓಡಾಡುವವರಿಗೆ ಮಾತ್ರ ಅದು ಇಷ್ಟವಾಗಿದೆ. ಉಳಿದವರಿಗೆ ಬಿಆರ್‌ಟಿಎಸ್‌ ಸಾಕಷ್ಟು ತೊಂದರೆಯಾಗುತ್ತಿರುವುದಂತೂ ಸತ್ಯ. ಎಲ್‌ಆರ್‌ಟಿ ಬಗ್ಗೆ ಸಚಿವ ಸಂತೋಷ ಲಾಡ್‌ ಅವರು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಮುಂದೆ ಅಧ್ಯಯನ ನಡೆಸಿ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಬಿಆರ್‌ಟಿಎಸ್‌ ಅಂತೂ ಅತ್ಯಂತ ವಿಫಲ ಯೋಜನೆ. ಇದರಿಂದಾಗಿ ಅನುಕೂಲಕ್ಕಿಂತ ಟ್ರಾಫಿಕ್‌ ಕಿರಿಕಿರಿ ಜಾಸ್ತಿಯಾಗುತ್ತಿದೆ. ಬಿಆರ್‌ಟಿಎಸ್‌ ಕಾರಿಡಾರ್‌ ತೆರವುಗೊಳಿಸಿ ಎಲ್ಲ ವಾಹನಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಸಂಚಾರ ಸುಗಮವಾಗುತ್ತದೆ. ಬೇಡಿಕೆ ತಕ್ಕಂತೆ ಬಸ್‌ ಸಂಖ್ಯೆ ಹೆಚ್ಚಿಸಬಹುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.

ಪ್ರತ್ಯೇಕ ಕಾರಿಡಾರ್‌ನಿಂದ ಸಮಸ್ಯೆಯಾಗುತ್ತಿದೆ. ಇದನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಬೇಕು. ಚಿಗರಿ ಬಸ್‌ ಬದಲು ಸಾರಿಗೆ ಸಂಸ್ಥೆ ಹೆಚ್ಚಿನ ಬಸ್‌ ಓಡಾಡುವಂತೆ ಮಾಡಿದರೆ ಉತ್ತಮ. ಎಲ್‌ಆರ್‌ಟಿ ಜಾರಿಗೊಳಿಸುವುದಾದರೆ ಸಾಧಕ-ಬಾಧಕ ಸರಿಯಾಗಿ ನೋಡಿಕೊಂಡೇ ಮಾಡಬೇಕು. ಮುಂದೆ ಎಲ್‌ಆರ್‌ಟಿ ಮತ್ತೊಂದು ಬಿಆರ್‌ಟಿಎಸ್‌ ಆಗಬಾರದು ಎಂದು ಹಿರಿಯ ನಾಗರಿಕ ರಮೇಶ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share this article