ಭಕ್ತರಲ್ಲಿ ಹೆಚ್ಚುತ್ತಿದೆ ಪುತ್ತಿಗೆ ಪರ್ಯಾಯ ಉತ್ಸವ ಉತ್ಸಾಹ

KannadaprabhaNewsNetwork | Published : Jan 13, 2024 1:36 AM

ಸಾರಾಂಶ

ಉಡುಪಿಯಲ್ಲಿ ಜ.೧೮ರಂದು ನಡೆಯಲಿರುವ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ರಥಬೀದಿಯ ಆನಂದ ತೀರ್ಥ ಮಂಟಪ ಮತ್ತು ಹೊರೆಕಾಣಿಕೆ ದಾಸ್ತಾನು ಆವರಣದ ಕನಕದಾಸ ಮಂಟಪಗಳಲ್ಲಿ ನಡೆಯುವ ಸಂವಾದ - ಸಾಂಸ್ಕೃತಿಕ ಕಾರ್ಯಕ್ರಮ - ಯಕ್ಷಗಾನಗಳನ್ನು ಸಾವಿರಾರು ಪ್ರೇಕ್ಷಕರು ಆನಂದಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಪುತ್ತಿಗೆ ಮಠದ ಶ್ರೀಕೃಷ್ಣ ಮತ್ತು ಶ್ರೀಮುಖ್ಯಪ್ರಾಣ ದೇವರ ಪೂಜಾ ದ್ವೈವಾರ್ಷಿಕ ಪರ್ಯಾಯೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಉಡುಪಿ ಜನರಲ್ಲಿ ಸಂಭ್ರಮ ಇಮ್ಮಡಿಯಾಗಿದೆ. ಸಂಜೆಯಾಗುತ್ತಿದ್ದಂತೆ ಕೃಷ್ಣನ ರಥಬೀದಿಯಲ್ಲಿ ಜನರು ಉತ್ಸವದಂತೆ ಸೇರುತ್ತಿದ್ದಾರೆ.

ರಥಬೀದಿಯ ಆನಂದ ತೀರ್ಥ ಮಂಟಪ ಮತ್ತು ಹೊರೆಕಾಣಿಕೆ ದಾಸ್ತಾನು ಆವರಣದ ಕನಕದಾಸ ಮಂಟಪಗಳಲ್ಲಿ ನಡೆಯುವ ಸಂವಾದ - ಸಾಂಸ್ಕೃತಿಕ ಕಾರ್ಯಕ್ರಮ - ಯಕ್ಷಗಾನಗಳನ್ನು ಸಾವಿರಾರು ಪ್ರೇಕ್ಷಕರು ಆನಂದಿಸುತ್ತಿದ್ದಾರೆ.

ಗೋಕುಟುಂಬ ಸಂವಾದ:

ಆನಂದತೀರ್ಥ ಮಂಟಪದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೋಕುಟುಂಬ ಎಂಬ ಬಗ್ಗೆ ಮಂಗಳೂರಿನ ಗೋಸಂರಕ್ಷಕ ಪ್ರಕಾಶ್ ಶೆಟ್ಟಿ, ಯಕ್ಷಗಾನ ಅರ್ಥದಾರಿ ಪ್ರೊ. ಪವನ್ ಕಿರಣ್‌ ಕೆರೆ ಮತ್ತು ಮಾರಿಪಳ್ಳದ ಭಕ್ತಿ ಭೂಷಣ ಸ್ವಾಮೀಜಿ ಅವರಿಂದ ಸಂವಾದ ಕಾರ್ಯಕ್ರಮ ನಡೆಯಿತು.

ನಂತರ ಇದೇ ವೇದಿಕೆಯಲ್ಲಿ ಸಾಕ್ಷಿ ಕಾಮತ್ ಮತ್ತು ಬಳಗದವರಿಂದ ನಡೆದ ಭಕ್ತಿಗೀತೆ, ವಿದುಷಿ ರುಕ್ಮಿಣಿ ಹಂದೆ ಮತ್ತು ಬಳಗದಿಂದ ಹರಿಕಥೆ, ಕನಕದಾಸ ಮಂಟಪದಲ್ಲಿ ವಿದುಷಿ ಶಿರೀಷ ಇವರ ಶಿಷ್ಯೆಯರಿಂದ ನಡೆದ ಭರತನಾಟ್ಯ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.

ಕುಂದಾಪುರ ಹೊರಕಾಣಿಕೆ:

ಶುಕ್ರವಾರ ಬೈಂದೂರು ತಾಲೂಕು, ಕುಂದಾಪುರ ತಾಲೂಕು, ಬ್ರಹ್ಮಾವರ ತಾಲೂಕು, ಮಂದಾರ್ತಿ ವಲಯ, ಕೋಟ ವಲಯ, ಉಪ್ಪೂರು - ಹಾವಂಜೆ ವಲಯ, ಕಲ್ಯಾಣಪುರ -ಸಂತೆಕಟ್ಟೆ ವಲಯ, ಸಗ್ರಿ - ಚಕ್ರತೀರ್ಥ ವಲಯ, ಪೇರಂಪಳ್ಳಿ ವಲಯ, ಕೊಡವೂರು ವಲಯದ ವಿವಿಧ ಸಂಘಸಂಸ್ಥೆಗಳು, ದೇವಾಲಯಗಳು ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ಹೊರೆಕಾಣಿಕೆಗಳನ್ನು ತಂದು ಶ್ರೀಮಠಕ್ಕೆ ಸಲ್ಲಿಸಿದರು.

ಮಟ್ಟು ದೇವಳಕ್ಕೆ ಕಿರಿಯ ಶ್ರೀ ಭೇಟಿ:

ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಪುತ್ತಿಗೆ ಮಠದ ಉಭಯ ಶ್ರೀಗಳು ಶುಕ್ರವಾರ 3ನೇ ದಿನವೂ ಉಡುಪಿ ಸುತ್ತಮುತ್ತಲಿನ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಗ್ರಾಮಸ್ಥರನ್ನು ಪರ್ಯಾಯೋತ್ಸವಕ್ಕೆ ಆಹ್ವಾನಿಸಿದರು.

ಕಿರಿಯ ಯತಿಗಳಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮಟ್ಟು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಮಹೋತ್ಸವಕ್ಕೆ ಆಹ್ವಾನಿಸಿ ಅನುಗ್ರಹಿಸಿದರು. ದೇವಳದ ಆಡಳಿತ ಮೊಕ್ತೇಸರ ಮಟ್ಟು ಲಕ್ಷ್ಮೀನಾರಾಯಣ ರಾವ್ ಮತ್ತು ಅರ್ಚಕರಾದ ಪ್ರದ್ಯುಮ್ನ ಆಚಾರ್ ಶ್ರೀಪಾದರನ್ನು ಸ್ವಾಗತಿಸಿದರು.

ಆದರ್ಶ ಆಸ್ಪತ್ರೆಗೆ ಹಿರಿಯ ಶ್ರೀ ಭೇಟಿ:

ಪುತ್ತಿಗೆ ಮಠದ ಹಿರಿಯರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ನಗರದ ಖ್ಯಾತ ಆದರ್ಶ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್.ಚಂದ್ರ ಶೇಖರ್ ಹಾಗು ವಿಮಲಾ ಜಿ.ಎಸ್. ಅವರು ಸ್ವಾಮೀಜಿ ಅವರನ್ನು ವಿಧ್ಯುಕ್ತವಾಗಿ ಸ್ವಾಗತಿಸಿ ಬರಮಾಡಿಕೊಂಡರು.

ಬಳಿಕ ಸ್ವಾಮೀಜಿ ಅವರ ಪಾದಪೂಜೆ ನೆರವೇರಿತು. ಸ್ವಾಮೀಜಿ ಅವರು ಆಶೀರ್ವಚನ ನೀಡಿ ಡಾ.ಚಂದ್ರಶೇಖರ್ ಅವರು ಉಡುಪಿ ಮಠಗಳಿಗೆ ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಆಸ್ಪತ್ರೆಯ ಆಹಾರತಜ್ಞೆ ಅನುಶ್ರಿ ಸ್ವಾಮೀಜಿ ಅವರ ಪರಿಚಯ ನೀಡಿದರು.

Share this article