ರಬಕವಿಯಲ್ಲಿದೆ ೮೪ ಸದಸ್ಯರನ್ನೊಳಗೊಂಡ ಅವಿಭಕ್ತ ಕುಟುಂಬ!

KannadaprabhaNewsNetwork |  
Published : May 15, 2026, 02:45 AM IST
ರಬಕವಿ ಗುರುದೇವ ಬ್ರಹ್ಮಾನಂದ ನಗರದಲ್ಲಿರುವ ಅವಿಭಕ್ತ ಕುಟುಂಬಕ್ಕೆ ಮಾದರಿಯಾದ ಕುರುಬ ಸಮಾಜದ ಪೂಜಾರಿ ಪರಿವಾರ. | Kannada Prabha

ಸಾರಾಂಶ

ಹಿಂದಿನ ಕಾಲದಲ್ಲಿ ಕಾಣಸಿಗುತ್ತಿದ್ದ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ, ನ್ಯಾನೋ ಕುಟುಂಬಗಳೇ ಅಧಿಕವಾಗಿರುವ ಇಂದಿನ ಕಾಲದಲ್ಲಿ ರಬಕವಿಯ ಬ್ರಹ್ಮಾನಂದ ನಗರದಲ್ಲಿನ ೮೪ ಜನ ಸದಸ್ಯರನ್ನು ಹೊಂದಿರುವ ಪೂಜಾರಿ ಪರಿವಾರ ಎಲ್ಲರ ಗಮನ ಸೆಳೆಯುತ್ತಿದೆ.

ಶಿವಾನಂದ ಪಿ. ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಹಿಂದಿನ ಕಾಲದಲ್ಲಿ ಕಾಣಸಿಗುತ್ತಿದ್ದ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ, ನ್ಯಾನೋ ಕುಟುಂಬಗಳೇ ಅಧಿಕವಾಗಿರುವ ಇಂದಿನ ಕಾಲದಲ್ಲಿ ರಬಕವಿಯ ಬ್ರಹ್ಮಾನಂದ ನಗರದಲ್ಲಿನ ೮೪ ಜನ ಸದಸ್ಯರನ್ನು ಹೊಂದಿರುವ ಪೂಜಾರಿ ಪರಿವಾರ ಎಲ್ಲರ ಗಮನ ಸೆಳೆಯುತ್ತಿದೆ.

ಕುಟುಂಬದಲ್ಲಿ 9 ಜನ ಸಹೋದರರಿದ್ದು, ಇದರಲ್ಲಿ ಓರ್ವ ವಿಕಲಚೇತನರಿದ್ದಾರೆ. ಎಲ್ಲರ ಸಹೋದರರು ಮದುವೆಯಾಗಿದೆ. ಓರ್ವ ಸಹೋದರ ಪೊಲೀಸ್‌ ಕರ್ತವ್ಯ, ಮತ್ತೊಬ್ಬರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಓರ್ವ ಮಗಳು ಎಚ್‌ಎಎಲ್‌ನಲ್ಲಿ ಕೆಲಸ ಮಾಡುತ್ತಾರೆ. ಇವರಿಗೆ 24 ಜನ ಮಕ್ಕಳಿದ್ದಾರೆ. ಇವರಲ್ಲಿ ನಾಲ್ವರಿಗೆ ಮದುವೆ ಆಗಿದ್ದರೆ, ಓರ್ವಳನ್ನು ಮದುವೆ ಮಾಡಿಕೊಡಲಾಗಿದೆ. 19 ಜನ ಮೊಮ್ಮಕ್ಕಳು ಸೇರಿ 84 ಜನ ಕುಟುಂಬ ಸದಸ್ಯರಿದ್ದು, ಎಲ್ಲರೂ ಒಂದೇ ಮನೆಯಲ್ಲಿ ವಾಸವಿದ್ದಾರೆ. ಕುಟುಂಬದಲ್ಲಿ ತಲಾ ನಾಲ್ವರು ಎಸ್ಸೆಸ್ಸೆಲ್ಸಿ, ಎಂಟನೇ ತರಗತಿಯಲ್ಲಿ ಓದುತ್ತಿದ್ದರೆ, 7, 5, 4, 3 ಹಾಗೂ ನರ್ಸರಿಯಲ್ಲಿ ತಲಾ ಓರ್ವ ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ.

ಪೊಲೀಸ್‌ ಕರ್ತವ್ಯ ನಿರ್ವಹಿಸುತ್ತಿರುವ ಸಹೋದರ ಸ್ಥಳೀಯವಾಗಿಯೇ ಕರ್ತವ್ಯದಲ್ಲಿ ಸಂಜೆ ಮನೆಗೆ ಬರುತ್ತಾರೆ. ಸೇನೆಯಲ್ಲಿರುವ ಸಹೋದರನ ಪತ್ನಿ, ಮಕ್ಕಳು ಇಲ್ಲಿಯೇ ವಾಸವಿದ್ದಾರೆ. ಹಿರಿಯ ಸಹೋದರ ಪ್ರಭು ಪೂಜಾರಿ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಇವರಿಗೆ ಕಿರಿಯ ಸಹೋದರ ಹನುಮಂತ ಸಹಾಯ ಮಾಡುತ್ತಾರೆ.

ಮನೆಯಲ್ಲಿಯೇ ಹಿಟ್ಟಿನ ಗಿರಣಿ, ಖಾರಾ ಕುಟ್ಟುವ ಗಿರಣಿ ಇದ್ದು, ಮನೆಯ ಜೊತೆಗೆ ಹೊರಗಿನ ಜನರಿಗೂ ಹಿಟ್ಟು, ಖಾರ ಕುಟ್ಟಿ ಕೊಡುತ್ತಾರೆ. ಒಂದು ಕಿರಾಣಿ ಅಂಗಡಿಯೂ ಇದೆ. 17 ಎಕರೆ ಕೃಷಿ ಜಮೀನು ಇದ್ದು, ಒಂದು ಜೆಸಿಬಿ, ಎರಡು ಟ್ರ್ಯಾಕ್ಟರ್‌ ಗಳಿವೆ. 13 ಶೌಚಾಲಗಳಿವೆ. ಮೂರು ದ್ವಿಚಕ್ರ ವಾಹನಗಳಿವೆ.

ಕುಟುಂಬದ ಎಲ್ಲ ಸದಸ್ಯರು ಬೆಳಗಿನಿಂದ ಶಾಲೆ, ಕಾಲೇಜು, ನೌಕರಿ, ಕೃಷಿ ಕೆಲಸ ಸೇರಿ ತಂತಮ್ಮ ಕೆಲಸಗಳಿಗೆ ತೆರಳಿ ಸಂಜೆಗೆ ಮನೆಗೆ ಮರಳುತ್ತಾರೆ. ಕುಟುಂಬದ ಸದಸ್ಯರ ಆಹಾರಕ್ಕಾಗಿ ಪ್ರತಿದಿನ ಅನ್ನಕ್ಕಾಗಿ ೮ ಕೆಜಿ ಅಕ್ಕಿ, ರೊಟ್ಟಿಗಾಗಿ ೧೨ ಕೆಜಿ ಜೋಳದ ಹಿಟ್ಟು, ಕಾಯಿಪಲ್ಲೆ, ಬ್ಯಾಳಿ ಸೇರಿದಂತೆ ಇನ್ನಿತರ ಅಡುಗೆ ಪದಾರ್ಥಗಳು ಬೇಕಾಗುತ್ತವೆ. ಮೂರು ಸೌದೆ ಒಲೆ, ಒಂದು ಗೋಬರ್‌ ಗ್ಯಾಸ್‌ ಒಲೆ, ಒಂದು ಎಲ್‌ಪಿಜಿ ಒಲೆ ಇದೆ. ಐವರು ಮಹಿಳೆಯರು ಅಡುಗೆ ಕೋಣೆಯ ಜವಾಬ್ದಾರಿ ನಿರ್ವಹಿಸುತ್ತಾರೆ. ಮೂವರು ಮಹಿಳೆಯರು ಆಳುಗಳೊಂದಿಗೆ ಕೃಷಿ ಕಾಯಕ ಮಾಡುತ್ತಾರೆ. ಅಡುಗೆ ಕೋಣೆಯಂತೂ ದಾಸೋಹ ಕೇಂದ್ರದಂತೆ ಬೆಳಗಿನ ೮ಕ್ಕೆ ಪ್ರಾರಂಭವಾದರೆ ರಾತ್ರಿ ೯ರವರೆಗೂ ನಿರಂತರ ಊಟ, ಉಪಹಾರ ಪೂರೈಸುತ್ತದೆ.

ಕೂಡು ಕುಟುಂಬಕ್ಕೆ ಬೇಕಾದ ಹಾಲು, ಮೊಸರು, ಬೆಣ್ಣೆ, ತುಪ್ಪ ಸೇರಿ ಹೈನು ಉತ್ಪನ್ನಗಳಿಗಾಗಿ ೬ ಎಮ್ಮೆ, ೪ ಆಕಳು ಸಾಕಿದ್ದಾರೆ. ವೃದ್ಧ ಮಹಿಳೆಯರು ಆಡು, ಕೋಳಿ ಸಾಕಾಣಿಕೆ ಮಾಡುತ್ತಾರೆ.

ಎಲ್ಲರ ಆದಾಯ ಒಂದೇ ಕಡೆ ಜಮಾ:ಮನೆಯ ಸಂಪೂರ್ಣ ಖರ್ಚುವೆಚ್ಚವನ್ನು ಪ್ರಭು ಪೂಜಾರಿ ನಿರ್ವಹಿಸುತ್ತಾರೆ. ನೌಕರಿಯಲ್ಲಿರುವ ಇಬ್ಬರು ಸಹೋದರರ ವೇತನ ಸೇರಿ ಎಲ್ಲ ಕೆಲಸಗಳಿಂದ ಬರುವ ಹಣ ಇವರ ಬಳಿಯೇ ಜಮಾ ಆಗುತ್ತದೆ. ಯಾವುದೇ ಹಬ್ಬ, ಮದುವೆ, ಇನ್ನಿತರ ಕಾರ್ಯಕ್ರಮ ಇದ್ದರೆ ಎಲ್ಲರೂ ಸೇರಿ ಆಚರಿಸುತ್ತಾರೆ. ಕುಟುಂಬದಲ್ಲಿ ನೌಕರಿ ಇರುವವರು,

ಕೃಷಿ ಕೆಲಸ ಮಾಡುವವರು, ಇತರ ಕೆಲಸ ಮಾಡುವವರಿಗೂ ಒಂದೇ ಸಮಾನ. ಯಾವುದೇ ತಾರತಮ್ಯ ಇಲ್ಲದೆ, ಮಕ್ಕಳ ಮದುವೆ, ಇತರ ಕಾರ್ಯಕ್ರಮ ನಡೆಸಿಕೊಡುತ್ತಾರೆ.

ಎಲ್ಲ ಸದಸ್ಯರು ತಮಗೆ ಹಂಚಿಕೆಯಾದ ಕೆಲಸಗಳನ್ನು ನಿಯಮಿತವಾಗಿ ಸಮಥರ್ವಾಗಿ ನಿರ್ವಹಿಸುತ್ತಿದ್ದು, ೮೪ ಸದಸ್ಯರನ್ನು ಒಳಗೊಂಡ ಕುಟುಂಬ ಯಾವುದೇ ತೊಂದರೆಯಿಲ್ಲದೆ ಸಾಗುತ್ತಿದೆ. ನಮ್ಮಲ್ಲಿ ಯಾವುದೇ ಬಿನ್ನಾಭಿಪ್ರಾಯಗಳಿಲ್ಲ, ಎಲ್ಲರೂ ಎಲ್ಲ ಕೆಲಸಗಳನ್ನು ಹಂಚಿಕೊಂಡು ಪ್ರೀತಿಯಿಂದ ಇದ್ದಾರೆ. ಈವರೆಗೆ ಯಾರಲ್ಲಿಯೂ ಅಸಮಾಧಾನ ಬಂದಿಲ್ಲ. ಅನ್ಯೋನ್ಯವಾಗಿದ್ದೇವೆ.

- ಪ್ರಭು ಪೂಜಾರಿ ಮನೆಯ ಯಜಮಾನ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಂ ಅಸೋಸಿಯೇಟ್ ಕಚೇರಿ ಮೇಲೆ ದಾಳಿ
ಮಧುಮೇಹಪೀಡಿತ ಮಕ್ಕಳಿಂದಲೂ ಸಾಧನೆ