ಕನ್ನಡಪ್ರಭ ವಾರ್ತೆ ಧಾರವಾಡ ವಿಜಯ ದಶಮಿಯ ಹಬ್ಬದ ಆಯುಧ ಪೂಜೆ ಹಿನ್ನೆಲೆಯಲ್ಲಿ ಧಾರವಾಡ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಅಧಿಕ ಸಂಖ್ಯೆಯಲ್ಲಿ ಸೇರುತ್ತಿದ್ದು, ಮುಗಿಬಿದ್ದು ಜನರು ಪೂಜಾ ಸಾಮಗ್ರಿಗಳನ್ನು ಖರೀದಿಸಿದರು. ಬೆಲೆ ಏರಿಕೆ ಬಿಸಿ ಮಧ್ಯೆ ಜನರು ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ, ಹಬ್ಬದ ತಯಾರಿ ನಡೆಸಿದ್ದಾರೆ. ನಗರದ ಸೂಪರ್ ಮಾರ್ಕೆಟ್, ಅಕ್ಕಿಪೇಟೆ, ನೆಹರು ಮಾರುಕಟ್ಟೆ, ಸುಭಾಷ್ ರಸ್ತೆ, ಟಿಕಾರೆ ರಸ್ತೆ, ಗಾಂಧಿ ಚೌಕ ಸೇರಿದಂತೆ ವಿವಿಧ ಕಡೆಗಳಲ್ಲಿ ಹಬ್ಬದ ಪೂಜೆಗಾಗಿ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಮುಗಿಬಿದ್ದ ದೃಶ್ಯ ಕಂಡು ಬಂತು. ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಬಿಲ್ವಪತ್ರೆ, ಬನ್ನಿಪತ್ರೆ ಹಾಗೂ ಆರಿಪತ್ರೆ ಸೇರಿದಂತೆ ಬಾಳಿಕಂಬ ಮತ್ತು ಜೋಳದ ದಂಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿ ಮಾಡುತ್ತಾ ವ್ಯಾಪಾರಸ್ಥರ ಜೋತೆ ಚೌಕಾಸಿ ಮಾಡಿ ಹಣ ಉಳಿತಾಯ ಮಾಡಲು ಹರಸಾಹಸ ಪಡುತ್ತಿರುವುದು ಕಂಡುಬಂತು.