ಕುವೆಂಪು ಸಾಹಿತ್ಯದಲ್ಲಿ ಸದಾಕಾಲ ಸಮಾಜ ಗುರುತಿಸುವ ಚಳವಳಿ ಇದೆ

KannadaprabhaNewsNetwork |  
Published : Dec 30, 2024, 01:02 AM IST
ಫೋಟೊ 29 ಟಿಟಿಎಚ್ 01 : ಕುವೆಂಪುರವರ 120 ನೇ ಜನ್ಮದಿನದ ಅಂಗವಾಗಿ ಭಾನುವಾರ  ಕುಪ್ಪಳಿಯ ಕವಿಶೈಲದಲ್ಲಿ ಕವಿಯ ಸಮಾದಿಗೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಲಾಯ್ತು. ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್, ಖಜಾಂಚಿ ದೇವಂಗಿ ಮನುದೇವ್, ಪ್ರತಿಷ್ಠಾನದ ನಿರ್ದೆಶಕರಾದ ಎಂ.ಸಿ.ನರೇಂದ್ರ ಮುಂತಾದವರು ಇದ್ದರು | Kannada Prabha

ಸಾರಾಂಶ

There is always a movement to identify with society in Kuvempu literature.

-ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ವೈ.ಎಸ್.ವಿ.ದತ್ತ ಹೇಳಿಕೆ

-----

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ವಿಶ್ವ ಮಾನವ ಸಂದೇಶ ಸಾರಿದ ಕವಿ ಕುವೆಂಪು ಅವರ ಸಾಹಿತ್ಯದಲ್ಲಿ ವಿಶಿಷ್ಟ ಮತ್ತು ಸದಾಕಾಲ ಸಮಾಜ ಗುರುತಿಸುವ ಚಳುವಳಿ ಇದೆ. ದೇಶದಲ್ಲಿ ಕಮ್ಯೂನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದರೂ ಆಡಳಿತ ಜನಪರವಾಗಿ ಇರುವುದಿಲ್ಲ. ಅದು ದೇಶದ ಹಳೆಯ ಆಡಳಿತ ಸಂಸ್ಕೃತಿಗೆ ಹೊಂದಿಕೊಂಡಿರುತ್ತದೆ ಎಂಬ ಅವರ ಮಾತು ಈಗ ಸತ್ಯವೆನಿಸುತ್ತಿದೆ ಎಂದು ಚಿಂತಕ ವೈ.ಎಸ್.ವಿ.ದತ್ತ ಹೇಳಿದರು.

ಕುವೆಂಪುರವರ 120 ನೇ ಜನ್ಮದಿನದ ಅಂಗವಾಗಿ ಕುಪ್ಪಳಿಯ ಕವಿಶೈಲದಲ್ಲಿ ನಡೆದ ಕವಿನಮನದ ನಂತರ ಹೇಮಾಂಗಣದಲ್ಲಿ ಸೇರಿದ್ದ ಕವಿಯ ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕುವೆಂಪು ಅವರ ಸಾಹಿತ್ಯವನ್ನು ಸಮಷ್ಟಿ ರೂಪದಲ್ಲಿ ಕಟ್ಟಿಕೊಡುವುದು ಅಸಾಧ್ಯ. ಬಹುಮುಖಿ ವ್ಯಕ್ತಿತ್ವದಿಂದಲೇ ಅವರ ಗುರಿ ಮತ್ತು ಸ್ಪಷ್ಟತೆಯನ್ನು ವಿಶ್ಲೇಷಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪೆರಿಯಾರ್ ಪ್ರಾರಂಭಿಸಿದ ಜನಪರ ಚಳುವಳಿ ನಂತರ ರಾಜಕೀಯ ಬದಲಾವಣೆಗೂ ಕಾರಣವಾಗಿದೆ. ಕುವೆಂಪು ಯಾವುದೇ ಚಳುವಳಿ ಮಾಡಿಲ್ಲವಾದರೂ ಅವರ ಸಾಹಿತ್ಯದಲ್ಲಿ ವಿಶಿಷ್ಟವಾದ ಮತ್ತು ಸದಾಕಾಲ ಸಮಾಜ ಗುರುತಿಸುವ ಚಳುವಳಿ ಇದೆ. ದೇಶದಲ್ಲಿ ಕಮ್ಯೂನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದರೂ ಆಡಳಿತ ಜನಪರವಾಗಿ ಇರುವುದಿಲ್ಲ. ಅದು ದೇಶದ ಹಳೆಯ ಆಡಳಿತ ಸಂಸ್ಕ್ರತಿಗೆ ಹೊಂದಿಕೊಂಡಿರುತ್ತದೆ ಎಂಬ ಅವರ ಮಾತು ಈಗ ಸತ್ಯವೆನಿಸುತ್ತಿದೆ ಎಂದು ಹೇಳಿದರು.

ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ಕುವೆಂಪುರವರ ಸಮಗ್ರ ಸಾಹಿತ್ಯವನ್ನು ಬಹುಮುಖಿ ವ್ಯಕ್ತಿತ್ವದಿಂದಲೇ ವಿಶ್ಲೇಷಿಸಬೇಕಿದೆ. ರಾಮಾಯಣ ದರ್ಶನಂ ಕೃತಿಯಲ್ಲಿ ಅವರು ಪಾಲಿಸಿದ ತತ್ವ, ಆದರ್ಶಕ್ಕೆ ತಕ್ಕಂತೆ ಸಾತ್ವಿಕ ಮಾರ್ಗದಿಂದ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ. ಜನಮನದ ಅಭಿಪ್ರಾಯಕ್ಕೆ ಹೊಂದಿಕೆಯಾಗುವಂತೆಯೇ ಜೀವಿತದುದ್ದಕ್ಕೂ ಪಾಲಿಸುವ ಬದ್ದತೆಯನ್ನೂ ಹೊಂದಿದ್ದರು ಎಂದೂ ಹೇಳಿದರು.

ನವೋದಯ ಕಾಲಘಟ್ಟದಲ್ಲಿ ಸಾಹಿತ್ಯ ರಚನೆ ಕಲೆ, ರಮ್ಯತೆ ಎಂದು ಹೊಗಳುತ್ತಿದ್ದವರಿಗೆ ನನ್ನ ಕೃತಿ ಕೃತಿಯಲ್ಲಾ, ನಾನು ಕವಿಯೂ ಅಲ್ಲಾ, ಕಲೆಗಾಗಿ ಕಲೆಯೆಂಬ ಹೊಳ್ಳು ನೆಲೆಯಿಲ್ಲಾ ಎಂದು ಹೇಳುವ ಮೂಲಕ ಸವಲಾಗಿ ನಿಂತಿದ್ದರು. ವೈಚಾರಿಕತೆ ಸಮಕಾಲೀನರ ಪರವಾಗಿ ಪುರೋಹಿತ ಶಾಹಿತ್ವದ ವಿರುದ್ಧ ನವೋದಯದ ಮೂಲಕ ಸಾಹಿತ್ಯಕ್ಕೆ ಹೊಸ ದಿಕ್ಕು ಮತ್ತು ರೂಪವನ್ನು ಕೊಟ್ಟಿದ್ದರು. ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಕುವೆಂಪು ಕಟಿಬದ್ದರಾಗಿದ್ದರು. ಮಹಾತ್ಮಗಾಂಧಿ ಅವರ ಹತ್ಯೆಯಾದಾಗ ಓ ಜಗತ್ ಪಿತ ಅದೃಷ್ಟಹೀನ ಭಾರತ ಎಂದೂ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು ಎಂದರು.

ಬೆಂಗಳೂರಿನ ವಿಶ್ವಮಾನವ ವೇದಿಕೆಯ ಅಧ್ಯಕ್ಷ ಜಿ.ಟಿ.ನರೇಂದ್ರ, ಕುವೆಂಪು ಸಾಹಿತ್ಯ ಶಿಬಿರದ ನಿರ್ದೆಶಕ ರಂಗನಾಥ್, ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್, ಖಜಾಂಚಿ ದೇವಂಗಿ ಮನುದೇವ್, ಪ್ರತಿಷ್ಠಾನದ ನಿರ್ದೆಶಕರಾದ ಎಂ.ಸಿ.ನರೇಂದ್ರ, ಎಸ್.ದಯಾನಂದ್, ಶಿವಾನಂದ ಕರ್ಕಿ, ಶಿವಮೊಗ್ಗ ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೆಶಕ ಉಮೇಶ್ ಹಾಲಾಡಿ, ಕೊಳಾವರ ನಾರಾಯಣ ಮೂರ್ತಿ ಇದ್ದರು.

---------------------------

ಫೋಟೊ: ಕುವೆಂಪು ಅವರ 120ನೇ ಜನ್ಮದಿನದ ಪ್ರಯುಕ್ತ ಕುಪ್ಪಳಿಯ ಕವಿಶೈಲದಲ್ಲಿ ಕವಿಯ ಸಮಾಧಿಗೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಲಾಯಿತಯ. ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್, ಖಜಾಂಚಿ ದೇವಂಗಿ ಮನುದೇವ್, ಪ್ರತಿಷ್ಠಾನದ ನಿರ್ದೆಶಕರಾದ ಎಂ.ಸಿ.ನರೇಂದ್ರ ಇದ್ದರು.29 ಟಿಟಿಎಚ್ 01

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ