ಹಾವೇರಿ: ರಾಜ್ಯದಲ್ಲಿ ತಾಯಂದಿರ ಆರೋಗ್ಯ ಕಾಪಾಡಲೂ ಆಗದ ಬೇಜವಾಬ್ದಾರಿ ಸರ್ಕಾರ ಅಧಿಕಾರದಲ್ಲಿದೆ. ತನ್ನ ಆದ್ಯ ಕರ್ತವ್ಯ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಇಲ್ಲಿನ ತಾಪಂ ಕಚೇರಿ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ಜನ ಸಂಪರ್ಕ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಾನವ ಅಭಿವೃದ್ಧಿ ಸೂಚ್ಯಂಕ ಮೊದಲಿನಿಂದಲೂ ಬಹಳಷ್ಟು ಪ್ರಮುಖವಾಗಿದ್ದು, ತಾಯಂದಿರ ಮರಣ ಪ್ರಮಾಣ ಮೊದಲು ಹಿಂದುಳಿದ ಎರಡು ಜಿಲ್ಲೆಯಲ್ಲಿ ಮಾತ್ರ ಇತ್ತು. ರಾಯಚೂರು ಮತ್ತು ಯಾದಗಿರಿಯಲ್ಲಿ ಮಾತ್ರ ಹೆಚ್ಚಿಗೆ ಇತ್ತು. ಆದರೆ ಇಂದಿನ ಸರ್ಕಾರದಲ್ಲಿ ಆರೋಗ್ಯ ನಿರ್ವಹಣೆಯಲ್ಲಿ ಎಡವಿದ್ದರಿಂದ ಪೂರ್ವಭಾವಿ ಕಾಳಜಿ ವಹಿಸದೇ ಇದ್ದಿದ್ದರಿಂದ ತೊಂದರೆ ಆಗುತ್ತಿದೆ. ಜೊತೆಗೆ ಔಷಧಿ ಖರೀದಿಯ ನೀತಿಯಲ್ಲಿ ದೋಷ ಇದ್ದು, ಬಹಳ ಭ್ರಷ್ಟಾಚಾರ ಆಗುತ್ತಿದೆ. ಅಗ್ಗದ ದರದಲ್ಲಿ ಔಷಧಿ ಖರೀದಿ ಮಾಡಲಾಗುತ್ತಿದೆ. ಜೊತೆಗೆ ಲಾಂಗ್ ಟರ್ಮ್ ಔಷಧಿ ಖರೀದಿ ಮಾಡುತ್ತಿಲ್ಲ. ಲಾಂಗ ಟರ್ಮ್ ಔಷಧಿ ತೆಗೆದುಕೊಳ್ಳುವ ಪದ್ಧತಿ ಬಿಟ್ಟು, ಈಗ ಪ್ರತಿ ತಿಂಗಳು ಔಷಧಿ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಗುಣಮಟ್ಟ ಪರೀಕ್ಷೆ ಮಾಡಲು ಅವಕಾಶ ಸಿಗುವುದಿಲ್ಲ. ಗುಣಮಟ್ಟ ಇಲ್ಲದ ಔಷಧಿ ಕೊಟ್ಟಿದ್ದರಿಂದ ಬಾಣಂತಿಯರ ಸಾವಿನಂತಹ ಸಮಸ್ಯೆ ಆಗುತ್ತಿವೆ ಎಂದರು. ತನಿಖೆ ಆಗಬೇಕು: ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ನಡೆದು ಒಂದು ತಿಂಗಳು ಕಳೆದರೂ ತನಿಖಾ ವರದಿ ಏನಾಗಿದೆ ಅನ್ನೋದು ಗೊತ್ತಿಲ್ಲ. ಬೆಳಗಾವಿ, ಬಳ್ಳಾರಿ, ರಾಯಚೂರಿನಲ್ಲಿ ಮತ್ತೆ ಗರ್ಭಿಣಿ ಸಾವು ಆಗಿದೆ. ಬೇಜವಾಬ್ದಾರಿಯುತ ಸರ್ಕಾರಕ್ಕೆ ಗರ್ಭಿಣಿಯರ ಮತ್ತು ತಾಯಂದಿರ ಆರೋಗ್ಯ ನೋಡಲು ಆಗುತ್ತಿಲ್ಲ. ತನ್ನ ಪ್ರಥಮ ಕರ್ತವ್ಯ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ಬೇಜವ್ದಾರಿಯಿಂದ ಅಧಿಕಾರ ನಡೆಸುತ್ತಿದೆ ಎಂದು ಆರೋಪಿಸಿದರು.ಹಾವೇರಿ ಜಿಲ್ಲೆಯಲ್ಲಿ ಬಾಣಂತಿಯರು ಹೊರ ಜಿಲ್ಲೆಗೆ ಹೋಗುವ ಪರಿಸ್ಥಿತಿ ಜಿಲ್ಲಾಸ್ಪತ್ರೆಯಲ್ಲಿ ಇದೆ. ಇಲ್ಲಿನ ಬಾಣಂತಿಯರು ದಾವಣಗೆರೆ, ಹುಬ್ಬಳ್ಳಿಗೆ ಹೋಗುತ್ತಾರೆ. ಇದಕ್ಕೆ ರಾಜ್ಯ ಮಟ್ಟದಲ್ಲಿ ಕಾಯಕಲ್ಪ ನೀಡಬೇಕು. ಇದು ಗಂಭೀರವಾದ ವಿಚಾರ. ಆದರೆ, ಗಂಭೀರತೆ ಈ ಸರ್ಕಾರದಲ್ಲಿ ಕಾಣುತ್ತಿಲ್ಲ. ಈ ಸರ್ಕಾರದಲ್ಲಿ ತುರ್ತಾಗಿ ಬೇಕಾದ ಔಷಧಿ ಖರೀದಿ ಮಾಡಲು ಹಣ ಇಲ್ಲ. ಮೊನ್ನೆ ಹುಬ್ಬಳ್ಳಿಯಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸುಟ್ಟ ಗಾಯವಾದರೆ, ಬರ್ನಲ್ ಸಹ ಇರಲಿಲ್ಲ. ಇಂತಹ ಪರಿಸ್ಥಿತಿ ಕರ್ನಾಟಕಕ್ಕೆ ಯಾವತ್ತೂ ಬಂದಿರಲಿಲ್ಲ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಇದೇ ವೇಳೆ ಹಾವೇರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ರೈಲ್ವೆ ಸಚಿವರ ಜೊತೆ ಮಾತನಾಡಿದ್ದೇನೆ. ರೈಲ್ವೆ ಮಂಡಳಿಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.ಅಣುಸ್ಥಾವರ ಅವಸರ ಬೇಡ: ರಾಜ್ಯದಲ್ಲಿ ಮತ್ತೊಂದು ಅಣುಸ್ಥಾವರ ನಿರ್ಮಾಣದ ಅಗತ್ಯ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅಣುಸ್ಥಾವರ ನಿರ್ಮಾಣದ ವಿಚಾರದಲ್ಲಿ ಅವಸರದ ನಿರ್ಧಾರ ತೆಗೆದುಕೊಳ್ಳಬಾರದು. ಈಗ ಸಾಕಷ್ಟು ನವೀಕರಣ ಇಂಧನಗಳು ಬಂದಿವೆ. ಅಣುಸ್ಥಾವರ ಸ್ಥಾಪನೆಯಿಂದ ಸುತ್ತಲಿನ ಪರಿಸರದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಆಲೋಚನೆ ಮಾಡಬೇಕು. ಅಣುಸ್ಥಾವರ ನಿರ್ಮಾಣಕ್ಕೆ ಒಂದು ನೀತಿ ಇದೆ. ಅದನ್ನು ಅನುಸರಿಸದೇ ಯಾವುದೇ ರೀತಿಯ ಅವಸರದ ಕ್ರಮ ಸರಿಯಲ್ಲ ಎಂದು ಹೇಳಿದರು.