ಸಂಕಲ್ಪ ಉತ್ಸವದ ಸಮಾರೋಪಕ್ಕೆ ಚಾಲನೆ । ರಾಮಚಂದ್ರಾಪುರ ಮಠದ ಶಾಸನ ತಂತ್ರದ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಯಲ್ಲಾಪುರಭಾರತ ಯೋಗ ಭೂಮಿ. ಯೋಗ ತತ್ವದ ಅನುಸಂಧಾನವಾಗಬೇಕಾದರೆ ಭಾವ ಮತ್ತು ಭಾಷೆ ಹಾಗೂ ಸಮಷ್ಠಿ ಪ್ರಜ್ಞೆ, ಸೂಕ್ಷ್ಮ ಸ್ತೂಲಪ್ರಜ್ಞೆ ಪ್ರಮುಖ ಪಾತ್ರ ವಹಿಸುತ್ತದೆ. ಭಾವ ಭಾರತದ ಆತ್ಮ. ದೇಶದಲ್ಲಿ ೩೦೦ಕ್ಕೂ ಅಧಿಕ ಭಾಷೆಗಳಿವೆ. ಪ್ರತಿಭಾಷೆಗೂ ಅದರದ್ದೇ ಆದ ಶ್ರೇಷ್ಠತೆ ಇದೆ. ಕನ್ನಡ ಭಾಷೆಯಲ್ಲಿ ದಿವ್ಯತೆ ಇದೆ ಎಂದು ಸೆಲ್ಕೋ ಸೋಲಾರ ಕಂಪೆನಿಯ ಸಿಇಒ, ರಾಮಚಂದ್ರಾಪುರ ಮಠದ ಶಾಸನ ತಂತ್ರದ ಅಧ್ಯಕ್ಷ ಮೋಹನ ಹೆಗಡೆ ಹೇಳಿದರು.ಮಂಗಳವಾರ ಪಟ್ಟಣದ ಗಾಂಧೀ ಕುಟೀರದಲ್ಲಿ ಸಂಕಲ್ಪ ಉತ್ಸವದ ಸಮಾರೋಪಕ್ಕೆ ಚಾಲನೆ ನೀಡಿ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಜಿಲ್ಲೆಯಲ್ಲೇ ಯಲ್ಲಾಪುರಕ್ಕೆ ವಿಶೇಷ ಸ್ಥಾನವಿದೆ. ಡಾ. ನಾರಾಯಣ ಹುಳಸೆ ಯಲ್ಲಾಪುರದ ಹಳ್ಳಿಯಲ್ಲಿ ಹುಟ್ಟಿ ಇಂದು ಜಗತ್ತಿನ ಶ್ರೇಷ್ಠ ವೈದ್ಯರಲ್ಲಿ ಒಬ್ಬರಾಗಿ ಎತ್ತರಕ್ಕೇರಿದ್ದಾರೆ. ಆದರೂ ಅವರ ಸೌಜನ್ಯ, ವಿನಯ ಸಾಧಕರೆಲ್ಲರಿಗೂ ಮಾದರಿ. ಅಂತೆಯೇ ದೇಶ ನಿಶ್ಚಿಂತೆಯಿಂದ ಇರಲು ಯೋಧರು ಬೇಕು. ಅಂತಹ ಯೋಧರನ್ನು ಈ ವೇದಿಕೆಯಲ್ಲಿ ಸನ್ಮಾನಿಸಿರುವುದು ಸಮಾಜಕ್ಕೊಂದು ಉತ್ತಮ ಸಂದೇಶ ನೀಡಿದಂತಾಗುತ್ತದೆ. ಪ್ರಮೋದ ಹೆಗಡೆ ಕೇವಲ ಜಿಲ್ಲೆಯಲ್ಲ, ರಾಜ್ಯದ ಸಾಂಸ್ಕೃತಿಕ ರಾಯಭಾರಿ ಆಗಿದ್ದಾರೆ. ಯಕ್ಷಗಾನ ಕಲೆ ಕನ್ನಡ ಭಾಷೆಯನ್ನು ಉಳಿಸಿಕೊಂಡು ಬಂದಿದೆ. ಭಾವ ಮತ್ತು ಭಾಷೆ ಯಕ್ಷಗಾನದಲ್ಲಿ ಅವಿಭಾಜ್ಯ ಅಂಗವಾಗಿದೆ. ಬೇರೆ ಭಾಷೆಯ ಮೇಲಿನ ಗೌರವಕ್ಕೆ ಧಕ್ಕೆಯಾಗದಂತೆ ಮಾತೃಭಾಷೆ ಬೆಳೆಸುವ ಕಾರ್ಯವಾಗಬೇಕಿದೆ ಎಂದರು.ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯ ಮುಖ್ಯಸ್ಥ ಡಾ. ನಾರಾಯಣ ಹುಳ್ಸೆ ತಮಗಿತ್ತ ಪ್ರಶಸ್ತಿ ಸ್ವೀಕರಿಸಿ, ಮಾತನಾಡಿ, ದೇಶ ವಿದೇಶದಲ್ಲಿ ತೋರಿದ ಪ್ರೀತಿಗಿಂತ ನನ್ನ ಊರಲ್ಲಿ ದೊರೆತ ಗೌರವ, ಪ್ರೀತಿ ಮರೆಯಲಸಾಧ್ಯ. ಇಚ್ಚಾಶಕ್ತಿಯ ಕೊರತೆ ನಾವಿಂದು ಕಾಣುತ್ತಿದ್ದೇವೆ. ಸಾಧನೆ ಸುಲಭದ ಸಾಧನವಲ್ಲ. ಸಾಧಿಸಬೇಕು ಎನ್ನುವ ಇಚ್ಚಾಶಕ್ತಿ, ಅನನ್ಯ ಪರಿಶ್ರಮ ಸಾಧನೆಗೆ ಕಾರಣವಾಗುತ್ತದೆ ಎಂದರು. ಸಂಕಲ್ಪದ ಅಧ್ಯಕ್ಷ ಪ್ರಮೋದ ಹೆಗಡೆ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಶಂಕರ ಭಟ್ಟ ಅಭಿನಂದನಾ ನುಡಿಗಳನ್ನಾಡಿದರು. ಈ ಸಂದರ್ಭ ಮೂಳೆ ಶಸ್ತ್ರಚಿಕಿತ್ಸೆ ತಜ್ಞ ಡಾ ನಾರಾಯಣ ಹುಳ್ಸೆ ಅವರಿಗೆ ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.ನಿವೃತ್ತ ಯೋಧರಾದ ಸುಬ್ರಹ್ಮಣ್ಯ ಭಟ್ಟ, ತುಳಸಿದಾಸ ನಾಯ್ಕ, ಪ್ರಭಾಕರ ನಾಯ್ಕ, ಮಹಾದೇವ ಚಂದ್ರು, ಪಿ.ಎಸ್. ನಾಯ್ಕ, ಧೂಳು ಸಿಂಧೆ ಅವರನ್ನು ಸನ್ಮಾನಿಸಲಾಯಿತು.ಪ್ರಮುಖರಾದ ಎಂ.ಎನ್. ಹುಳಸೆ, ಎಸ್.ಎನ್. ಭಟ್ಟ ಏಕಾನ, ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಎಲ್.ಪಿ. ಭಟ್ಟ ಗುಂಡ್ಕಲ್, ಗಣಪತಿ ಬೋಳಗುಡ್ಡೆ, ದತ್ತಾತ್ರೆಯ ಭಟ್ಟ, ನಿತ್ಯಾನಂದ (ನಂದು) ಗಾಂವ್ಕರ್, ಡಾ. ರಮೇಶ, ಪ್ರಶಾಂತ ಹೆಗಡೆ, ರಾಮಚಂದ್ರಾಪುರ ಮಠದ ಕಾರ್ಯದರ್ಶಿ ಮಹೇಶ ಚಟ್ನಳ್ಳಿ ಉಪಸ್ಥಿತರಿದ್ದರು.ಸೀತಾ ಭಟ್ಟ ಸಂಗಡಿಗರು ಪ್ರಾರ್ಥಿಸಿದರು. ಡಿ.ಎನ್. ಗಾಂವ್ಕರ್ ಸ್ವಾಗತಿಸಿದರು. ಎಂ.ರಾಜಶೇಖರ ನಿರ್ವಹಿಸಿದರು. ಚಂದ್ರಕಲಾ ಭಟ್ಟ ಸನ್ಮಾನ ಪತ್ರ ವಾಚಿಸಿದರು. ಪ್ರಸಾದ ಹೆಗಡೆ ವಂದಿಸಿದರು.