ಜನಾರ್ದನ ರೆಡ್ಡಿಯ ಗಂಗಾವತಿ ಮನೆಯಲ್ಲಿ ನೀರವ ಮೌನ

KannadaprabhaNewsNetwork | Published : May 7, 2025 12:53 AM

ಸಾರಾಂಶ

ರಾಜಕೀಯ ನೆಲೆ ಕಂಡುಕೊಳ್ಳಲು ಗಂಗಾವತಿಯತ್ತ ಮುಖ ಮಾಡಿದ್ದ ಜನಾರ್ದನ ರೆಡ್ಡಿ ವಿಧಾನಸಭೆ ಚುನಾವಣೆಗೂ ಪೂರ್ವದಲ್ಲಿ ಗಂಗಾವತಿಯ ಕನಕಗಿರಿ ರಸ್ತೆಯ ಮಾರ್ಗದಲ್ಲಿ ಮನೆ ಖರೀದಿಸಿದ್ದರು. ಚುನಾವಣೆ ಬಳಿಕವೂ ಹಲವು ದಿನ ಇಲ್ಲಿಯೇ ವಾಸ್ತವ್ಯ ಮಾಡಿದಾಗ ದಿನವೀಡಿ ಮನೆ ಬೆಂಬಲಿಗರು, ಮುಖಂಡರಿಂದ ತುಂಬಿರುತ್ತಿತ್ತು.

ಗಂಗಾವತಿ:ಶಾಸಕ ಜನಾರ್ದನ ರೆಡ್ಡಿ ಅವರಿಗೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಗಂಗಾವತಿಯ ಕನಕಗಿರಿ ರಸ್ತೆಯಲ್ಲಿರುವ ಅವರ ನಿವಾಸಿ ಕಾರ್ಯಕರ್ತರಿಲ್ಲದೆ ಬಣಗುಡುತ್ತಿದೆ. ನೀರವ ಮೌನ ಆವರಿಸಿದೆ.ಮಂಗಳವಾರ ಮಧ್ಯಾಹ್ನ ಶಿಕ್ಷೆ ಅವಧಿ ಪ್ರಕಟವಾಗುತ್ತಿದ್ದಂತೆ ಅವರ ಬೆಂಬಲಿಗರಲ್ಲಿ ಸಿಡಿಲಾಘಾತ ಮೂಡಿಸಿದೆ. ನಗರಸಭೆಯ ಚುಕ್ಕಾಣಿ ಹಿಡಿಯಲು ಕಾರಣವಾಗಿದ್ದ ಶಾಸಕರು, ಮೂರು ದಿನಗಳ ಹಿಂದೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡಿದ್ದರು. ಈ ಮೂಲಕ ಎರಡನೇ ಬಾರಿ ಕಾಂಗ್ರೆಸ್ಸಿಗೆ ಮುಖಭಂಗ ಮಾಡಿದ್ದರು.

ಮನೆ ಖರೀದಿ:

ರಾಜಕೀಯ ನೆಲೆ ಕಂಡುಕೊಳ್ಳಲು ಗಂಗಾವತಿಯತ್ತ ಮುಖ ಮಾಡಿದ್ದ ಜನಾರ್ದನ ರೆಡ್ಡಿ ವಿಧಾನಸಭೆ ಚುನಾವಣೆಗೂ ಪೂರ್ವದಲ್ಲಿ ಗಂಗಾವತಿಯ ಕನಕಗಿರಿ ರಸ್ತೆಯ ಮಾರ್ಗದಲ್ಲಿ ಮನೆ ಖರೀದಿಸಿದ್ದರು. ಚುನಾವಣೆ ಬಳಿಕವೂ ಹಲವು ದಿನ ಇಲ್ಲಿಯೇ ವಾಸ್ತವ್ಯ ಮಾಡಿದಾಗ ದಿನವೀಡಿ ಮನೆ ಬೆಂಬಲಿಗರು, ಮುಖಂಡರಿಂದ ತುಂಬಿರುತ್ತಿತ್ತು. ಕಳೆದ ವರ್ಷ ಬಳ್ಳಾರಿಗೆ ತೆರಳಲು ಕೋರ್ಟ್‌ ಆದೇಶ ನೀಡಿದ ಬಳಿಕ ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ವಾಸ್ತವ್ಯ ಮಾಡಿದ್ದರು. ಕಾರ್ಯಕ್ರಮ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಗಾಗ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರು. ಇದೀಗ ಅವರಿಗೆ ಜೈಲು ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಇಡೀ ಮನೆಯಲ್ಲಿ ನೀರವಮೌನ ಆವರಿಸಿದೆ. ಕಾರ್ಯಕರ್ತರು ಸಹ ತಮ್ಮ ನಾಯಕನಿಗೆ ಹೀಗಾಯಿತಲ್ಲ ಎಂದು ಪರಿತಪ್ಪಿಸುತ್ತಿದ್ದಾರೆ.

ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ:

ಕಾರ್ಯಕರ್ತರು, ಅಭಿಮಾನಿಗಳು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಅಂಜನಾದ್ರಿ ಆಂಜನೇಯ ಸ್ವಾಮಿಯ ಆಶೀರ್ವಾದ ಇರುವುದರಿಂದ ಶಾಸಕರಿಗೆ ಶಿಕ್ಷೆಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಗಲಿದೆ. ಶೀಘ್ರ ಪ್ರಕರಣದಿಂದ ಮುಕ್ತಿ ಪಡೆಯಲಿದ್ದಾರೆಂದು ಬಿಜೆಪಿ ಮುಖಂಡ ಹಾಗೂ ರೆಡ್ಡಿ ಆಪ್ತ ಮನೋಹರಗೌಡ ಹೇರೂರು ಹೇಳಿದ್ದಾರೆ.

ಶೀಘ್ರ ನ್ಯಾಯಾಂಗ ಬಂಧನದಿಂದ ಹೊರಗೆ ಬರುತ್ತಾರೆ ಎಂದು ನಗರಸಭೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ ವಿಶ್ವಾಸ ವ್ಯಕ್ತಪಡಿಸಿದ್ದು, ಒಂದು ತಿಂಗಳಲ್ಲಿ ಗಂಗಾವತಿಗೆ ಆಗಮಿಸಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ ಎಂದಿದ್ದಾರೆ.

ಕೋಟ್‌...

ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪ್ರಕರಣ ನ್ಯಾಯಾಲಯದಲ್ಲಿದ್ದು, ಇದರ ಬಗ್ಗೆ ಶಾಸಕರ ಪರ ವಕೀಲರು ಕಾನೂನು ಮೂಲಕ ಇತ್ಯರ್ಥಗೊಳಿಸುತ್ತಾರೆ.

ಪರಣ್ಣ ಮುನವಳ್ಳಿ, ಮಾಜಿ ಶಾಸಕ

Share this article