ಗದಗ: ಸತ್ಯ, ಅಹಿಂಸೆ, ತ್ಯಾಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಜಗತ್ತಿಗೆ ಮಾದರಿಯಾದ ಜೀವನದ ಮೌಲ್ಯಗಳನ್ನು ತಮ್ಮ ಬದುಕಿನ ಮೂಲಕ ತೋರಿದ ಮಹಾತ್ಮ ಗಾಂಧೀಜಿಯವರು ಪ್ರತಿಯೊಬ್ಬರಲ್ಲೂ ಇದ್ದಾರೆ. ಅವರು ಬಿತ್ತಿದ ದೇಶಾಭಿಮಾನ ರಾಷ್ಟ್ರದ ಪ್ರಗತಿಗೆ ಕಾರಣವಾಗಿದೆ ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ತಿಳಿಸಿದರು.ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ರಂಗಾಯಣ ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಆಶ್ರಯದಲ್ಲಿ ನಡೆದ ನಮ್ಮೊಳಗೊಬ್ಬ ಗಾಂಧಿ ನಾಟಕ ಪ್ರಯೋಗ ಉದ್ಘಾಟಿಸಿ ಮಾತನಾಡಿ, ಜೀವಂತ ಅಭಿವ್ಯಕ್ತಿ ಕಲೆಯಾದ ರಂಗ ಕಲೆಗೆ ಜಿಲ್ಲೆ ಐತಿಹಾಸಿಕ ಹಿನ್ನೆಲೆ ಮಹತ್ವ ಹೊಂದಿದೆ. ಶಿವಮೊಗ್ಗ ರಂಗಾಯಣ ಪ್ರಸ್ತುತ ಪಡಿಸುವ ನಮ್ಮೊಳಗೊಬ್ಬ ಗಾಂಧಿ ನಾಟಕ ಇಲ್ಲಿನ ಪ್ರೇಕ್ಷಕರಿಗೆ ಒಂದು ಉತ್ತಮ ಅವಕಾಶ ಎಂದರು. ಹಿರಿಯ ರಂಗಕರ್ಮಿ ಸಶೀಲೇಂದ್ರ ಜೋಶಿ ಮಾತನಾಡಿ, ಕನ್ನಡ ರಂಗಭೂಮಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರ. ಸಕ್ಕರಿ ಬಾಳಾಚಾರ್ಯರು, ಶಿರಹಟ್ಟಿಯ ವೆಂಕೊಬರಾಯರು, ಸದಾಶಿವರಾಯ ಗರುಡರು, ಜಯತೀರ್ಥ ಜೋಶಿ ಅವರ ರಂಗಸೇವೆ ಸದಾ ಸ್ಮರಣೀಯ ಎಂದರು. ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರಾದ ಮೆಹಬೂಬಸಾಬ ಡಿ. ನದಾಫ್, ಹಿರಿಯ ಸಾಂಸ್ಕೃತಿಕ ಚಿಂತಕ ಡಾ. ಜಿ.ಬಿ. ಪಾಟೀಲ, ರವಿ ಎಲ್. ಗುಂಜೀಕರ್, ಶಂಕರ್, ಡಾ. ಅನಂತ ಶಿವಪೂರ, ಡಾ. ವಾಣಿ ಶಿವಪೂರ, ಪ್ರೊ. ಸಿದ್ದು ಯಾಪಲಪರವಿ, ಅಂದಾನೆಪ್ಪ ವಿಭೂತಿ, ರುದ್ರಣ್ಣ ಗುಳಗುಳಿ, ಡಾ. ದತ್ತಪ್ರಸನ್ನ ಪಾಟೀಲ, ಸಿ.ವಿ. ಬಡಿಗೇರ, ವಿಶ್ವನಾಥ ಬೇಂದ್ರೆ, ಶ್ರೀನಿವಾಸ ಗುಂಜಳ, ಕೃಷ್ಣ ಕಡ್ಲಿಕೊಪ್ಪ, ಬಸವರಾಜ ಬಡಿಗೇರ, ಶ್ರೀಧರ ಕೊಣ್ಣೂರ, ಮಧುಸೂದನ ವಿಶ್ವಕರ್ಮ ಸೇರಿದಂತೆ ಅನೇಕರು ಇದ್ದರು. ಮೌನೇಶ ಸಿ. ಬಡಿಗೇರ(ನರೇಗಲ್ಲ) ಸ್ವಾಗತಿಸಿದರು. ಅಧ್ಯಾಪಕ ವಿಶ್ವನಾಥ ಕಮ್ಮಾರ ನಿರೂಪಿಸಿ, ವಂದಿಸಿದರು.