ಗದಗ: ಇತಿಹಾಸಪ್ರಿಯರ ಮತ್ತು ಪುರಾತತ್ವ ಇಲಾಖೆಯ ಕುತೂಹಲ ಕೆರಳಿಸಿರುವ ಜಿಲ್ಲೆಯ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯವು ಶನಿವಾರ 9ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿ ದಿನವೂ ಇಲ್ಲಿನ ಮಣ್ಣಿನಿಂದ ಹೊಸ ಇತಿಹಾಸದ ಕುರುಹುಗಳು ಆಚೆ ಬರುತ್ತಿದ್ದರೆ, ಮತ್ತೊಂದೆಡೆ ಗ್ರಾಮದ ಸಾಮಾನ್ಯ ಮನೆಗಳ ಗೋಡೆಗಳೇ ಶಿಲ್ಪಕಲೆಯ ಗಣಿಗಳಾಗಿರುವುದು ಅಚ್ಚರಿ ಮೂಡಿಸಿದೆ.
ಪತ್ತೆಯಾದ ಶಿಲೆಗಳಲ್ಲಿ ದಾನ ಶಿಲೆ, ದ್ವಾರಪಾಲಕನ ಶಿಲೆ ಹಾಗೂ ಬೋದಿಗೆ ಶಿಲೆಗಳು ಪ್ರಮುಖವಾಗಿವೆ. ಪೂರ್ವಜರು ಇವುಗಳನ್ನು ಬಳಸಿಕೊಂಡು ಗೋಡೆ ನಿರ್ಮಿಸಿದ್ದರು, ನಮಗೆ ಇದರ ಮಹತ್ವ ತಿಳಿದಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದು, ಸರ್ಕಾರ ಮುಂದೆ ಬಂದರೆ ಈ ಶಿಲೆಗಳನ್ನು ಹಸ್ತಾಂತರಿಸಲು ಸಿದ್ಧರಿದ್ದಾರೆ.
ಇದೇ ಮಾದರಿಯಲ್ಲಿ ರವದಿ ಕುಟುಂಬಕ್ಕೆ ಸೇರಿದ ಜಮೀನಿನ ಬಾವಿಯ ಕಟ್ಟೆಯಲ್ಲೂ ಅಪರೂಪದ ಶಿಲಾಕೃತಿ ಪತ್ತೆಯಾಗಿದೆ. ಕಲ್ಯಾಣ ಚಾಲುಕ್ಯರ ಕಾಲದ ದೇವಸ್ಥಾನದ ಬಾಗಿಲಿಗೆ ಬಳಸುವ ಕಂಬದ ಮಾದರಿಯ ಈ ಶಿಲೆಯಲ್ಲಿ, ನಾಟ್ಯ ಭಂಗಿಯಲ್ಲಿರುವ ಸುಂದರ ಕಲಾಕೃತಿ ಕಂಡುಬಂದಿದೆ. ಶತಮಾನಗಳಿಂದ ಬಾವಿಯಲ್ಲೇ ಇದ್ದ ಈ ಶಿಲೆಯನ್ನು ಸಂರಕ್ಷಿಸಲು ಪುರಾತತ್ವ ಇಲಾಖೆಗೆ ಹಸ್ತಾಂತರಿಸಲು ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ. ಇದರೊಟ್ಟಿಗೆ ನಾಗಮಣಿ ನಾಗಶಿಲೆಯೂ ರವದಿ ಕುಟುಂಬದ ಜಮೀನಿನಲ್ಲಿ ಪತ್ತೆಯಾಗಿದ್ದು, ಏಳು ಹೆಡೆಯ ಹಾವಿನ ಉಬ್ಬು ಚಿತ್ರದ ಶಿಲೆ ಈಗ ಜನರನ್ನು ಬೆರಗುಗೊಳಿಸುತ್ತಿದೆ. ವಿಜಯನಗರ ಕಾಲದ ಈ ನಾಗಶಿಲೆಯು ಅತ್ಯಂತ ವಿಶಿಷ್ಟವಾಗಿದ್ದು, ಪ್ರಸ್ತುತ ಕುಟುಂಬದವರಿಂದ ಪೂಜೆಗೊಳ್ಳುತ್ತಿದೆ.ತಜ್ಞರ ವಿಶ್ಲೇಷಣೆ: ಹಲವಾರು ಶಾಸನ ತಜ್ಞರು ಕೆಲವು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದು, ಲಕ್ಕುಂಡಿ 9ನೇ ಶತಮಾನದಿಂದಲೇ ರಾಷ್ಟ್ರಕೂಟರ ಆಳ್ವಿಕೆಗೆ ಒಳಪಟ್ಟಿತ್ತು. ನಂತರ ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ಯಾದವರು, ಹೊಯ್ಸಳರು ಮತ್ತು ವಿಜಯನಗರದ ಅರಸರು ಇದನ್ನು ಆಳಿದ್ದಾರೆ. ದಾನ ಚಿಂತಾಮಣಿ ಅತ್ತಿಮಬ್ಬೆಯ ಅರಮನೆ ಇಲ್ಲೇ ಇತ್ತು ಎಂದು ಶಾಸನಗಳು ಹೇಳುತ್ತವೆ. ಆಕೆ 1001 ಜಿನ ದೇವಾಲಯಗಳನ್ನು ಕಟ್ಟಿಸಿದ್ದಳು ಎಂಬ ಹೆಗ್ಗಳಿಕೆ ನಾಡಿಗಿದೆ.
ಆದರೆ, ಜನಸಾಮಾನ್ಯರಲ್ಲಿರುವ ನಿಧಿಯ ನಂಬಿಕೆಯನ್ನು ಅವರು ತಳ್ಳಿಹಾಕಿದ್ದು, ಶಾಸನಗಳಲ್ಲಿ ನಿಧಿಯ ಉಲ್ಲೇಖವಿಲ್ಲ, ಬದಲಾಗಿ ಅಂದಿನ ಟಂಕಶಾಲೆಯಲ್ಲಿ ನಾಣ್ಯಗಳು ಸಿಗುವ ಸಾಧ್ಯತೆ ಇದೆ ಎನ್ನುತ್ತಾರೆ.ಲಕ್ಕುಂಡಿಯ ಪ್ರತಿ ಮಣ್ಣಿನ ಕಣದಲ್ಲೂ ಇತಿಹಾಸ ಅಡಗಿದೆ. ಈಗ ಪತ್ತೆಯಾಗುತ್ತಿರುವ ಶಿಲೆಗಳು ಲಕ್ಕುಂಡಿಯ ಗತವೈಭವವನ್ನು ಮರುಸ್ಥಾಪಿಸಲು ನೆರವಾಗಲಿವೆ. ಸರ್ಕಾರ ಮತ್ತು ಪುರಾತತ್ವ ಇಲಾಖೆ ಎಚ್ಚೆತ್ತುಕೊಂಡು ಗ್ರಾಮದ ಮನೆಗಳಲ್ಲಿ ಹರಡಿ ಹೋಗಿರುವ ಈ ಸ್ಮಾರಕಗಳನ್ನು ಸಂಗ್ರಹಿಸಿ, ಒಂದು ಸುಸಜ್ಜಿತ ವಸ್ತು ಸಂಗ್ರಹಾಲಯ ನಿರ್ಮಿಸಬೇಕು ಎನ್ನುತ್ತಾರೆ ವೀಕ್ಷಿಸಲು ಬಂದ ಸಾರ್ವಜನಿಕರು.ಉತ್ಖನನ ಸ್ಥಳಕ್ಕೆ ಶಾಸಕ ಸಿ.ಸಿ. ಪಾಟೀಲ ಭೇಟಿಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನ ಸ್ಥಳಕ್ಕೆ ಶನಿವಾರ ಶಾಸಕ ಸಿ.ಸಿ. ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಉತ್ಖನನದ ವೇಳೆ ಪುರಾತನ ಕಲ್ಲಿನ ಅವಶೇಷಗಳು ಪತ್ತೆಯಾಗಿರುವ ಹಿನ್ನೆಲೆ ಈ ಭಾಗದ ಜನರ ಆತಂಕ ಮತ್ತು ಮುಂದಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ಅವರು ಸಮಾಲೋಚನೆ ನಡೆಸಿದರು.
ಉತ್ಖನನ ಕಾರ್ಯ ನಡೆಯುತ್ತಿರುವ ಪ್ರದೇಶದ ನಿವಾಸಿಗಳಲ್ಲಿ ಮನೆ ಕಳೆದುಕೊಳ್ಳುವ ಭೀತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಸ್ಥಳಾಂತರದ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗಬಾರದು. ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ಮುಂದಿನ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಮತ್ತು ಉತ್ಖನನ ಕಾರ್ಯಕ್ಕೆ ಸರ್ಕಾರದಿಂದ ಸಂಪೂರ್ಣ ಬೆಂಬಲ ಸಿಗಲಿದೆ ಎಂದು ಭರವಸೆ ನೀಡಿದರು.ಜ. 26ರಂದು ಸಂಸದ ಪಿ.ಸಿ. ಗದ್ದಿಗೌಡ್ರ ಅವರು ಸಹ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಈಗಾಗಲೇ ರಿತ್ತಿ ಕುಟುಂಬಕ್ಕೆ ಸೈಟ್ ಹಾಗೂ ಮನೆ ನಿರ್ಮಾಣದ ಭರವಸೆ ನೀಡಲಾಗಿದೆ ಎಂದರು.ಜಿ ರಾಮ್ ಜಿ ಪರಿಣಾಮಕಾರಿ ಯೋಜನೆಇದೇ ವೇಳೆ ಕೇಂದ್ರ ಸರ್ಕಾರದ ಜಿ ರಾಮ್ ಜಿ ಯೋಜನೆಯ ಬಗ್ಗೆ ಮಾತನಾಡಿದ ಅವರು, ಇದು ಅತ್ಯಂತ ಪರಿಣಾಮಕಾರಿ ಯೋಜನೆಯಾಗಿದೆ. ಮುಂಚೆ 100 ದಿನಗಳಿದ್ದ ಕೆಲಸದ ಅವಧಿಯನ್ನು ಈಗ 125 ದಿನಗಳಿಗೆ ಹೆಚ್ಚಿಸಲಾಗಿದೆ. ವಿಕಸಿತ್ ಭಾರತ್ ಅಭಿಯಾನದಡಿ ಶಾಲಾ ಕಟ್ಟಡ, ಅಂಗನವಾಡಿ ಮತ್ತು ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಈ ಯೋಜನೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನವನ್ನು ನೀಡಲಿದೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.