ರಟ್ಟೀಹಳ್ಳಿಯಲ್ಲಿ ಬೀದಿ ನಾಯಿಗಳ ಉಪಟಳಕ್ಕಿಲ್ಲ ಬ್ರೇಕ್‌

KannadaprabhaNewsNetwork |  
Published : Oct 06, 2025, 01:01 AM IST
ಶಿವಾಜಿ ಸರ್ಕಲ್‌ನಲ್ಲಿ ರಸ್ತೆ ಮಧ್ಯದಲ್ಲೇ ಬೀದಿ ನಾಯಿಗಳ ಹಿಂಡು. | Kannada Prabha

ಸಾರಾಂಶ

ರಟ್ಟೀಹಳ್ಳಿ ಪಟ್ಟಣದಾದ್ಯಂತ ಬೀದಿ ನಾಯಿಗಳ ಹಾವಳಿಗೆ ಜನತೆ ರೋಸಿಹೋಗಿದ್ದು, ಸಂಬಂಧ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಸತೀಶ ಸಿ.ಎಸ್.

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ಪಟ್ಟಣದಾದ್ಯಂತ ಬೀದಿ ನಾಯಿಗಳ ಹಾವಳಿಗೆ ಜನತೆ ರೋಸಿಹೋಗಿದ್ದು, ಸಂಬಂಧ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.ಬೀದಿ ನಾಯಿಗಳ ಹಾವಳಿಯಿಂದಾಗಿ ಮಕ್ಕಳು, ವೃದ್ಧರು, ಮಹಿಳೆಯರು ಓಡಾಡುವುದೇ ದುಸ್ತರವಾಗಿದೆ. ಸಾರ್ವಜನಿಕರು ಭಯದಲ್ಲೇ ಜೀವನ ನಡೆಸುವಂತಾಗಿದೆ ಎಂದು ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ಭಗತ್‍ಸಿಂಗ ಸರ್ಕಲ್, ಶಿವಾಜಿ ಸರ್ಕಲ್, ರಾಣಿಬೆನ್ನೂರ-ಮಾಸೂರ ರಸ್ತೆ, ಕುಮಾರೇಶ್ವರ ಕಾಲೇಜ್ ರಸ್ತೆ, ದುರ್ಗಾದೇವಿ ನಗರ, ತುಮ್ಮಿನಕಟ್ಟಿ ರಸ್ತೆ ಹೀಗೆ ಅನೇಕ ಪ್ರಮುಖ ರಸ್ತೆಗಳಲ್ಲೇ ಹತ್ತಾರು ನಾಯಿಗಳ ಗುಂಪುಗಳು ಕಂಡು ಬರುತ್ತಿದೆ. ಆ ಮಾರ್ಗವಾಗಿ ಓಡಾಡುವ ಬೈಕ್‍ಗಳಿಗೆ ಅಡ್ಡಲಾಗಿ ಬಂದು ಬೈಕ್ ಸವಾರರು ಬಿದ್ದು ಕೈ ಕಾಲು ಮುರಿದುಕೊಳ್ಳುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ದಿನ ಶಾಲಾ ಕಾಲೇಜ್‍ಗೆ ತೆರಳುವ ವಿದ್ಯಾರ್ಥಿಗಳು, ವಾಯು ವಿಹಾರಕ್ಕೆ ತೆರಳುವ ವೃದ್ಧರು, ಸಾರ್ವಜನಿಕರು ನಾಯಿಗಳ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುವುದು ಸರ್ವೇ ಸಾಮಾನ್ಯವಾಗಿದೆ. ನಾಯಿಗಳ ಹಾವಳಿಯಿಂದಾಗಿ ಅಪಘಾತಗಳು ಹೆಚ್ಚುತ್ತಿವೆ. ಕಳೆದ 6 ತಿಂಗಳಲ್ಲಿ 200ಕ್ಕೂ ಹೆಚ್ಚು ಬೀದಿ ನಾಯಿಗಳ ದಾಳಿಗೆ ಒಳಗಾದ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಸ್ಥಳೀಯ ಆಡಳಿತ ಅವುಗಳನ್ನು ಹಿಡಿಸಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ ಬೇರೆಡೆ ಸ್ಥಳಾಂತರಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಚರ್ಮ ರೋಗ: ಬೀದಿ ನಾಯಿಗಳಿಗೆ ಹುರುಕು, ಕಜ್ಜಿ ರೋಗ ಕಾಣಿಸಿಕೊಳ್ಳುತ್ತಿದೆ. ಒಂದು ನಾಯಿಯಿಂದ ಮತ್ತೊಂದು ನಾಯಿಗೆ ಈ ರೋಗ ಕಾಣಿಸಿಕೊಳ್ಳುತ್ತಿದೆ. ಇದು ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರಿಗೂ ಅಪಾಯವನ್ನುಂಟು ಮಾಡುವ ಭೀತಿ ಕಾಡುತ್ತಿದೆ. ಚರ್ಮರೋಗಕ್ಕೆ ಒಳಗಾದ ಬೀದಿ ನಾಯಿಗಳು ಎಲ್ಲೆಡೆ ಕಂಡು ಬರುತ್ತಿವೆ, ಪರಸ್ಪರ ಕಚ್ಚಾಟದಿಂದ ರಕ್ತದ ಕಲೆಗಳಿಂದ ಕೂಡಿದ ನಾಯಿಗಳು ನೆಲಕ್ಕೆ ಬಿದ್ದು ಒದ್ದಾಡುತ್ತವೆ. ಅಂತಹ ನಾಯಿಗಳನ್ನು ಹಿಡಿದು ಸೂಕ್ತ ಚಿಕಿತ್ಸೆ ಕೊಡಿಸಿ ಸ್ಥಳಾಂತರಿಸಲು ನಿವಾಸಿಗಳು ಒತ್ತಾಯಿಸುತ್ತಿದ್ದಾರೆ. ಓಡಾಡಲು ಹೆದರಿಕೆ: ರೋಗ ತಗುಲಿದ ನಾಯಿಗಳು ವಿಚಿತ್ರವಾಗಿ ವರ್ತಿಸುತ್ತ ಪಟ್ಟಣದ ಎಲ್ಲೆಡೆ ಓಡಾಡುತ್ತಿರುತ್ತವೆ. ಅವುಗಳನ್ನು ಕಂಡ ಸಾರ್ವಜನಿಕರು ಆ ಮಾರ್ಗವಾಗಿ ಸಂಚರಿಸಲು ಭಯಗೊಂಡು ಬೇರೆ ಮಾರ್ಗಗಳಲ್ಲಿ ಸಂಚರಿಸುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಾಯಿಗಳಿಗೆ ರೇಬಿಸ್ ಲಸಿಕೆಯನ್ನು ಹಾಕಿಸುವಂತೆ ಕೆಲವರು ಆಗ್ರಹಿಸುತ್ತಿದ್ದಾರೆ.ಸ್ವಚ್ಛತೆಗೆ ಆಗ್ರಹ: ಪಟ್ಟಣದ ಪ್ರಮುಖ ರಸ್ತೆಗಳಲ್ಲೇ ಮೀನು ಮಾರಾಟ, ಚಿಕನ್, ಮಟನ್ ಸ್ಟಾಲ್‍ಗಳಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ ನಾಯಿಗಳು ಅಂಗಡಿ ಮುಂದೆ ಜಮಾಯಿಸಿ ತಮ್ಮ ಕ್ರೌರ್ಯವನ್ನು ಮೆರೆಯುತ್ತಿವೆ. ಚರ್ಮ ರೋಗಕ್ಕೆ ಒಳಗಾದ ಬೀದಿ ನಾಯಿಗಳಿಂದಾಗಿ ಮುಂದಾಗುವ ಅಪಾಯವನ್ನು ತಡೆಯುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿಯಿಂದಾಗಿ ಸಾರ್ವಜನಿಕರು, ವೃದ್ಧರು, ಮಹಿಳೆಯರು, ಮಕ್ಕಳು ಓಡಾಡುವುದೇ ದುಸ್ತರವಾಗಿದೆ. ನಾಯಿಗಳು ದಾಳಿ ಮಾಡುವುದನ್ನು ಅನೇಕ ಬಾರಿ ನೋಡಿದ್ದು ಅವುಗಳನ್ನು ಓಡಿಸಿ ಮಹಿಳೆಯನ್ನು ರಕ್ಷಿಸಲಾಗಿತ್ತು. ಆದ್ದರಿಂದ ತಕ್ಷಣ ಪಟ್ಟಣ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಪಟ್ಟಣ ಪಂಚಾಯತ್ ಮುಂದೆ ಧರಣಿ ನಡೆಸಲಾಗುವುದು ಎಂದು ಸ್ಥಳೀಯ ನಿವಾಸಿ ಹನಮಂತಪ್ಪ ಗಾಜೇರ ಹೇಳಿದರು.

ಸುಪ್ರೀಂ ಕೋರ್ಟ್‌ ಆದೇಶದಂತೆ ಎಬಿಸಿ ಕಾರ್ಯಕ್ರಮದಡಿ ಅವುಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಬೇಕು. ಆದ್ದರಿಂದ ಹಿರೇಕೆರೂರಿನಲ್ಲಿ ಸ್ಥಳ ಗುರುತಿಸಲಾಗಿದ್ದು, ಸದ್ಯದಲ್ಲಿಯೇ ಇಲ್ಲಿನ ನಾಯಿಗಳನ್ನು ಹಿಡಿದು ಶಸ್ತ್ರ ಚಿಕಿತ್ಸೆ ನೀಡಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲಾಗುವುದು ಪಪಂ ಮುಖ್ಯಾಧಿಕಾರಿ ಸಂತೋಷ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ