ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯ ಸರ್ಕಾರ ಕೈಗೊಂಡಿರುವ ಗಣತಿ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿಲುವು ಕಾಣಿಸುತ್ತಿಲ್ಲ. ಹಲವಾರು ಗೊಂದಲಗಳಿಂದ ಕೂಡಿದ್ದು, ಈಗಾಗಲೇ ಹಲವಾರು ಅಂಶಗಳನ್ನು ಸರ್ಕಾರ ಕೈಬಿಡುವ ಮೂಲಕ ಮುಜುಗರ ಅನುಭವಿಸಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಸದ್ಯ ನಡೆಸುತ್ತಿರುವ ಗಣತಿ ಕಾರ್ಯದಲ್ಲಿ ಸಾಕಷ್ಟು ಗೊಂದಲಗಳು ಇದ್ದು, ಸಾರ್ವಜನಿಕ ವಿರೋಧ ಕಂಡುಬಂದ ಹಿನ್ನೆಲೆಯಲ್ಲಿ ಕೆಲ ಅಂಶಗಳನ್ನು ಗಣತಿ ಪಟ್ಟಿಯಿಂದ ಸರ್ಕಾರ ಕೈಬಿಟ್ಟಿದೆ. ಸರ್ಕಾರ ಈಗ ನಡೆಸುತ್ತಿರುವ ಗಣತಿ ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದ ಅವರು, ಗಣತಿ ಕಾರ್ಯದಿಂದ ಜನತೆಗೆ ಯಾವುದೇ ಪ್ರಯೋಜನ ಆಗಲ್ಲ. ರಾಜ್ಯದ ಜನತೆಯೂ ಅಷ್ಟಾಗಿ ಆಸಕ್ತಿ ಹೊಂದಿಲ್ಲ. ಆದಾಗ್ಯೂ ಗಣತಿ ವಿರೋಧಿಸುವುದಿಲ್ಲ. ಗಣತಿದಾರರು ಬಂದಾಗ ಅಗತ್ಯ ಮಾಹಿತಿ ನೀಡುವುದಾಗಿ ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಪ್ರಕೃತಿ ವಿಕೋಪ ಸೇರಿದಂತೆ ನಾನಾ ಅವಘಡಗಳ ಸಂದರ್ಭದಲ್ಲಿ ವಿದಾಯಕ ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಇಂತಹ ಸಮಾಜ ಮುಖಿ ಸಂಘಟನೆಯ ಪಥಸಂಚಲನ ಕಾರ್ಯಕ್ರಮ ಅ.5 ರಂದು ಬಾಗಲಕೋಟೆಯಲ್ಲಿ ಜರುಗಲಿದೆ ಎಂದು ಮಾಹಿತಿ ನೀಡಿದರು.ದೇಶದ ಕಟ್ಟುವ ಕಾರ್ಯದಲ್ಲಿ ನಿರತವಾಗಿರುವ ಆರ್‌ಎಸ್ಎಸ್. ವ್ಯಕ್ತಿ, ಪಕ್ಷಕ್ಕಿಂತ ರಾಷ್ಟ್ರ ದೊಡ್ಡದು ಎಂದು ಪ್ರತಿಪಾದಿಸುತ್ತದೆ. ಅ.5ರಂದು ನಡೆಯಲಿರುವ ಆರ್‌ಎಸ್‌ಎಸ್ ಪಥಸಂಚಲನ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಬೇಕೆಂದು ಮನವಿ ಮಾಡಿದರು.ಇಂದು ಆಯುಧ ಪೂಜೆ: ನವರಾತ್ರಿ ಹಿನ್ನೆಲೆಯಲ್ಲಿ ಬುಧವಾರ ಆಯುಧ ಪೂಜೆ ಇದ್ದು, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಆಯುಧ ಪೂಜೆ ನೆರವೇರಿಸಬೇಕು. ಆಯುಧಗಳು ಇಲ್ಲದವರು ಖರೀದಿಸಿ ಶ್ರದ್ಧೆ ಭಕ್ತಿಯಿಂದ ಪೂಜಿಸಬೇಕು ಎಂದು ಹೇಳಿದರು.