ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.2ರಂದು ಮನ್ಮುಲ್ ಚುನಾವಣೆ ನಡೆಯಲಿದೆ. ಚುನಾವಣೆಗೆ ತಾಲೂಕಿನಿಂದ ಶಾಸಕ ಎಚ್.ಟಿ.ಮಂಜು ಮತ್ತು ನಾಟನಹಳ್ಳಿ ಮಹೇಶ್ ಪಕ್ಷದ ಅಭ್ಯರ್ಥಿಗಳಾಗಿ ಈಗಾಗಲೇ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರು.
ಮತದಾನದ ಹಕ್ಕು ಹೊಂದಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲಾ ಡೆಲಿಗೆಟ್ಸ್ ಗಳನ್ನು ಈಗಾಗಲೇ ಭೇಟಿ ಮಾಡಿ ಮತಯಾಚನೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು, ಚುನಾವಣೆಯಲ್ಲಿ ನಮ್ಮ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಆಯ್ಕೆಯಾಗುವುದು ಖಚಿತವಾಗಿದೆ ಎಂದರು.ಈಗಾಗಲೇ ಕಾರ್ಯಕರ್ತರ ಸಮ್ಮುಖದಲ್ಲಿ ಇಬ್ಬರ ಹೆಸರನ್ನು ಪ್ರಕಟಿಸಲಾಗಿದೆ. ಇದರ ಅರಿವಿದ್ದರೂ ಹಾಲಿ ನಿರ್ದೇಶಕ ಡಾಲು ರವಿ ಮತ್ತು ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಅವರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮನ್ನು ಅಭ್ಯರ್ಥಿಗಳೆಂದು ಘೋಷಿಸಿದ್ದು ಅವರ ಬೆಂಬಲ ನಮಗಿದೆ ಎಂದು ಹಳೆಯ ವಿಡಿಯೋ ಹರಿಯ ಬಿಡುತ್ತಾ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾಜಿ ಸಿಎಂ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆ ನಂತರ ತಮ್ಮ ಸ್ಪರ್ಧೆ ನಿಲುವು ತಿಳಿಸುವುದಾಗಿ ಎಂ.ಬಿ.ಹರೀಶ್ ಹೇಳಿದ್ದರು. ಆದರೆ, ಅದರಂತೆ ಎಚ್ಡಿಕೆ ಭೇಟಿ ಮಾಡಿ ಸ್ಪರ್ಧೆಯ ನಿರ್ಧಾರ ತಿಳಿಸಲಿಲ್ಲ. ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗಲಿಲ್ಲ. ಹೀಗಾಗಿ ಶಾಸಕ ಎಚ್.ಟಿ.ಮಂಜು ಅವರ ಜೊತೆ ನಾಟನಹಳ್ಳಿ ಮಹೇಶ್ ಅವರನ್ನು ಕಣಕ್ಕಿಳಿಸಿದೆ ಎಂದರು.
ಎಂ.ಬಿ.ಹರೀಶ್ ಕೆಲವು ಕಾಲ ಜೆಡಿಎಸ್ ಪಕ್ಷದ ಸೇವೆ ಮಾಡಿದ್ದಾರೆ. ಆದರೆ, ಅವರಿಗಿಂತಲೂ ಹೆಚ್ಚಿನ ಸೇವೆ ಮಾಡುತ್ತಿರುವ ಸಾವಿರಾರು ಕಾರ್ಯಕರ್ತರು ನಮ್ಮ ಪಕ್ಷದಲ್ಲಿದ್ದಾರೆ. ಜೆಡಿಎಸ್ ಯಾವುದೇ ವ್ಯಕ್ತಿಗಳ ಮೇಲೆ ನಿಂತಿಲ್ಲ. ನಮ್ಮದು ಮತದಾರರು ಮತ್ತು ಕಾರ್ಯಕರ್ತರ ಶಕ್ತಿಯ ಮೇಲೆ ನಿಂತಿರುವ ಪಕ್ಷ. ಕಾರ್ಯಕರ್ತರು ಯಾವುದೇ ಅಪಪ್ರಚಾರ ಮತ್ತು ಗೊಂದಲದ ಹೇಳಿಕೆಗೆ ಕಿವಿಗೊಡದೆ ಪಕ್ಷದ ಅಧಿಕೃತ ಅಭ್ಯರ್ಥಿಗಳಾದ ಶಾಸಕ ಎಚ್.ಟಿ.ಮಂಜು ಮತ್ತು ನಾಟನಹಳ್ಳಿ ಮಹೇಶ್ ಅವರ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.