ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪೂರ್ವಭಾಗದ ತಮಿಳು ಕಾಲೋನಿ ಕೊಳಚೆ ಪ್ರದೇಶದ ದಾಖಲಾತಿ ಕೋರಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಬರೆದಿರುವ ಪತ್ರಕ್ಕೆ ಉತ್ತರಿಸಿರುವ ಪೌರಾಯುಕ್ತರು, ಪ್ರಸ್ತುತ ತಮಿಳು ಕಾಲೋನಿ ಇರುವ ಸ್ಥಳ ಸರ್ವೇ ನಂ.೮೨೪, ೧೮, ೧೯, ೨೦ರಲ್ಲಿ ಬರುವುದಾಗಿದ್ದು, ಈ ಸರ್ವೇ ನಂಬರ್ ಸ್ವತ್ತುಗಳು ಕಂದಾಯ ಇಲಾಖೆ ಆರ್‌ಟಿಸಿಗಳಲ್ಲಿ ಮಂಡ್ಯ ವೈದ್ಯಕೀಯ ಸಂಸ್ಥೆಗೆ ಸ್ವಾಧೀನವಾಗಿರುವುದು ಕಂಡುಬಂದಿದೆ. ಕಚೇರಿಯ ದಾಖಲೆಗಳಲ್ಲಿ ಈ ಸರ್ವೇ ನಂಬರ್‌ನ ಜಮೀನು ಮಂಡ್ಯ ನಗರಸಭೆಗೆ ಸ್ವಾಧೀನವಾಗಿರುವುದು ಕಂಡುಬಂದಿಲ್ಲ. ೩೦.೧೦.೧೯೭೩ರ ಸಾಲಿನಲ್ಲಿ ತಮಿಳು ಜನಾಂಗದ ನಿವಾಸಿಗಳು ವಾಸವಾಗಿರುವ ಪ್ರದೇಶವು ನಗರಸಭೆ ಹೆಸರಿನಲ್ಲಿ ದಾಖಲಾಗಿರುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ, ೩೦.೧೦.೧೯೭೩ರಂದು ನಡೆದಿರುವ ವಿಶೇಷ ಅಧಿವೇಶನ ಸಭೆಯಲ್ಲಿ ನಮೂದಾಗಿರುವ ಹೆಸರುಗಳ ವ್ಯಕ್ತಿಗಳಿಗೆ ಸೈಟ್ ಕಿಮ್ಮತ್ತು ಪಾವತಿ ಮಾಡಲು ತಿಳಿಸಿ ಕಚೇರಿಯಿಂದ ಹಿಂಬರಹ ಪ್ರತಿ ನೀಡಿರುವ ಮೂಲ ಕಡತಗಳು, ಕಿಮ್ಮತ್ತು ಪಾವತಿಸಿರುವ ಪ್ರತಿಗಳು, ಸರ್ಕಾರದಿಂದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಮಂಜೂರಾತಿ ದೊರೆತಿರುವ ಬಗೆಗಿನ ದಾಖಲೆಗಳು ಕೂಡ ಕಂಡು ಬಂದಿರುವುದಿಲ್ಲ. ಸೈಟ್‌ಗಳನ್ನು ಸುಪರ್ದಿಗೆ ಕೊಡುವ ಸಂಬಂಧ ಯಾವುದೇ ದಾಖಲೆಗಳು ಕಂಡುಬಂದಿಲ್ಲವೆಂದು ನಿಖರವಾಗಿ ತಿಳಿಸಿದ್ದಾರೆ.ತಮಿಳು ಕಾಲೋನಿಯ ಸರ್ವೇ ನಂ.೨೦/೧ರ ೧ ಎಕರೆ ೧೭ ಗುಂಟೆ, ೧೯/೪ರ ೧೫ ಗುಂಟೆ, ೧೯/೧-೨ರ ೧ ಎಕರೆ ೨೪ ಗುಂಟೆ, ೧೬/೧ರ ೩೫ ಗುಂಟೆ, ೧೮/೧ ರ ೨೩ ಗುಂಟೆ, ೧೮/೨ರ ೧೩ ಗುಂಟೆ, ೨೧/೩ರ ೧ ಎಕರೆ ೩೭ ಗುಂಟೆ ಸೇರಿ ಒಟ್ಟು ೫ ಎಕರೆ ೨೫ ಗುಂಟೆ ಪ್ರದೇಶವನ್ನು ೧೧.೫.೧೯೭೯ರಂತೆ ಕೊಳಚೆ ಪ್ರದೇಶವೆಂದು ಘೋಷಿಸಲಾಗಿದೆ. ಈ ಸರ್ವೇ ನಂಬರ್‌ಗಳು ಸೇರಿ ಹಾಗೂ ಇತರೆ ಸರ್ವೇ ನಂಬರ್‌ಗಳನ್ನು ಒಳಗೊಂಡಂತೆ ಒಟ್ಟು ೧೭ ಎಕರೆ ೨೬ ಗುಂಟೆ ಪ್ರದೇಶ ಮಂಡ್ಯ ಸಾರ್ವಜನಿಕ ಆಸ್ಪತ್ರೆಗೆ ಸ್ವಾಧೀನಪಡಿಸಿಕೊಂಡಿರುವ ಜಮೀನಾಗಿದೆ ಎಂದು ದಾಖಲೆ ಸಹಿತ ವಿವರಿಸಿದ್ದಾರೆ.
ಹಾಗಾಗಿ ತಮಿಳು ಕಾಲೋನಿ ಇರುವ ಪ್ರದೇಶ ತಮಗೆ ಸೇರಿದ್ದು ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಹೈಕೋರ್ಟ್ ೨೫ ಮಂದಿ ಅರ್ಜಿದಾರರಿಗಷ್ಟೇ ತೆರವುಗೊಳಿಸದಂತೆ ಮಧ್ಯಂತರ ಆದೇಶ ಹೊರಡಿಸಿರುವುದು ಇವೆಲ್ಲವೂ ತಮಿಳು ಕಾಲೋನಿ ನಿವಾಸಿಗಳು ಆ ಪ್ರದೇಶದ ಮೇಲೆ ಹಿಡಿತ ಕುಸಿಯುತ್ತಿರುವುದಕ್ಕೆ ಸಾಕ್ಷಿಯಾಗಿವೆ. ಮಂಡ್ಯ ವೈದ್ಯಕೀಯ ಸಂಸ್ಥೆಗೆ ಸೇರಿದ ಜಾಗ ಎನ್ನುವ ವಾದ ಎನ್ನುವ ವಾದ ದಿನೇ ದಿನೇ ಬಲಗೊಳ್ಳುತ್ತಿದೆ.