ಚನ್ನಪಟ್ಟಣ: ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ನಡೆದ ಕುತಂತ್ರ ರಾಜಕಾರಣ ಚನ್ನಪಟ್ಟಣ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮಂಡ್ಯ ಕ್ಷೇತ್ರದ ಜನರು ಐದೂವರೆ ಲಕ್ಷ ಮತಗಳನ್ನು ನೀಡಿದ್ದರು. ಬಳಿಕ ರಾಮನಗರದಲ್ಲಿ ಕಾರ್ಯಕರ್ತರ ಒತ್ತಾಯದ ಮೇಲೆ ಸ್ಪರ್ಧೆ ಮಾಡಿದೆ. ಅಲ್ಲಿಯೂ 76 ಸಾವಿರ ಮತಗಳನ್ನು ನೀಡಿದರು. ಕೂಪನ್ ಕಾರ್ಡ್ ಕೊಟ್ಟು ಮೋಸ ಮಾಡಿ ಕುತಂತ್ರದಿಂದ ಅಲ್ಲಿ ಕಾಂಗ್ರೆಸ್ ಗೆದ್ದಿತು. ಹಾಗಾಗಿ ನಾವು ಮತ್ತು ಬಿಜೆಪಿ ಇಂದು ಒಂದಾಗಿ ಕೆಲಸ ಮಾಡ್ತಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ ಎನ್‌ಡಿಎ ಅಭ್ಯರ್ಥಿಯಾಗಿ ನನ್ನ ಹೆಸರು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.
ಎರಡು ಬಾರಿ ಪೆಟ್ಟು ತಿಂದಿದ್ದೇನೆ:ಈ ಕ್ಷೇತ್ರದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿಗೆ ನೀವು ಶಕ್ತಿ ತುಂಬಿದ್ದೀರಿ. ಎಲ್ಲರಿಗೂ ಕೈ ಮುಗಿದು ಕೇಳಿಕೊಳ್ತೇನೆ. ಇದು ನಮ್ಮ ಎನ್ ಡಿಎ ಕುಟುಂಬಕ್ಕೆ ಅಗ್ನಿ ಪರೀಕ್ಷೆ. ಈ ಪರೀಕ್ಷೆಯಲ್ಲಿ ನಮಗೆ ಜಯ ನೀಡಿ. ಎರಡು ಬಾರಿ ಜೀವನದಲ್ಲಿ ಪೆಟ್ಟು ತಿಂದಿದ್ದೇನೆ. ನಿಮ್ಮನ್ನು ನಂಬಿಕೊಂಡು ಬಂದಿದ್ದೇನೆ. ನಿಮಗಾಗಿ ಕೆಲಸ ಮಾಡುತ್ತೇನೆ, ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಈ ಚುನಾವಣೆ ನನ್ನ ಪಾಲಿಗೆ ಅನಿರೀಕ್ಷಿತವಾದ ಚುನಾವಣೆ. ಕುಮಾರಸ್ವಾಮಿ ಎರಡು ಬಾರಿ ಈ ಕ್ಷೇತ್ರ ಜನರು ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಬಳಿಕ ಕಳೆದ ಲೋಕಸಭಾ ಚುನಾವಣೆ ವೇಳೆ ಒತ್ತಡಕ್ಕೆ ಮಣಿದು ಮಂಡ್ಯದಲ್ಲಿ ಸ್ಪರ್ಧೆ ಮಾಡಿದರು. ಬಳಿಕ ಮಂಡ್ಯದಿಂದ ಗೆದ್ದು ಕೇಂದ್ರ ಸಚಿವರಾಗಿದ್ದಾರೆ. ಇದು ನನ್ನ ಪಾಲಿಗೆ ಬಯಸದೇ ಬಂದ ಚುನಾವಣೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಿಖಿಲ್ ಬಿರುಸಿನ ಪ್ರಚಾರ
ತಾಲೂಕಿನ ದೊಡ್ಡಮಳೂರು ಗ್ರಾಮದಿಂದ ಆರಂಭವಾದ ಪ್ರಚಾರದಲ್ಲಿ ನಿಖಿಲ್ ಅವರಿಗೆ ಅದ್ದೂರಿ ಸ್ವಾಗತ ಕೋರಿದರು. ಪ್ರತಿ ಗ್ರಾಮದಲ್ಲೂ ಪಟಾಕಿ ಸಿಡಿಸಿ, ಬೃಹತ್ ಹೂವಿನ ಹಾರ ಹಾಕಿ ಗ್ರಾಮಸ್ಥರು ಸ್ವಾಗತಿಸಿದರು.
ನಂತರ ಬೈರಾಪಟ್ಟಣ ಮಾರಮ್ಮ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಹಿಳೆಯರು ಹಿರಿಯರ ಬಳಿ ತೆರಳಿ ಕೈ ಮುಗಿದು ಮತಯಾಚಿಸಿದರು. ವಳೆಗೆರೆದೊಡ್ಡಿಯಲ್ಲಿ ಪ್ರಚಾರ ಮಾಡಿದ ನಿಖಿಲ್, ಗ್ರಾಮದ ರಾಮಮಂದಿರವನ್ನು ಅಭಿವೃದ್ಧಿ ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಅಲ್ಲದೆ, ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ವಳಗೆರೆದೊಡ್ಡಿ ಗ್ರಾಮದಿಂದ ಹೊಸೂರು ದೊಡ್ಡಿ ಗ್ರಾಮಕ್ಕೆ ಕಾರ್ಯಕರ್ತರೊಂದಿಗೆ ಬೈಕಿನ ಮೂಲಕ ತೆರಳಿ ಮತಯಾಚನೆ ಮಾಡಿದರು.
ಎಚ್ಡಿಡಿ - ಎಚ್ಡಿಕೆ ನೀರಾವರಿ ಯೋಜನೆಗಳ ಕೊಡುಗೆ
ಚನ್ನಪಟ್ಟಣ ಕ್ಷೇತ್ರದ ಹೊಸೂರುದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ರೈತರ ಪಕ್ಷ, ರೈತರ ಸಾಲಮನ್ನಾ ಮಾಡಿ ರೈತರ ಪರ ನಿಂತಿದ್ದು ಕುಮಾರಣ್ಣ. ಇದೆಲ್ಲವನ್ನು ನಿಮ್ಮ ಹೃದಯದಲ್ಲಿ ಸ್ಮರಿಸಿಕೊಂಡು ನನಗೆ ಮತ ನೀಡಿ ಎಂದು ಮನವಿ ಮಾಡಿದರು.
ಈ ಚುನಾವಣೆಯಲ್ಲಿ ಯಾವ ಜಾತಿಯೂ ಲೆಕ್ಕಕ್ಕಿಲ್ಲ. ಪ್ರಬುದ್ಧ ಮತದಾರರು ಆಶೀರ್ವಾದ ಮಾಡಲಿದ್ದಾರೆ. ತಾಯಂದಿರ ಪಾದಗಳಿಗೆ ನಮಸ್ಕಾರ ಮಾಡಿ ಹೇಳುತ್ನೆ. ಎರಡು ಚುನಾವಣೆಯಲ್ಲಿ ಕುತಂತ್ರದಿಂದ ಸೋತಿದ್ದೇನೆ. ಆದರೂ ನನಗೆ ಜನ ಬೆಂಬಲ ಆಶೀರ್ವಾದ ಕಡಿಮೆ ಆಗಿಲ್ಲ. ನನಗೆ ಇದು ಅನಿರೀಕ್ಷಿತ ಚುನಾವಣೆ ಎಂದು ತಿಳಿಸಿದರು.ದೇವೇಗೌಡರು, ಬಿಜೆಪಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ನಿಮಗೋಸ್ಕರ ದುಡಿಮೆ ಮಾಡಲು ಬಂದಿದ್ದೇನೆ. ದಯವಿಟ್ಟು ನನ್ನನ್ನ ಆಶೀರ್ವದಿಸಿ ನಿಮ್ಮ ಕಷ್ಟದಲ್ಲಿ ಭಾಗಿಯಾಗುತ್ತೇನೆ ಎಂದು ನಿಖಿಲ್ ಭರವಸೆ ನೀಡಿದರು.
ಶೆಟ್ಟಹಳ್ಳಿ, ಮುದುಗೆರೆ, ಬೆಳಕೆರೆ, ಮಾರ್ಚನಹಳ್ಳಿ, ಪುಟ್ಟಪ್ಪ ದೊಡ್ಡಿ ಸೇರಿದಂತೆ ಅನೇಕ ಗ್ರಾಮಗಳಿಗೆ ತೆರಳಿ ನಿಖಿಲ್ ಪ್ರಚಾರ ನಡೆಸಿದರು.---------------------------
29ಕೆಆರ್ ಎಂಎನ್ 7,8.ಜೆಪಿಜಿ7.
ಚನ್ನಪಟ್ಟಣದ ದೊಡ್ಡಮಳೂರು ಗ್ರಾಮದ ಶ್ರೀ ಅಪ್ರಮೇಯ ಸ್ವಾಮಿಯ ದೇಗುಲಕ್ಕೆ ನಿಖಿಲ್ ಭೇಟಿ ನೀಡಿ ಪೂಜೆ ಸಲ್ಲಿಸಿದರು.8
ವಳಗೆರೆದೊಡ್ಡಿ ಗ್ರಾಮದಲ್ಲಿ ಚಿತ್ರನಟ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ನಿಖಿಲ್ ಪುಷ್ಪನಮನ ಸಲ್ಲಿಸಿದರು.