ಹಾನಗಲ್ಲ: ಸ್ವಾಮಿ ಎಂದರೆ ವಿಶ್ವ ಕುಟುಂಬಿ ಚಿಂತಕ, ಮಾನವನನ್ನು ದೇವರನ್ನಾಗಿ ಮಾಡಿದ ಸ್ವಾಮಿ ಹಾನಗಲ್ಲ ಲಿಂ.ಕುಮಾರಶಿವಯೋಗಿ ಸ್ವಾಮಿ, ಲಿಂಗಾಯತ ವೀರಶೈವದಲ್ಲಿ ಭೇದವಿಲ್ಲ ಎಂದು ಶಿರಸಿಯ ಬಣ್ಣದ ಮಠದ ಶಿವಲಿಂಗಮಹಾಸ್ವಾಮಿಗಳು ತಿಳಿಸಿದರು.
ನಡೆ ನುಡಿ ಉಡುಗೆಯ ಸಾಂಸ್ಕೃತಿಕ ಮೌಲ್ಯವನ್ನು ಕಲಿಸಿದ ಗುರುಗಳು ಶಿವಯೋಗ ಮಂದಿರ ಸ್ಥಾಪನೆ ಮೂಲಕ ವಿಶ್ವಕ್ಕೆ ಮಠಾಧೀಶರ ವಿಶ್ವವಿದ್ಯಾಲಯವನ್ನು ನೀಡಿದರು. ವೀರಶೈವ-ಲಿಂಗಾಯತ ಬೇರೆ ಬೇರೆ ಎಂದು ಒಡೆದಾಳುವವರು ಈಗಲಾದರೂ ಎಚ್ಚರವಾಗಿರಿ. ಒಂದಾಗಿ ಬಾಳುವುದನ್ನು ಕಲಿಯಿರಿ. ಬಸವಣ್ಣ ವಿಶ್ವಕುಟುಂಬಿ ಚಿಂತನೆಗಳನ್ನು ಪ್ರತಿಪಾದಿಸಿದ್ದಾನೆ. ನಾವು ಒಡೆದು ಹೋಳು ಮಾಡುವ ಕೆಲಸಕ್ಕೆ ಕೈ ಹಾಕುತ್ತಿದ್ದೇವೆ. ಮೆಕಾಲೆ ಶಿಕ್ಷಣ ಭಾರತಕ್ಕೆ ಬಂದು ಇಡೀ ಭಾರತ ಸಂಸ್ಕೃತಿಹೀನವಾಗಲು ಪ್ರೇರೇಪಿಸಿತು. ಇಂಥಹ ಭಾರತ ಸಂಸ್ಕೃತಿಯನ್ನು ಕುಬ್ಜಗೊಳಿಸುವ ಶಿಕ್ಷಣದಿಂದ ದೂರವಿರೋಣ. ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಸತ್ಸಂಕಲ್ಪ ನಮ್ಮದಾಗಲಿ. ಜಾತ್ರೆ ಉತ್ಸವಗಳು ಧಾರ್ಮಿಕ ಸಂಸ್ಕಾರಕ್ಕೆ ವೇದಿಕೆಗಳಾಗಲಿ ಎಂದರು.ಶಾಸಕ ಶ್ರೀನಿವಾಸ ಮಾನೆ ಮುಖ್ಯ ಅತಿಥಿಯಾಗಿ ಮಾತನಾಡಿ, ಬಸವಣ್ಣನ ವಿಚಾರದ ಬಗ್ಗೆ ಮಾತನಾಡುವವರು ವೈಚಾರಿಕ ಕ್ರಾಂತಿಯ ಬಸವಣ್ಣನ ಮೂರ್ತಿ ಸ್ಥಾಪನೆ ಕಾರ್ಯಕ್ರಮಕ್ಕೆ ರಾಹು ಕಾಲ ಬಿಟ್ಟು ಮಾಡಬೇಕೆಂಬ ಮೌಢ್ಯವನ್ನು ಅನುಸರಿಸಲು ಮುಂದಾಗುತ್ತಿರುವುದೇ ವಿಷಾದದ ಸಂಗತಿ. ಅನಿಷ್ಟ ಪದ್ಧತಿ, ಮೌಢ್ಯಗಳನ್ನು ತೊಡೆಯಬೇಕೆನ್ನುವ ಬಸವಣ್ಣನ ಕಾರ್ಯಕ್ರಮಕ್ಕೂ ಇಂತಹ ಪರಿ ತೀರ ಚರ್ಚಾಸ್ಪದವಾದುದು. ಶರಣರ ವಚನಗಳ ಪಠಣ ನಡೆಯುತ್ತಿದೆಯೇ ಹೊರತು ವಿಚಾರಗಳನ್ನು ಅನುಸರಿಸುವಲ್ಲಿ ನಾವು ವಿಫಲರಾಗಿದ್ದೇವೆ. ಇಂಥ ವೇದಿಕೆಗಳ ಮೂಲಕ ವಚನಗಳ ವಿಚಾರ ಪ್ರಸಾರ ಅನುಸರಣೆಗೆ ಸ್ಫೂರ್ತಿಯಾಗಬೇಕು ಎಂದರು.ಮಾಜಿ ಸಂಸದ ಮಂಜುನಾಥ ಕುನ್ನೂರ ಮುಖ್ಯ ಅತಿಥಿಯಾಗಿ ಮಾತನಾಡಿ, ಕಾಯಕ ಯೋಗಿ ಹಾನಗಲ್ಲ ಲಿಂ.ಕುಮಾರಶಿವಯೋಗಿಗಳ ವಿರಕ್ತಮಠ ಇನ್ನೊಂದು ಮರಿಶಿವಯೋಗ ಮಂದಿರವಾಗಿ, ಇಲ್ಲಿ ಮಠಗಳಿಗಾಗಿ ವಟುಗಳನ್ನು ತಯಾರು ಮಾಡುವ ಕಾರ್ಯ ನಡೆಯಬೇಕು. ಸರ್ಕಾರಗಳು ರೈತನಿಗೆ ಸಾಲ, ಸಬ್ಸಿಡಿ ಕೊಡುವುದಕ್ಕಿಂತ ನೀರಾವರಿ ಯೋಜನೆಗಳನ್ನು ನೀಡಬೇಕು. ವರದಾ- ಬೇಡ್ತಿ ನದಿ ಜೋಡಣೆ ಯಶಸ್ಸಿಗೆ ಹಾವೇರಿ ಜಿಲ್ಲೆಯ ಎಲ್ಲ ಶಾಸಕ ಸಂಸದರು ಪಕ್ಷಭೇದವಿಲ್ಲದೆ ಪರಿಶ್ರಮಿಸಿ ಯಶಸ್ವಿ ಮಾಡಬೇಕು ಎಂದರು.ಧಾರವಾಡ ಉಚ್ಚನ್ಯಾಯಾಲಯದ ನ್ಯಾಯವಾದಿ ಪೂಜಾ ಸವದತ್ತಿ ಅವರಿಗೆ ಶ್ರೀಮಠದ ಶ್ರೀರಕ್ಷೆ ಗೌರವ ಸಲ್ಲಿಸಲಾಯಿತು. ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ, ರಾಯನಾಳದ ಅಭಿನವ ರೇವಣಸಿದ್ದೇಶ್ವರ ಮಹಾಸ್ವಾಮಿಗಳು, ಹಾವೇರಿ ಹುಕ್ಕೇರಿಮಠದ ಸದಾಶಿವಮಹಾಸ್ವಾಮಿಗಳು, ಮೂಲೆಗದ್ದೆ ಚನ್ನಬಸವ ಮಹಾಸ್ವಾಮಿಗಳು, ಚಿಂಚಣಿ ಶಿವಪ್ರಸಾದ ದೇವರು ಸಮ್ಮುಖವಹಿಸಿದ್ದರು. ಹಾವೇರಿಯ ಶರಣ ಚಿಂತಕ ಜಗದೀಶ ಹತ್ತಿಕೋಟಿ, ಹುಬ್ಬಳ್ಳಿಯ ವರದಾ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ ಉಪನ್ಯಾಸ ನೀಡಿದರು. ಲಕ್ಷ್ಮೇಶ್ವರದ ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠ, ನ್ಯಾಯವಾದಿ ಚೇತನ ಕುಲಕರ್ಣಿ ಅತಿಥಿಗಳಾಗಿದ್ದರು.ಆಯ್.ಪಿ.ಕುಂಕೂರ ಸ್ವಾಗತಿಸಿದರು. ಶಿಕ್ಷಕಿ ವಿನುತಾ ಕಾರ್ಯಕ್ರಮ ನಿರೂಪಿಸಿದರು.