ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಯಾವುದೇ ಪ್ರವಾಹದ ಪರಿಸ್ಥಿತಿ ಉಂಟಾಗಿಲ್ಲ. ಮಹಾರಾಷ್ಟ್ರ ಹಾಗೂ ರಾಜ್ಯದ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆಗೆ ಮಾತುಕತೆ ಮಾಡಿದ್ದಾಗಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.ತಾಲೂಕಿನ ಮಾಂಜರಿ ಸೇತುವೆ ಬಳಿ ಕೃಷ್ಣಾ ನದಿ ತೀರದ ಹರಿವಿನ ಮಟ್ಟ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಮಾಹಿತಿ ನೀಡಿದರು. ರಾಜ್ಯದ ಜಲಾಶಯ ಹಾಗೂ ಮಹಾರಾಷ್ಟ್ರದ ಜಲಾಶಯಗಳು ಅರ್ಧದಷ್ಟು ಮಾತ್ರ ತುಂಬಿವೆ. ಹಾಗಾಗಿ ಸದ್ಯಕ್ಕೆ ಯಾವುದೇ ಆತಂಕ ಬೇಡ. ನೀರು ಹೆಚ್ಚಿದ್ರು ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಕಾಳಜಿ ಕೇಂದ್ರಗಳನ್ನು ಸಹ ಗುರುತಿಸಲಾಗಿದೆ. ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತದಿಂದ ಚಿಕ್ಕೋಡಿ ಉಪವಿಭಾಗದಲ್ಲಿ ಸುಮಾರು 24 ದೋಣಿಗಳ ವ್ಯವಸ್ಥೆ ಮಾಡಿಕೊಂಡಿದೆ. ಸಂಭವನೀಯ ಪ್ರವಾಹ ಎದುರಿಸಲು ಇನ್ನೂ ಹೆಚ್ಚಿಗೆ ದೋಣಿಗಳ ಅವಶ್ಯಕತೆ ಬಿದ್ದರೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಅವರು ದೋಣಿಗಳ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಸಂಭವನೀಯ ಪ್ರವಾಹ ಎದುರಿಸಲು ಸಿದ್ದರಿದ್ದೇವೆ. ಯಾರು ಸಹ ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಮಳೆ ಇಳಿಮುಖ:ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ನದಿ ಪಾತ್ರದಲ್ಲಿ ನೀರಿನ ಮಟ್ಟ ಇಳಿಕೆ ಕಂಡಿದ್ದು, ಜಲಾವೃತಗೊಂಡ ಮಲಿಕವಾಡ-ದತ್ತವಾಡ ಬ್ಯಾರೇಜ್ ಸಂಚಾರಕ್ಕೆ ಮುಕ್ತವಾಗಿದೆ. ಚಿಕ್ಕೋಡಿ ತಾಲೂಕಿನ ರಾಜ್ಯದ ಕಲ್ಲೋಳ ಬಳಿ ಕೃಷ್ಣೆಗೆ 60,310 ಕ್ಯುಸೆಕ್ ನೀರು ಹರಿದು ಬರುತ್ತಿದೆ. ನೀರಿನ ಹರಿವಿನ ಮಟ್ಟದಲ್ಲಿ ಬುಧವಾರ ಇಳಿಕೆ ಕಂಡಿದೆ.ದೂಧಗಂಗಾ ನದಿಗೆ ಸುಳಕುಡ ಬ್ಯಾರೇಜ್ ಮುಖಾಂತರ 10,560 ಕ್ಯುಸೆಕ್ ಮತ್ತು ಕೃಷ್ಣಾ ನದಿಗೆ ರಾಜಾಪುರ ಬ್ಯಾರೇಜ್ ಮುಖಾಂತರ 49,750 ಹೀಗೆ ಒಟ್ಟು 60,310 ಕ್ಯುಸೆಕ್ಸ್ ನೀರು ರಾಜ್ಯಕ್ಕೆ ಹರಿದು ಬರುತ್ತಿದೆ.ಕೊಯ್ನಾ-11 ಮಿ.ಮೀ , ವಾರಣಾ-13 ಮಿ.ಮೀ, ಕಾಳಮ್ಮವಾಡಿ-20 ಮಿ.ಮೀ, ಮಹಾಬಳೇಶ್ವರ-35 ಮಿ.ಮೀ, ನವಜಾ-19 ಮಿ.ಮೀ, ರಾಧಾನಗರಿ-11ಮಿ.ಮೀ, ಕೊಲ್ಲಾಪುರ-05ಮಿ.ಮೀ ಮತ್ತು ಸಾಂಗಲಿ-00 ಮಿ,ಮೀ ಮಳೆಯಾಗಿರುವ ಕುರಿತು ವರದಿಯಾಗಿದೆ.
ಜಿಲ್ಲಾಧಿಕಾರಿಗಳೊಂದಿಗೆ ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ, ತಹಸೀಲ್ದಾರ್ ಚಿದಂಬರ ಕುಲಕರ್ಣಿ ಸೇರಿದಂತೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.