ರಾಣಿಬೆನ್ನೂರು: ಪ್ರಪಂಚದಲ್ಲಿ ಶಿವದೀಕ್ಷೆಗಿಂದ ದೊಡ್ಡ ದೀಕ್ಷೆ ಬೇರೊಂದಿಲ್ಲ. ಶಿವದೀಕ್ಷೆ ತೆಗೆದುಕೊಂಡವರಿಗೆ ಲೌಕಿಕ ಬದುಕಿನಲ್ಲಿ ದೈವಿಗುಣ ಹೆಚ್ಚಾಗಲಿದೆ ಎಂದು ಆವರಗೊಳ್ಳ ಹಿರೇಮಠದ ಓಂಕಾರ ಶಿವಾಚಾರ್ಯರು ನುಡಿದರು. ನಗರದ ದೊಡ್ಡಪೇಟೆ ಹಿರೇಮಠದ ಪಂಚಾಚಾರ್ಯ ಆವರಗೊಳ್ಳ ಗುರುಕಾರಣ್ಯ ಮಂಗಲ ಮಂದಿರದಲ್ಲಿ ಭಾನುವಾರ ಜಂಗಮ ನೌಕರರ ವೇದಿಕೆ ಹಾಗೂ ಜಂಗಮ ಸಮಾಜದಿಂದ ಏರ್ಪಡಿಸಿದ್ದ ಜಂಗಮ ವಟುಗಳಿಗೆ ಶಿವದೀಕ್ಷಾ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಧರ್ಮಾರಚಣೆ ಮೂಲಕ ಲಿಂಗದೀಕ್ಷೆ ಪಡೆದುಕೊಂಡರೆ ದೇವತಾ ಮನುಷ್ಯರಾಗುತ್ತಾರೆ. ಅದೇ ರೀತಿ ಲಿಂಗದೀಕ್ಷೆ ಪಡೆದವರು ಇನ್ನು ಮುಂದೆ ಧರ್ಮಪರಿಪಾಲನೆ ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು. ವೀರಶೈವ ಸಂಪ್ರದಾಯದಂತೆ ಜಂಗಮವಟುಗಳಿಗೆ ನೀಡುವ ಶಿವದೀಕ್ಷೆ(ಅಯ್ಯಾಚಾರ) ಪದ್ಧತಿಯನ್ನು ಜಂಗಮರು ಉಳಿಸಿಕೊಂಡು ಹೋಗಬೇಕು. ಪೂರ್ವಜರ ಆಚಾರ, ವಿಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದರು. ಲಿಂಗಪೂಜೆ ಮಾಡುವ ಮೂಲಕ ತಮ್ಮ ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಮಣ್ಣಿಗೆ ಸಂಸ್ಕಾರ ಕೊಟ್ಟಲ್ಲಿ ಮಡಿಕೆಯಾಗಿ, ಲೋಹಕ್ಕೆ ಸಂಸ್ಕಾರ ನೀಡಿದ್ದಲ್ಲಿ ಆಭರಣವಾಗಿ, ನೀರಿಗೆ ಸಂಸ್ಕಾರ ನೀಡಿದಲ್ಲಿ ತೀರ್ಥವಾಗುತ್ತದೆ. ಹಾಗೆಯೇ ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಮನೆಯಲ್ಲಿ ಮನದಲ್ಲಿ ಜ್ಯೋತಿ ಬೆಳಗುವಂತಾಗಬೇಕು. ಬದುಕಿನಲ್ಲಿ ಸತ್ಯಶುದ್ಧ ಕಾಯಕ ಇರಬೇಕು ಎಂದರು.ವರ್ತಕ ಜಗದೀಶ ಅಜ್ಜೋಡಿಮಠ ಕಾರ್ಯಕ್ರಮ ಉದ್ಘಾಟಿಸಿದರು. ಜಂಗಮ ನೌಕರರ ವೇದಿಕೆ ಅಧ್ಯಕ್ಷ ಮುಕ್ತೇಶ ಪಿ. ಕೂರಗುಂದಮಠ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ವಿವಿಧಡೆಯಿಂದ ಆಗಮಿಸಿದ 52 ಜಂಗಮ ವಟುಗಳಿಗೆ ಶಿವದೀಕ್ಷೆ ನೀಡಲಾಯಿತು. ರಾಚಯ್ಯ ಹಿರೇಮಠ ನೇತೃತ್ವದ ಪುರೋಹಿತರ ತಂಡ ಶಾಸ್ತ್ರೋಕ್ತವಾಗಿ ಶಿವದೀಕ್ಷೆ ಕಾರ್ಯಕ್ರಮ ನಡೆಸಿಕೊಟ್ಟರು.ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರಶಾಂತ ದುಗ್ಗತ್ತಿಮಠ, ವಿ.ಎಂ. ಕೊಗನೂರಮಠ, ವಾಗೀಶ ಮಳೇಮಠ, ವೀರಬಸಯ್ಯ ಹಿರೇಮಠ ಮಾತನಾಡಿದರು. ಇದಕ್ಕೂ ಪೂರ್ವ ರೇಣುಕಾಚಾರ್ಯ ಮೂರ್ತಿಗಳಿಗೆ ರುದ್ರಾಭಿಷೇಕ, ಅಷ್ಟೋತ್ತರ ನಾಮಾವಳಿ, ಅಲಂಕಾರ ಪೂಜೆ ಹಾಗೂ ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಪ್ರಕಾಶ ಗಚ್ಚಿನಮಠ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ವೀರೇಶ ಬಾಳಿಹಳ್ಳಿಮಠ, ಶಿವಯೋಗಿ ಹಿರೇಮಠ, ಜಯದೇವಯ್ಯ ಹನಗೋಡಿಮಠ, ಪ್ರೊ. ಸುಜನ್ ಸಾಲೀಮಠ, ರವಿಕುಮಾರ ಪಾಟೀಲ, ಎಸ್.ಸಿ. ಷಡಕ್ಷರಿಮಠ, ಕೊಟ್ರೇಶ ಅಜ್ಜೋಡಿಮಠ, ಜಗದೀಶ ಮಳೇಮಠ, ವಾಗೀಶ ನೀರಲಗಿಮಠ, ಎಂ.ಕೆ. ಸಾಲೀಮಠ ಹಾಗೂ ತಾಲೂಕು ಜಂಗಮ ಅರ್ಚಕರ ಸಂಘದ ಪದಾಧಿಕಾರಿಗಳು ಇದ್ದರು.