ಶಾಸಕ ಹಾಗೂ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ ತಂಡ ಮೇಲುಗೈ ಸಾಧಿಸಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ (ಕೆಡಿಸಿಸಿ) ಚುನಾವಣೆ ಮುಕ್ತಾಯಗೊಂಡು ಮೂರುವರೆ ತಿಂಗಳಾದರೂ ವಿವಿಧ ಮತಕ್ಷೇತ್ರದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಕಾರಣ ಒಟ್ಟೂ ನಿರ್ದೇಶಕರ ಆಯ್ಕೆ ವಿಳಂಬವಾಗಿತ್ತು. ಫೆ. 6ರಂದು ಕೊನೆಯ ಮತಕ್ಷೇತ್ರದ ಮತ ಎಣಿಕೆ ನಡೆಸಲು ನ್ಯಾಯಾಲಯ ಸೂಚನೆ ನೀಡಿದ ಹಿನ್ನೆಲೆ ಫೆ. 7ರಂದು ಮತ ಏಣಿಕೆ ನಡೆದಿದೆ. 3 ಕ್ಷೇತ್ರದ ಅವಿರೋಧ ಆಯ್ಕೆಗೊಂಡು 13 ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಶಾಸಕ ಹಾಗೂ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ ತಂಡ ಮೇಲುಗೈ ಸಾಧಿಸಿದೆ.ಧಾರವಾಡದ ಉಚ್ಛ ನ್ಯಾಯಾಲಯದ ಸೂಚನೆ ಮೇರೆಗೆ ಕೆಡಿಸಿಸಿ ಬ್ಯಾಂಕ್‌ನ ಮತ ಎಣಿಕೆಯ ಗ್ರಾಹಕರ ಸಹಕಾರಿ ಸಂಘಗಳು ಮತ್ತು ಸಂಸ್ಕರಣಾ ಸಹಕಾರಿ ಸಂಘಗಳ ಮತಕ್ಷೇತ್ರದ ನಿರ್ದೇಶಕ ಸ್ಥಾನದ ಮತ ಎಣಿಕೆ ಶನಿವಾರ ನಡೆದಿದೆ. ನಿರಂಜನ ಶ್ರೀಧರ ಭಟ್ಟ ವಿಜಯಿಯಾಗಿದ್ದಾರೆ. ಈ ಮತ ಕ್ಷೇತ್ರ ತೀವ್ರ ಕುತೂಹಲ ಮೂಡಿಸಿತ್ತು. ನಿರಂಜನ ಶ್ರೀಧರ ಭಟ್ಟ 20 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಪ್ರತಿ ಸ್ಪರ್ಧಿ 14 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಸಹಾಯಕ ಆಯುಕ್ತ ಚಂದ್ರಶೇಖರ ಜಿ.ಆರ್‌. ಕಾರ್ಯನಿರ್ವಹಿಸಿ, ಪ್ರಮಾಣ ಪತ್ರ ನೀಡಿದರು.ಕೆಡಿಸಿಸಿ ಬ್ಯಾಂಕಿಗೆ ಅ. 25ರಂದೇ ಚುನಾವಣೆ ಪ್ರಕ್ರಿಯೆ ಮುಗಿದಿದ್ದು ಇನ್ನೂ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿಲ್ಲ. ಎಲ್ಲ 16 ಸ್ಥಾನಗಳ ಮತ ಎಣಿಕೆ ಪೂರ್ಣಗೊಳ್ಳದವರೆಗೂ ಆಡಳಿತ ವಹಿಸಿಕೊಳ್ಳಲು ಸಾಧ್ಯವಾಗಿಲ್ಲವಾಗಿತ್ತು. ಈದೀಗ ಒಟ್ಟೂ ಸ್ಥಾನದ ಮತ ಎಣಕೆ ಪೂರ್ಣಗೊಂಡಿದ್ದರಿಂದ ಸದ್ಯದಲ್ಲಿಯೇ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಳ್ಳಲಿದೆ.ಆಡಳಿತ ಮಂಡಳಿ ಅನುಷ್ಠಾನಗೊಳ್ಳದ ಪರಿಣಾಮವಾಗಿ ರೈತರು ಸಮಸ್ಯೆ ಎದುರಿಸಬೇಕಾಗಿದೆ. ಮಾಧ್ಯಮಿಕ ಸಾಲ ಸೇರಿದಂತೆ ಅನೇಕ ಅಗತ್ಯ ಸಾಲಗಳು ದೊರೆಯುತ್ತಿಲ್ಲ. ಸಾಲ ನೀಡದ ಕಾರಣ 74 ಶಾಖೆಗಳಲ್ಲಿ ವ್ಯವಹಾರವೇ ಕಡಿಮೆಯಾಗಿದ್ದು, ಬ್ಯಾಂಕಿನಲ್ಲೂ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ಮುಂದಿನ ತಿಂಗಳು ಆರ್ಥಿಕ ವರ್ಷ ಮುಗಿಯಲಿದ್ದು, ಹಣಕಾಸು ವ್ಯವಹಾರವೇ ಕಡಿಮೆಯಾಗಲಿದೆ. ಈ ಹಿಂದಿನ ಚುನಾವಣೆಗಳಲ್ಲಿ ತುರುಸು ಇದ್ದರೂ ಸಹ, ನ್ಯಾಯಾಲಯದಿಂದ ಮತದಾನದ ಹಕ್ಕು ತಂದರೂ ಸಹ ಮತ ಎಣಿಕೆ ದಿನದಂದೇ ಎಲ್ಲವೂ ಘೋಷಣೆಯಾಗುತ್ತಿತ್ತು. ಆದರೆ ಈ ಬಾರಿ ಬದಲಾದ ರಾಜಕೀಯ ಸನ್ನಿವೇಶ ಹಾಗೂ ಕೆಡಿಸಿಸಿ ಬ್ಯಾಂಕಿನ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಣಮಿಸಿದ ಕಾರಣ ನ್ಯಾಯಾಲಯಕ್ಕೆ ಹೋದ ಪ್ರಕರಣಗಳು ಈ ವರ್ಷ ಜಾಸ್ತಿ ಆಗಿದೆ. ಈಗ ಎಲ್ಲ ಮತ ಕ್ಷೇತ್ರದ ಮತ ಎಣಿಕೆ ಮುಕ್ತಾಯಗೊಂಡಿರುವುದರಿಂದ ಆದಷ್ಟು ಶೀಘ್ರ ಆಡಳಿತ ಮಂಡಳಿ ರಚನೆಯಾಗಬೇಕು ಎಂಬುದು ಗ್ರಾಹಕರ ಆಗ್ರಹವಾಗಿದೆ.ಫೆ. 16ಕ್ಕೆ ಪ್ರಥಮ ಸಭೆ

ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಎಲ್ಲ ನಿರ್ದೇಶಕರ ಆಯ್ಕೆ ಪೂರ್ಣಗೊಂಡಿರುವುದರಿಂದ ಫೆ. 16ಕ್ಕೆ ಪ್ರಥಮ ಸಭೆ ನಡೆದು, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.