ಈ ಬೆಳೆಗಳು ಕಟಾವಿಗೆ ಬಂದ ಸಂದರ್ಭದಲ್ಲಿ ತಾಲೂಕಿನಲ್ಲಿ ವಿಪರೀತ ಮಳೆಯಾಗಿ ಎಲ್ಲ ಬೆಳೆಗಳು ಜಮೀನಿನಲ್ಲಿ ಸಂಪೂರ್ಣ ನಾಶವಾಗಿದ್ದರಿಂದ ಅನ್ನದಾತರಿಗೆ ಕೈಗೆ ಬಂದು ತುತ್ತು ಬಾಯಿಗೆ ಬರದಂತಾಗಿದೆ.
ನರಗುಂದ: ಸರ್ಕಾರ ಒಂದು ವಾರದಲ್ಲಿ ತಾಲೂಕಿನ ರೈತರಿಗೆ 2025- 26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆ ಬಿಡುಗಡೆಗೊಳಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ತಾಲೂಕು ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ ಎಚ್ಚರಿಸಿದರು.
ಶುಕ್ರವಾರ ಪಟ್ಟಣ ಕೃಷಿ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿ, ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ರೈತರಿಗೆ ಉತ್ತಮ ಮಳೆಯಾಗಿದ್ದರಿಂದ ವಾಣಿಜ್ಯ ಬೆಳೆಗಳಾದ ಗೋವಿನಜೋಳ, ಬಿಟಿ ಹತ್ತಿ, ಈರುಳ್ಳಿ, ಸೂರ್ಯಕಾಂತಿ, ಮೆಣಸಿನಕಾಯಿ, ತೊಗರಿ ಸೇರಿದಂತೆ ಮುಂತಾದ ಬೆಳೆಗಳನ್ನು ಬಿತ್ತಿ ಪ್ರತಿ 1 ಎಕರೆಗೆ ₹30ರಿಂದ ₹40 ಸಾವಿರ ಖರ್ಚು ಮಾಡಿದ್ದರು.ಈ ಬೆಳೆಗಳು ಕಟಾವಿಗೆ ಬಂದ ಸಂದರ್ಭದಲ್ಲಿ ತಾಲೂಕಿನಲ್ಲಿ ವಿಪರೀತ ಮಳೆಯಾಗಿ ಎಲ್ಲ ಬೆಳೆಗಳು ಜಮೀನಿನಲ್ಲಿ ಸಂಪೂರ್ಣ ನಾಶವಾಗಿದ್ದರಿಂದ ಅನ್ನದಾತರಿಗೆ ಕೈಗೆ ಬಂದು ತುತ್ತು ಬಾಯಿಗೆ ಬರದಂತಾಗಿದೆ. ಬೆಳೆವಿಮೆ ಯೋಜನೆ ಅಡಿಯಲ್ಲಿ ಕಂತು ಕಟ್ಟಿದರೂ ಬೆಳೆಹಾನಿ ಮಾಡಿಕೊಂಡ ರೈತರಿಗೆ ಪರಿಹಾರ ಬಿಡುಗಡೆ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಒಂದು ವಾರದಲ್ಲಿ ತಾಲೂಕಿನ ರೈತರಿಗೆ ಬೆಳೆವಿಮೆ ಪರಿಹಾರ ಬಿಡುಗಡೆಗೊಳಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.ತಾಲೂಕು ಸಹಾಯಕ ನಿರ್ದೇಶಕ ಎಸ್.ಎಂ. ಕುಲಕರ್ಣಿ ಅವರು ರೈತರ ಮನವಿ ಸ್ವೀಕರಿಸಿ ಮೇಲಧಿಕಾರಿಗಳಗೆ ರವಾನೆ ಮಾಡಲಾಗುವುದೆಂದು ತಿಳಿಸಿದರು. ಈ ವೇಳೆ ಬಸಯ್ಯ ಹೊರಗಿನಮಠ, ಶಂಕ್ರಗೌಡ ಶಿರಿಯಪ್ಪಗೌಡ್ರ, ಹನುಮಂತಗೌಡ ಭೂಸಣ್ಣವರ, ಪರಪ್ಪ ಸಹಕಾರ, ತಿಮ್ಮರಡ್ಡಿ ವಾಸನ ಮುಂತಾದವರು ಇದ್ದರು. ಇಂದಿನಿಂದ ಸಿದ್ದೇಶ್ವರ ಜಾತ್ರಾ ಮಹೋತ್ಸವ
ನರಗುಂದ: ಪಟ್ಟಣದ ಸಿದ್ದೇಶ್ವರ ಪಂಚಗೃಹ ಗುಡ್ಡದ ಹಿರೇಮಠದ ಲಿಂ. ಚನ್ನವೀರ ಶಿವಾಚಾರ್ಯ ಸ್ವಾಮಿಗಳ ಅವರ 46ನೇ ಪುಣ್ಯಸ್ಮರಣೋತ್ಸವ ಹಾಗೂ ಲಿಂ. ಚನ್ನವೀರ ಶಿವಾಚಾರ್ಯ ಸ್ವಾಮಿಗಳ ಅವರ 14ನೇ ಪುಣ್ಯಸ್ಮರಣೋತ್ಸವ ಪ್ರಯುಕ್ತ ಸಿದ್ಧೇಶ್ವರ ಜಾತ್ರಾ ಮಹೋತ್ಸವವು ಫೆ. 8ರಿಂದ ಫೆ.18ರ ವರೆಗೆ ಜರುಗಲಿದೆ.ಫೆ. 8ರಂದು ಬೆಳಗ್ಗೆ 7ಕ್ಕೆ ಶ್ರೀಗಳಿಂದ ಷಟಸ್ಥಲ ಧ್ವಜಾರೋಹಣ ನೆರವೇರಲಿದೆ. ಸಂಜೆ ಬೆಣ್ಣೆ ಪೇಟೆಯಲ್ಲಿನ ಮುರುಘರಾಜೇಂದ್ರ ಪ್ರೀ ಬೋರ್ಡಿಂಗ್ ಟ್ರಸ್ಟ್ ಜಾಗದಲ್ಲಿ ಉಜ್ಜಯಿನಿ ಪೀಠದ ಕರ್ತೃ ಲಿಂ. ಸಿದ್ದಲಿಂಗ ಶಿವಾಚಾರ್ಯರರ ಚರಿತ್ರೆ ಕುರಿತಾದ ಪ್ರವಚನವನ್ನು ಪ್ರತಿನಿತ್ಯ ಸಂಜೆ 6.30ರಿಂದ 9ರ ವರೆಗೆ ನರೇಗಲ್ಲ ಮತ್ತು ಸವದತ್ತಿ ಹಿರೇಮಠದ ಮಲ್ಲಿಕಾರ್ಜುನ ಸ್ವಾಮಿಗಳು ನಡೆಸಿಕೊಡಲಿದ್ದಾರೆ. ಮಠದ ಸದ್ಭಕ್ತರಿಂದ ದೇವಿ ಪಾರಾಯಣ ಜರುಗಿದ ನಂತರ ಪ್ರವಚನ ಪ್ರಾರಂಭವಾಗಲಿದೆ.
ಫೆ. 15ರಂದು ಮಹಾಶಿವರಾತ್ರಿ ದಿನ ಸಿದ್ಧೇಶ್ವರನ ನಾಮಸ್ಮರಣೆ ಜಪಯಜ್ಞ ನಡೆಯಲಿದೆ. ಫೆ. 16ರಂದು ಜರುಗುವ ಧರ್ಮಸಭೆಯಲ್ಲಿ ಉಜ್ಜಯಿನಿ ಸಿಂಹಾಸನಾ ಮಹಾ ಸಂಸ್ಥಾನ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಸಾನ್ನಿಧ್ಯ ವಹಿಸಲಿದ್ದಾರೆ. ಫೆ. 17ರಂದು ಕೃಷಿ ಸಂವಾದ ಮತ್ತು ಮಾತೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿವೆ.ಫೆ. 18ರಂದು ಸಂಜೆ 5ಕ್ಕೆ ಮಹಾರಥೋತ್ಸವ ಜರುಗಲಿದೆ. ಬೆಳಗ್ಗೆ ಕರ್ತೃ ಸಿದ್ಧೇಶ್ವರ ಗದ್ದುಗೆಗೆ ಮಹಾ ರುದ್ರಾಭಿಷೇಕ ಜರುಗಿದ ನಂತರ ಶ್ರೀಮಠದಲ್ಲಿ ಲಿಂಗದೀಕ್ಷೆ ಹಾಗೂ ಅಯ್ಯಾಚಾರ ಜರುಗಲಿದೆ ಎಂದು ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.