ಗದಗ ಜಿಲ್ಲೆಯಲ್ಲಿ ದಸರೆಗೂ ಇಲ್ಲ ಗೃಹಲಕ್ಷ್ಮಿ ಹಣ!

KannadaprabhaNewsNetwork |  
Published : Sep 29, 2025, 01:05 AM IST
ಗೃಹಲಕ್ಷ್ಮಿಯ ಮಾಹಿತಿ | Kannada Prabha

ಸಾರಾಂಶ

ಬೆಲೆ ಏರಿಕೆಯ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಲಿದೆ, ಸಾರ್ವಜನಿಕರನ್ನು ಬಡತನ ರೇಖೆಯಿಂದ ಒಮ್ಮೆಲೇ ಮೇಲೆತ್ತುವ ಮಹತ್ವದ ಯೋಜನೆ ಇದಾಗಿದೆ ಎಂದು ಸಿಎಂ ಸೇರಿದಂತೆ ಎಲ್ಲ ಸಚಿವರು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಮಹಿಳೆಯರಿಗೆ ಮಾತ್ರ ಯೋಜನೆಯ ಲಾಭ ಸಕಾಲದಲ್ಲಿ ತಲುಪುತ್ತಿಲ್ಲ.

ಶಿವಕುಮಾರ ಕುಷ್ಟಗಿ

ಗದಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಅತ್ಯಂತ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯ (ನಾಲ್ಕು ತಿಂಗಳ ಬಾಕಿ) ಹಣ ದಸರಾ ಹಬ್ಬದ ಪೂರ್ವದಲ್ಲಿಯೇ ಗೃಹಲಕ್ಷ್ಮಿಯರ ಖಾತೆಗೆ ಜಮೆಯಾಗಿ, ಹಬ್ಬಕ್ಕೆ ಮತ್ತಷ್ಟು ಮೆರುಗು ಬರಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಮಹಿಳೆಯರಿಗೆ ತೀವ್ರ ನಿರಾಸೆಯಾಗಿದೆ.

ಬೆಲೆ ಏರಿಕೆಯ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಲಿದೆ, ಸಾರ್ವಜನಿಕರನ್ನು ಬಡತನ ರೇಖೆಯಿಂದ ಒಮ್ಮೆಲೇ ಮೇಲೆತ್ತುವ ಮಹತ್ವದ ಯೋಜನೆ ಇದಾಗಿದೆ ಎಂದು ಸಿಎಂ ಸೇರಿದಂತೆ ಎಲ್ಲ ಸಚಿವರು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಮಹಿಳೆಯರಿಗೆ ಮಾತ್ರ ಯೋಜನೆಯ ಲಾಭ ಸಕಾಲದಲ್ಲಿ ತಲುಪುತ್ತಿಲ್ಲ.

2.54 ಲಕ್ಷ ಗೃಹಲಕ್ಷ್ಮಿಯರಿದ್ದಾರೆ: ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 254550 ಅರ್ಹ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಈಗಾಗಲೇ ಇವರೆಲ್ಲ ಗೃಹಲಕ್ಷ್ಮಿಯ ಕಂತಿನ ಹಣವನ್ನು ಪಡೆದಿದ್ದಾರೆ. ಸಧ್ಯಕ್ಕೆ ಜಿಲ್ಲಾದ್ಯಂತ ಇರುವ ಅರ್ಹ ಫಲಾನು‍ವಿಗಳಿಗೆ ಪ್ರತಿ ತಿಂಗಳು ಸರಾಸರಿ ₹44,88 ಕೋಟಿಗೂ ಅಧಿಕ ಹಣವನ್ನು ನೀಡಬೇಕಿದ್ದು, ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ ಎನ್ನುವುದು ಹಣ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬವೇ ಸಾಕ್ಷಿಯಾಗಿದೆ.

ನಾಲ್ಕು ತಿಂಗಳ ಬಾಕಿ: ಆಗಸ್ಟ್‌ಕ್ಕಿಂತ ಮೊದಲು ಜಿಲ್ಲೆಯ ಗೃಹಲಕ್ಷ್ಮಿಯರಿಗೆ 3 ತಿಂಗಳ ಬಾಕಿ ಹಣ ಬರಬೇಕಿತ್ತು. ಆದರೆ ಜಿಲ್ಲಾಡಳಿತ ಆ. 14ರಿಂದ 16ರ ವರೆಗೆ ಕೇವಲ ಒಂದು ತಿಂಗಳ ಹಣವನ್ನು ಮಾತ್ರ ಬಿಡುಗಡೆ ಮಾಡಿತ್ತು. ಇಲ್ಲಿಯವರೆಗೆ ಒಟ್ಟು ನಾಲ್ಕು ತಿಂಗಳ ಹಣ ಬರಬೇಕಿದೆ ಎನ್ನುತ್ತಾರೆ ಗೃಹಲಕ್ಷ್ಮಿ ಫಲಾನುಭವಿಗಳು.

ದಸರಾಗೆ ಕೊಡಲಿ

ಸರ್ಕಾರ ಮತ್ತು ಇಲಾಖೆ ಸಚಿವರು ಗೃಹಲಕ್ಷ್ಮಿಯವರಿಗೆ ಸಧ್ಯದಲ್ಲಿಯೇ ಹಣ ಬಿಡುಗಡೆಯಾಗಲಿದೆ ಎನ್ನುತ್ತಾರೆ. ಆದರೆ ಯಾವುದೇ ನಿಗದಿತ ಸಮಯ ಹೇಳುತ್ತಿಲ್ಲ. ಮಹಿಳೆಯರು ದಸರಾ ಹಬ್ಬವನ್ನು ಸಡಗರ ಸಂಭ್ರಮದಿಂದ ಪೂಜೆ ಮಾಡುತ್ತಾ ಆಚರಿಸುತ್ತಿದ್ದು, ಇದೇ ಸಂದರ್ಭದಲ್ಲಿಯೇ ಕೈಯಲ್ಲಿ ಹಣವಿದ್ದರೆ ಇನ್ನು ಅನುಕೂಲವಾಗುತ್ತದೆ. ಅದಕ್ಕಾಗಿ ಕನಿಷ್ಠ ಒಂದು ಕಂತಿನ ಹಣವನ್ನಾದರೂ ದಸರಾ ಹಬ್ಬದ ಒಳಗಾಗಿ ಸರ್ಕಾರ ಬಿಡುಗಡೆ ಮಾಡಬೇಕು ಎನ್ನುವ ನಿರೀಕ್ಷೆಯಲ್ಲಿ ಮಹಿಳೆಯರಿದ್ದಾರೆ.

ಸಮಸ್ಯೆಯೇ?

ರಾಜ್ಯ ಸರ್ಕಾರದ ಸೂಚನೆಯಂತೆ ಈಗಾಗಲೇ ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಇದರಿಂದಾಗಿ ಹಲವಾರು ಬಿಪಿಎಲ್ ಕಾರ್ಡ್‌ಗಳು ರದ್ದಾಗಿ, ಎಪಿಎಲ್ ಆಗುತ್ತಿವೆ. ಈ ಸಂದರ್ಭದಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆಗಳಿಂದಾಗಿ ಗೃಹಲಕ್ಷ್ಮಿ ಹಣ ಬಿಡುಗಡೆ ವಿಳಂಬವಾಗುವ ಸಾಧ್ಯತೆ ಇದ್ದು, ಈ ಸಮಸ್ಯೆ ಸರಿಯಾಗುವವರೆಗೂ ಹಣ ಬಿಡುಗಡೆ ಸಾಧ್ಯವಿಲ್ಲ ಎನ್ನುವ ಮಾತುಗಳು ಅಧಿಕಾರಿ ವರ್ಗದಿಂದ ಕೇಳಿ ಬರುತ್ತಿವೆ.

ಹಣ ಬಿಡುಗಡೆ: ಗೃಹಲಕ್ಷ್ಮಿ ಹಣ ಸರ್ಕಾರದಿಂದ ಬಿಡುಗಡೆಯಾಗಿದ್ದು, ಇನ್ನೆರಡು ದಿನಗಳಲ್ಲಿ ಮಹಿಳೆಯರ ಖಾತೆಗೆ ಜಮೆ ಆಗಲಿದೆ. ಜಿಲ್ಲೆಯಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿರುವುದು ಗಮನಕ್ಕೆ ಬಂದಿದೆ. ಆದರೆ ಯಾವ ಕಾರಣಕ್ಕೆ ಕಾರ್ಡ್ ರದ್ದುಗೊಂಡಿವೆ ಎನ್ನುವ ಬಗ್ಗೆ ಮಾಹಿತಿ ಕೇಳಿದ್ದೇವೆ. ಈ ಕುರಿತು ಸಂಬಂಧಿಸಿದ ತಹಸೀಲ್ದಾರರೊಂದಿಗೆ ಚರ್ಚಿಸಿ ಸಮಸ್ಯೆ ಸರಿಪಡಿಸುತ್ತೇವೆ ಎಂದು ಗದಗ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ