ಪ್ರಗತಿಪರ ಸಂಘಟನೆಯಿಂದ ಸಾಮರಸ್ಯ ನಡಿಗೆ ಇಲ್ಲ: ಉಮಾಶಂಕರ್

KannadaprabhaNewsNetwork |  
Published : Sep 17, 2025, 01:05 AM IST
೧೬ಕೆಎಂಎನ್‌ಡಿ-೧ಮದ್ದೂರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಹೆಸರನ್ನು ಕೆಲವು ಮುಖಂಡರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿ.ಸಿ.ಉಮಾಶಂಕರ್ ದೂರು ನೀಡಿದರು. | Kannada Prabha

ಸಾರಾಂಶ

ಮದ್ದೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸೌಹಾರ್ದ ನಡಿಗೆ, ಹಿಂದೂ ಮುಸ್ಲಿಂ ಐಕ್ಯತೆಗಾಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳು ಹರಿದಾಡುತ್ತಿರುವುದು ನಕಲಿ. ನಮ್ಮ ಸಂಘಟನೆಯಿಂದ ಯಾವುದೇ ನಡಿಗೆ ಆಯೋಜಿಸಿಲ್ಲ ಎಂದು ಸ್ಪಷ್ಟಪಡಿಸಿದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಧಾನ ಸಂಚಾಲಕ ವಿ.ಸಿ.ಉಮಾಶಂಕರ್.

ಕನ್ನಡಪ್ರಭ ವಾರ್ತೆ ಮದ್ದೂರು

ಮದ್ದೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸೌಹಾರ್ದ ನಡಿಗೆ, ಹಿಂದೂ ಮುಸ್ಲಿಂ ಐಕ್ಯತೆಗಾಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳು ಹರಿದಾಡುತ್ತಿರುವುದು ನಕಲಿ. ನಮ್ಮ ಸಂಘಟನೆಯಿಂದ ಯಾವುದೇ ನಡಿಗೆ ಆಯೋಜಿಸಿಲ್ಲ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಧಾನ ಸಂಚಾಲಕ ವಿ.ಸಿ.ಉಮಾಶಂಕರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತಂತೆ ಪಟ್ಟಣದಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮನವಿ ಸಲ್ಲಿಸಿರುವ ಅವರು, ಕೆಲವು ಸಂಘಟನೆಗಳ ಮುಖಂಡರು ಪ್ರಗತಿಪ ಸಂಘಟನೆಗಳ ಒಕ್ಕೂಟದ ಹೆಸರನ್ನು ದುರ್ಬಳಕ ಮಾಡಿಕೊಳ್ಳುತ್ತಿದ್ದಾರೆ. ಮದ್ದೂರಿನಲ್ಲಿ ಕಳೆದ ಐದಾರು ವರ್ಷಗಳಿಂದ ವಿವಿಧ ಸಮಾಜಮುಖಿ ಸಂಘಟನೆಗಳ ಕೂಟವಾಗಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮದ್ದೂರಿನಲ್ಲಿ ಸಕ್ರಿಯವಾಗಿದೆ ಎಂದು ಹೇಳಿದ್ದಾರೆ.

ನಾಡು-ನುಡಿ, ನೆಲ-ಜಲ, ರೈತ-ಕಾರ್ಮಿಕ-ದಲಿತ ಹೀಗೆ ಹಲವು ಸಮಸ್ಯೆಗಳ ಬಗ್ಗೆ ಜಾಗೃತ ಮನಸ್ಸಿನಿಂದ ಸ್ಪಂದನೆ ತೋರುತ್ತಾ ಬಂದಿದ್ದು ಜನ ಮನ್ನಣೆ ಗಳಿಸಿದೆ. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಹೆಸರಿನಲ್ಲಿ ಮದ್ದೂರಿನಲ್ಲಿ ಸೆ.೨೨ ರಂದು ಸೌಹಾರ್ದ ನಡಿಗೆ, ಹಿಂದೂ-ಮುಸ್ಲಿಂ ಐಕ್ಯತೆಗಾಗಿ ಈ ಕಾರ್ಯಕ್ರಮ ಎಂದು ಸಾಮಾಜಿಕ ಜಾಲತಾಣದಲ್ಲಿ ನಕಲಿ ಪೋಸ್ಟರ್‌ಗಳನ್ನು ಹರಿಯ ಬಿಟ್ಟಿದ್ದಾರೆ. ಪ್ರಗತಿಪರ ಸಂಘಟನೆಯಿಂದ ಇಂತಹ ಪ್ರತಿಭಟನೆ ಏರ್ಪಡಿಸಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮದ್ದೂರಿನಲ್ಲಿ ಈಗಾಗಲೇ ಪೊಲೀಸ್ ಇಲಾಖೆಯ ಕಾರ್ಯದಕ್ಷತೆಯ ಫಲವಾಗಿ ಅತಿ ಶೀಘ್ರವಾಗಿ ಗಣೇಶನ ಮೇಲೆ ಕಲ್ಲು ತೂರಿದ ಕಿಡಿಗೆಡಿಗಳ ಬಂಧನವಾಗಿದೆ. ಜಿಲ್ಲಾಡಳಿತದಿಂದ ಶಾಂತಿಸಭೆಯೂ ನಡೆದಿದೆ. ಮುಸ್ಲಿಂ ಸಂಘಟನೆಯ ಮುಖಂಡರು ನಮ್ಮ ಸಮುದಾಯದವರೇ ಕಲ್ಲು ತೂರಿದ್ದು ಎಂದು ತಪ್ಪೊಪ್ಪಿಗೆ ವ್ಯಕ್ತಪಡಿಸಿ ಕ್ಷಮೆ ಕೋರಿದ್ದಾರೆ. ಕಿಡಿಗೆಡಿಗಳ ಬಂಧನವಾಗಿದ್ದು ಅವರಿಗೆ ನಿಯಾಮಾನುಸಾರ ಶಿಕ್ಷೆ ಆಗಲಿ ಎಂದು ಜಾಮೀಯಾ ಮಸೀದಿ ಅಧ್ಯಕ್ಷ ಆದಿಲ್‌ಖಾನ್ ಕೂಡ ಹೇಳಿದ್ದಾರೆ. ಮದ್ದೂರು ಪಟ್ಟಣ ಸಹಜ ಸ್ಥಿತಿಗೆ ಬಂದಿರುವ ಸಮಯದಲ್ಲಿ ಸಾಮರಸ್ಯ ನಡಿಗೆಯ ಅವಶ್ಯಕತೆ ಏನು ಎಂದು ಪ್ರಶ್ನಿಸಿದ್ದಾರೆ.

ಶಾಂತಿ-ಸೌಹರ್ದತೆ ನೆಲೆಸಿರುವ ಪಟ್ಟಣದಲ್ಲಿ ಮತ್ತೊಂದು ಕಾರ್ಯಕ್ರಮ ರೂಪಿಸಿ ಜನರ ಮನಸ್ಸು ಕದಡುವ ಅಗತ್ಯವಿಲ್ಲ. ಜನರನ್ನು ತಮ್ಮಷ್ಟಕ್ಕೆ ತಾವು ಬಿಡುವುದೇ ನಿಜವಾದ ಸೌಹಾರ್ದತೆ ಎಂದಿದ್ದಾರೆ.

ಈ ವೇಳೆ ಪ್ರಗತಿಪರ ಸಂಘಟನೆ ಮಾರ್ಗದರ್ಶಕ ನ.ಲಿ.ಕೃಷ್ಣ, ಗ್ರಾಪಂ ಸದಸ್ಯರ ಒಕ್ಕೂಟದ ಎಸ್.ದಯಾನಂದ, ಜಿಲ್ಲಾ ರೈತ ಮುಖಂಡ ಸೊ.ಸಿ.ಪ್ರಕಾಶ್, ಗ್ರಾಪಂ ಸದಸ್ಯ ಸುನಿಲ್‌ಕುಮಾರ್, ಸಂಗೊಳ್ಳಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮ.ನ.ಪ್ರಸನ್ನ ಕೆ.ಕುಮಾರ್, ಕಜವೇ ಸಂಘಟನಾ ಕಾರ್ಯದರ್ಶಿ ವಿ.ಟಿ.ಕೆಂಚಪ್ಪ, ಎಂ.ವೀರಪ್ಪ, ವಿ.ಆರ್.ಸತೀಶ ಹಾಜರಿದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ