ಕನಕಾಚಲಪತಿ ಜಾತ್ರೆಯೊಂದಿಗೆ ಕನಕಗಿರಿ ಉತ್ಸವವಿಲ್ಲ: ಸಚಿವ ಶಿವರಾಜ ತಂಗಡಗಿ

KannadaprabhaNewsNetwork | Published : Mar 7, 2025 11:48 PM

ಸಾರಾಂಶ

ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಹಿರಿಯರು, ಮುಖಂಡರ ಅಭಿಪ್ರಾಯದ ಮೇರೆಗೆ ಉತ್ಸವ ಆಚರಣೆಗೆ ಮುಂದಾಗಿದ್ದೆ. ಕೆಲ ಸ್ಥಳೀಯರು ದಿನಾಂಕ ಮುಂದೂಡುವಂತೆ ಆಗ್ರಹಿಸಿ ಪ್ರತಿಭಟನೆ, ಹೋರಾಟ ಮಾಡುವುದಾಗಿ ಹೇಳಿಕೆಗಳು ಬಂದವು. ಇದರಿಂದಾಗಿ ಯಾರು ನಿರಾಶೆಯಾಗುವುದು ಬೇಡ.

ಕನಕಗಿರಿ:

ಕನಕಾಚಲಪತಿ ಜಾತ್ರೆಯೊಂದಿಗೆ ಕನಕಗಿರಿ ಉತ್ಸವ ಆಚರಣೆ ಸದ್ಯಕ್ಕಿಲ್ಲ. ಮುಂದಿನ ದಿನಗಳಲ್ಲಿ ಜನಾಭಿಪ್ರಾಯ ಪಡೆದು ಉತ್ಸವ ಆಚರಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಕನಕಾಚಲಪತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಉತ್ಸವ ಆಚರಣೆಯ ತುರ್ತುಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಹಿರಿಯರು, ಮುಖಂಡರ ಅಭಿಪ್ರಾಯದ ಮೇರೆಗೆ ಉತ್ಸವ ಆಚರಣೆಗೆ ಮುಂದಾಗಿದ್ದೆ. ಕೆಲ ಸ್ಥಳೀಯರು ದಿನಾಂಕ ಮುಂದೂಡುವಂತೆ ಆಗ್ರಹಿಸಿ ಪ್ರತಿಭಟನೆ, ಹೋರಾಟ ಮಾಡುವುದಾಗಿ ಹೇಳಿಕೆಗಳು ಬಂದವು. ಇದರಿಂದಾಗಿ ಯಾರು ನಿರಾಶೆಯಾಗುವುದು ಬೇಡ. ಎಲ್ಲರೂ ಒಗ್ಗೂಡಿ ಮಾ. ೨೦, ೨೧ರಂದು ಕನಕಾಚಲಪತಿ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸೋಣ ಎಂದರು.ಇನ್ನೂ ಉತ್ಸವ ಮಾಡುವುದು ನನಗೆ ಇಷ್ಟವಿಲ್ಲ. ಕ್ಷೇತ್ರದ ಜನರೊಟ್ಟಿಗೆ ಇದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಹಿಂದೆ ನಾಲ್ಕು ಬಾರಿ ಉತ್ಸವ ಮಾಡಿದ ಖುಷಿ ಇದೆ. ಮುಂದಿನ ದಿನಗಳಲ್ಲಿ ಜನಾಭಿಪ್ರಾಯ ಪಡೆದು ಉತ್ಸವ ಆಚರಿಸುತ್ತೇನೆ ಎಂದು ಉತ್ಸವ ಆಚರಣೆಯ ಗೊಂದಲಕ್ಕೆ ತೆರೆ ಎಳೆದರು. ತಹಸೀಲ್ದಾರ್‌ ವಿಶ್ವನಾಥ ಮುರುಡಿ, ತಾಪಂ ಇಒ ಟಿ. ರಾಜಶೇಖರ, ದೇವಸ್ಥಾನ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಪ್ರಮುಖರಾದ ಗಂಗಾಧರಸ್ವಾಮಿ, ವೀರೇಶ ಸಮಗಂಡಿ, ಕನಕಪ್ಪ ಬಿ, ವಾಗೀಶ ಹಿರೇಮಠ, ಮಹಾಂತೇಶ ಸಜ್ಜನ, ಪ್ರಕಾಶ ಹಾದಿಮನಿ ಸೇರಿದಂತೆ ಇತರರಿದ್ದರು.ನೂರು ಬೆಡ್ ಆಸ್ಪತ್ರೆಗೆ ₹ ೪೨ ಕೋಟಿ

ಕನಕಗಿರಿಯಲ್ಲಿ ನೂರು ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ₹ ೪೨ ಕೋಟಿ ಅನುದಾನ ನೀಡಿದೆ. ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಚನ್ನಮಲ್ಲಶ್ರೀಗಳು ೫ ಎಕರೆ ಭೂಮಿ ನೀಡಿದ್ದಾರೆ. ಪ್ರಜಾಸೌಧ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

Share this article