ಎಸ್.ಎಸ್.ಎಲ್.ಸಿಯ ಕನ್ನಡ ವಿಷಯದಲ್ಲಿ 100ಕ್ಕೆ 100 ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಸಾಧನೆಗೆ ಯಾವುದೇ ಮಿತಿ ಇರುವುದಿಲ್ಲ. ಮಕ್ಕಳು ಯಾವತ್ತೂ ದೊಡ್ಡಕನಸು ಕಾಣುತ್ತಿರಬೇಕು, ನಿಮ್ಮ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡು ಸಾಧನೆಯ ಶಿಖರ ತಲುಪಬೇಕು. ಅತ್ಯುನ್ನತ ಹುದ್ದೆಗಳು ನಿಮ್ಮನ್ನು ಕಾಯುತ್ತಿದ್ದು, ಅವುಗಳನ್ನು ಪಡೆಯುವ ದೃಡ ಸಂಕಲ್ಪವನ್ನು ಮಾಡಿ ಎಂದು ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಹಾಗೂ ಹಳಿಯಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಎಸ್.ಎಸ್.ಎಲ್.ಸಿಯ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಸಾಧಕ ವಿದ್ಯಾರ್ಥಿಗಳು ಹಾಗೂ ಅವರನ್ನು ರೂಪಿಸಿದ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಉತ್ತಮ ಸಾಹಿತ್ಯ ಮತ್ತು ಪುಸ್ತಕ ಓದುವ ಹವ್ಯಾಸವು ವ್ಯಕ್ತಿತ್ವ ವಿಕಸನಕ್ಕೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಪಠ್ಯದ ಜೊತೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು, ಕನ್ನಡ ಸಾಹಿತ್ಯವನ್ನು ಓದಿ ವೈಚಾರಿಕತೆ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಕಸಾಪ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಉಳಿವು-ಬೆಳವಣಿಗೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಕನ್ನಡದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಅವರಿಗೆ ಪ್ರೇರಣೆ ನೀಡಿದ ಗುರುವೃಂದದವರನ್ನು ಸನ್ಮಾನಿಸುವ ಈ ಕಾರ್ಯಕ್ರಮವು ಸಾರ್ಥಕವಾಗಿದೆ ಎಂದರು. ಕನ್ನಡದ ಕಾಳುಗಳನ್ನು ನಿಮ್ಮ ಮನಗಳಲ್ಲಿ ಬಿತ್ತಿದ್ದೇವೆ. ಅವು ಬೆಳೆದು ಹೆಮ್ಮರವಾಗಿ ಕನ್ನಡದ ಕಂಪನ್ನು ವಿಶ್ವದಾದಂತ್ಯ ಪಸರಿಸಲಿ ಎಂದು ಶುಭ ಹಾರೈಸಿದರು.
ಕಸಾಪದ ಪದಾಧಿಕಾರಿಗಳಾದ ಬಸವರಾಜ ಇಟಗಿ, ಗೋಪಾಲ ಅರಿ ಹಾಗೂ ವಿಠ್ಠಲ ಕೊರ್ವೆಕರ, ಜಿ.ಡಿ. ಗಂಗಾಧರ್ ಇದ್ದರು.