- ಬಿಜೆಪಿ ನಾಯಕರಿಗೆ ಇದೆಲ್ಲಾ ಒಂದು ಚುನಾವಣೆ ಅಷ್ಟೇ, ಆದರೆ, ತತ್ವ-ಸಿದ್ಧಾಂತವೆಂದು ದುಡಿದೋರ ಪಾಡೇನು?
- - - ಕನ್ನಡಪ್ರಭ ವಾರ್ತೆ, ದಾವಣಗೆರೆಒಂದೂವರೆ ದಶಕದ ಹಿಂದೆ ತುಂಬಿದ ಮನೆಯಾಗಿ, ಅಧಿಕಾರದ ಸುವರ್ಣಯುಗ ಅನುಭವಿಸಿದ್ದ ಬಿಜೆಪಿ ಈಗ ಮನೆಯೊಂದು ಹಲವು ಬಾಗಿಲುಗಳು ಎಂಬಂತಾಗಿದೆ. ತನ್ನ ದುರ್ದಿನಗಳನ್ನು ತಾನೇ ತಂದುಕೊಂಡಿರುವುದು ಪಕ್ಷದ ಮುಖಂಡರ ಜಂಘಾಬಲವನ್ನೇ ಅಡಗಿಸಿದೆ.
ಜಿಲ್ಲಾ ನಾಯಕರ ಶೀತಲಸಮರ, ಪರಸ್ಪರರಲ್ಲಿ ವಿಶ್ವಾಸ ಇಲ್ಲದ್ದು, ನನ್ನ ಅವಧಿ ಮುಗಿದಾಯ್ತಲ್ಲವೆಂಬ ಧೋರಣೆ, ನಮಗೆ ಅಧಿಕಾರ ಕೊಡಿಸಲಿಲ್ಲ ಎಂಬುದು, ಗೆಲ್ಲುವ ಕುದುರೆಗಳನ್ನೇ ಕಟ್ಟಿ ಹಾಕುವ ಹುಚ್ಚು ಸಾಹಸಕ್ಕೆ ಕೈ ಹಾಕಿದ ಹೈ ಕಮಾಂಡ್‌ನ ಅತಿಯಾದ ವಿಶ್ವಾಸ, ತಪ್ಪು ಲೆಕ್ಕಾಚಾರಗಳ ಪರಿಣಾಮ ದಾವಣಗೆರೆಯಂಥ ಭದ್ರಕೋಟೆ ಕಾಂಗ್ರೆಸ್ ಕೈ ವಶವಾಗಿದೆ ಎಂಬುದು ನೊಂದ ಕಾರ್ಯಕರ್ತರ ಮಾತು.ಕಳೆದ 4 ಚುನಾವಣೆಗಳಲ್ಲಿ ಗೆದ್ದಿದ್ದ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರಗೆ ಟಿಕೆಟ್ ನೀಡುವುದಕ್ಕೆ ಸಂಘಟಿತವಾಗಿ ವಿರೋಧಿಸಿದ್ದವರ ಪೈಕಿ ಯಾರೂ ಇಡೀ ಲೋಕಸಭಾ ಕ್ಷೇತ್ರದಲ್ಲಿ ಮುನ್ನಡೆ ತಂದುಕೊಟ್ಟಿಲ್ಲ. ಆಕಸ್ಮಾತ್ ದಾವಣಗೆರೆ ಉತ್ತರ ಹಾಗೂ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲೇನಾದರೂ ಬಿಜೆಪಿಗೆ ಮುನ್ನಡೆ ಸಿಕ್ಕಿದ್ದರೆ ಅದು ಕಾರ್ಯಕರ್ತರ ಪರಿಶ್ರಮ, ಮತದಾರರು ನರೇಂದ್ರ ಮೋದಿ, ಯಡಿಯೂರಪ್ಪ, ಪಕ್ಷದ ಮೇಲಿಟ್ಟಿರುವ ಅಭಿಮಾನ, ನಂಬಿಕೆಗೆ ಸಿಕ್ಕ ಮತಗಳು ಎನ್ನುತ್ತಾರೆ ಅವರು.
ಬಿಜೆಪಿ ಪರಿಸ್ಥಿತಿಯನ್ನು ಕಾಂಗ್ರೆಸ್ ಮಾತ್ರ ಅತ್ಯಂತ ಜಾಣ್ಮೆಯಿಂದಲೇ ಗೆಲುವಿನ ಮೆಟ್ಟಿಲಾಗಿ ಮಾಡಿಕೊಂಡಿದೆ. ದೊಡ್ಡ, ಹಿರಿಯ ನಾಯಕರ ಪೈಕಿ ಕೆಲವರನ್ನು ಸೆಳೆದರೆ, ಬಿಜೆಪಿಯ ನರನಾಡಿಯಂತಿದ್ದ ಹಿರಿಯ, ನಿಷ್ಠಾವಂತ ಕಾರ್ಯಕರ್ತರಿಗೆ ಗಾಳ ಹಾಕಿತು. ಇನ್ನು ಕೆಲ ಮುಖಂಡರಂತೂ ಭೌತಿಕವಾಗಿ ಬಿಜೆಪಿಯಲ್ಲೇ ಇದ್ದರೂ ಅಭ್ಯರ್ಥಿಯ ಸೋಲೇ ತಮ್ಮ ಧ್ಯೇಯ ಗುರಿ ಎಂಬಂತೆ ವರ್ತಿಸಿದ್ದು ಪಕ್ಷದ ಹಿನ್ನಡೆಗೆ ಕಾರಣ ಎಂಬುದು ಹೇಳಲಿಚ್ಛಿಸದ ಕಾರ್ಯಕರ್ತನ ಅಭಿಪ್ರಾಯ.ನಾವ್ಯಾರೂ ಅಧಿಕಾರಕ್ಕಾಗಿ ಹಪಾಹಪಿಸಲಿಲ್ಲ. ಟಿಕೆಟ್ ಕೊಡುವಂತೆ ಯಾವ ಮುಖಂಡರ ಮನೆ ಅಂಗಳಕ್ಕೂ ಹೋಗಲಿಲ್ಲ. ನಮಗೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಪ್ರಯೋಗ ಮಾಡಲು ಹೋಗಿ ಕೈ ಸುಟ್ಟುಕೊಂಡರೂ, ಜಾಗ್ರತೆ ವಹಿಸದ ಹೈಕಮಾಂಡ್ ಅತಿಯಾದ ನಿರೀಕ್ಷೆಯಿಂದ ಮತ್ತೆ ಪ್ರಯೋಗ ಮಾಡಿಸಿಕೊಳ್ಳಲು ಹೋಗಿ ಬರೆಯನ್ನೇ ಹಾಕಿಸಿಕೊಂಡಿದೆ. ಪಕ್ಷದಲ್ಲಿದ್ದ ಹಿರಿಯ, ಯುವ ಮುಖಂಡರನ್ನೆಲ್ಲಾ ಒಂದೆಡೆ ಸೇರಿಸಿ, ತಿದ್ದಿದ್ದರೆ ಸಮಸ್ಯೆ ಸಹ ಆಗುತ್ತಿರಲಿಲ್ಲ. ಆದರೆ, ಅಂತಹ ಪ್ರಯತ್ನ ಆಗಲಿಲ್ಲ. ಆ ಪ್ರಯತ್ನಕ್ಕೂ ಇಲ್ಲಿ ಆಲೋಚನೆ ಮಾಡಲಿಲ್ಲ ಎನ್ನುತ್ತಾರೆ ಕಾರ್ಯಕರ್ತರು.
ಬಿಜೆಪಿಯಂತೂ ಇಲ್ಲಿ ಸ್ವಾರ್ಥ, ಪ್ರತಿಷ್ಟೆಗಾಗಿ ತಳೆದ ನಿರ್ಧಾರದಿಂದ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ತಮ್ಮ ಅಧಿಕಾರ ಅವಧಿ ಮುಗಿಯಿತು ಎಂಬ ಕಾರಣಕ್ಕೆ ಕೆಲವರು, ತಮಗೆ ಮತ್ತೆ ರಾಜಕೀಯ ಅವಕಾಶ ಇದೆಯೋ ಇಲ್ಲವೋ ಎಂಬ ಲೆಕ್ಕಾಚಾರದಲ್ಲಿ ಕೆಲವರು, ತಪ್ಪು ಗ್ರಹಿಕೆಯಿಂದ ಮತ್ತೆ ಕೆಲವರು, ಕೆಲವರ ಮೇಲಿನ ಸಿಟ್ಟಿಗೆ ಮತ್ತೆ ಕೆಲವರು ಹೀಗೆ ಬಿಜೆಪಿ ಆಂತರಿಕ ಸಮಸ್ಯೆಗಳ ಜೊತೆಗೆ ಕಾಂಗ್ರೆಸ್ಸಿನ ತಂತ್ರವನ್ನು ಸರಿಯಾಗಿ ಗ್ರಹಿಸದೇ, ಅತಿಯಾದ ವಿಶ್ವಾಸದಿಂದಲೂ ಹಿಂದಡಿ ಇಡಬೇಕಾಯಿತು. ಮನೆ, ಮನೆ, ದುಡಿಮೆ, ಅಂಗಡಿ, ವ್ಯವಹಾರ ಹೀಗೆ ಎಲ್ಲವನ್ನೂ ಬಿಟ್ಟು ಪಕ್ಷಕ್ಕಾಗಿ ದುಡಿದೆವು. ನಂತರ ಚುನಾವಣೆಯಲ್ಲಿ ಗೆದ್ದವರು ಕಾರ್ಯಕರ್ತರನ್ನೇ ಮರೆಯುತ್ತಿದ್ದರು ಎಂದು ಬೇಸರದ ಬೇಗುದಿ ತೆರೆದಿಟ್ಟಿದ್ದಾರೆ.ಹೀಗೆ ಒಂದಲ್ಲ, ಎರಡಲ್ಲ. ನಿಸ್ವಾರ್ಥದಿಂದ ದುಡಿದ ಅದೆಷ್ಟೋ ಕಾರ್ಯಕರ್ತರು ಕಡೆಗೆ ಜೀವನದ ಕಡೆಗೆ ಗಮನ ನೆಟ್ಟರೆ, ಮತ್ತೆ ಕೆಲವರು ಪಕ್ಷಕ್ಕಾಗಿ, ತತ್ವ, ಸಿದ್ಧಾಂತಕ್ಕಾಗಿ ಚುನಾವಣೆ ವೇಳೆ ಕೆಲಸ ಮಾಡಿ, ತಮ್ಮ ಪಾಡಿಗೆ ತಾವು ಇರುವಂತಥವರೀ ಬಿಜೆಪಿ ಚುನಾವಣೆ ಫಲಿತಾಂಶದಿಂದ ನೊಂದಿರುವುದು ಸಹಜ. ನಾಯಕರಿಗೆ ಇದು ಸೋಲು, ಗೆಲುವಷ್ಟೇ. ಆದರೆ, ಅಸಂಖ್ಯಾತ ಕಾರ್ಯಕರ್ತರಿಗೆ ಇದು ಆತ್ಮಸಮ್ಮಾನದ ಪ್ರಶ್ನೆ. ನಾವು ಈಗ ಸೋತಿದ್ದೇವೆ. ಸತ್ತಿಲ್ಲವೆಂಬ ಬಿಜೆಪಿಯ ಕಾರ್ಯಕರ್ತನೊಬ್ಬನ ಮಾತು ಉಳಿದವರನ್ನೂ ಹುರಿದುಂಬಿಸುವಂತಿತ್ತು.
- - - -5ಕೆಡಿವಿಜಿ5:- ಮತ ಎಣಿಕೆ ಮುಗಿದ ಹಿನ್ನೆಲೆ ದಾವಣಗೆರೆಯ ಶಿವಗಂಗೋತ್ರಿಯ ದಾವಿವಿ ಕ್ಯಾಂಪಸ್‌ನ ಮತ ಎಣಿಕೆ ಕೇಂದ್ರದಿಂದ ಬುಧವಾರ ಇವಿಎಂ ಯಂತ್ರಗಳನ್ನು ಸಾಗಿಸಲಾಯಿತು.