ರಾಮನಗರ: ಪುರಾಣ ಪ್ರಸಿದ್ಧ ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಭಕ್ತರ ಸಹಕಾರದಲ್ಲಿ ಸಾಗುತ್ತಿದೆ. ದೇಗುಲ ನಿರ್ಮಾಣದ ಹಣಕಾಸು ವಿಷಯದಲ್ಲಿ ಯಾವುದೇ ಲೋಪವಾಗಿಲ್ಲ. ಎಲ್ಲವೂ ಪಾರದರ್ಶಕವಾಗಿದೆ ಎಂದು ಶ್ರೀ ಅರ್ಕೇಶ್ವರ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸಿಎನ್ಆರ್ ವೆಂಕಟೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯದ ಅಭಿವೃದ್ಧಿ ಕಾರ್ಯಗಳು ಅಂದಾಜು ವೆಚ್ಚ, ಭಕ್ತಾದಿಗಳ ಸಹಕಾರದ ಬಗ್ಗೆ ಮಾಹಿತಿ ನೀಡಿದ ವೆಂಕಟೇಶ್, ಸಮಿತಿ ಪದಾಧಿಕಾರಿಗಳೆಲ್ಲರು ಸೇವಾ ಮಾನೋಭಾವದಿಂದ ಧಾರ್ಮಿಕ ದತ್ತಿ ಇಲಾಖೆ ನಿಯಮಾನುಸಾರ ದೇವಾಲಯ ನಿರ್ಮಾಣಕ್ಕೆ ಶ್ರಮಿಸುತ್ತಿದ್ದೇವೆ ಎಂದರು.2020ರಲ್ಲಿ ದೇವಾಲಯ ನಿರ್ಮಾಣಕ್ಕೆ ಆದೇಶ ಸಿಕ್ಕಿತು. 2022ರ ಅಕ್ಟೋಬರ್‌ನಲ್ಲಿ ಕಳಾಕರ್ಷಣೆ, ಪಾಯಪೂಜೆ ಆರಂಭಿಸಿ, ಫೆಬ್ರವರಿ 2023ರಲ್ಲಿ ಕೆಲಸ ಆರಂಭಿಸಿ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ದೇವಾಲಯದ ನಿಧಿಯಲ್ಲಿ 80 ಲಕ್ಷ ಅಷ್ಟೆ ಇತ್ತು.
ದೇವಾಲಯ ನಿರ್ಮಾಣಕ್ಕೆ ಟೆಂಡರ್ ಕರೆದಾಗ ಕಾರ್ಕಳದ ಚಂದ್ರಶೇಖರ ಶಿಲ್ಪಿ ಅವರಿಗೆ ಜಿಲ್ಲಾಧಿಕಾರಿಗಳು ನಿರ್ಮಾಣ ಜವಾಬ್ದಾರಿ ವಹಿಸಿದರು ಎಂದು ತಿಳಿಸಿದರು.ಮಣ್ಣಿನ ಪರೀಕ್ಷೆ ಫಲಿತಾಂಶ ಮಾಡಿಸಿ ವರದಿ ಬಂದ ನಂತರ 2022ರಲ್ಲಿ ದೇವಾಲಯ ಶಂಕುಸ್ಥಾಪನೆ ಮಾಡಿ 2 ಲೇಯರ್ ಬೆಡ್ ಹಾಕಿ ಒಟ್ಟು 21 ಅಡಿ ದೇವಾಲಯದ ಪಾಯ ನಿರ್ಮಾಣ ಮಾಡಲಾಗಿದೆ. 9 ಅಡಿ ಗೋಡೆ ಎದ್ದಿದೆ. ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಸಿ.ಎಂ.ಲಿಂಗಪ್ಪನವರ 20 ಲಕ್ಷ , ಅ.ದೇವೇಗೌಡ 5 ಲಕ್ಷ, ಎಸ್.ರವಿ 4 ಲಕ್ಷ ಅನುದಾನ ನೀಡಿದ್ದಾರೆ. ಶಿಲ್ಪಿಗೆ 44 ಲಕ್ಷ ನೀಡಲಾಗಿದ್ದು, ಎಲ್ಲವೂ ಸಹ ಧಾರ್ಮಿಕ ದತ್ತಿ ಇಲಾಖೆ ನಿರ್ದೇಶನದಂತೆ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಸುಮಾರು 200 ವರ್ಷಗಳಿಗೂ ಹೆಚ್ಚು ಉತ್ತಮ ಸ್ಥಿತಿಯಲ್ಲಿರುವಂತೆ ರಥದ ಕಟ್ಟಡವನ್ನು ಕಲ್ಲಿನಲ್ಲಿ ಭಕ್ತರ ಮತ್ತು ಸೇವಾ ಸಂಘದ ವತಿಯಿಂದ ನಿರ್ಮಿಸಲಾಗಿದೆ. ಮುಜರಾಯಿ ಇಲಾಖೆ ಪ್ರಕಾರ ನಿಯಮಾನುಸಾರ ಕಟ್ಟಡ ನಿರ್ಮಾಣ ಮತ್ತು ಪೂಜಾ ಕಾರ್ಯಗಳು ಸಾಗುತ್ತಿವೆ. ಸಮಿತಿಯ ಖಜಾಂಚಿ ನಾಗೇಶ್ ಕುಟುಂಬದವರು 12 ಲಕ್ಷದಲ್ಲಿ ದೇವಾಲಯ ಗೋಪುರ ನಿರ್ಮಾಣ ಮಾಡಿಸುತ್ತಿದ್ದಾರೆ. ಹೀಗೆ ಸಮಿತಿಯ ನಿರ್ದೇಶಕರು ಭಕ್ತರ ನೆರವಿನಲ್ಲಿ ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕೆಲವರ ಆರೋಪಕ್ಕೆ ಭಕ್ತರು ಕಿವಿಗೊಡಬೇಡಿ ಎಂದು ಮನವಿ ಮಾಡಿದರು.ದೇವಾಲಯದ ಯಾವುದೇ ಹಣವನ್ನು ಸಮಿತಿಯ ಇತರೆ ಖರ್ಚಿಗೆ ಬಳಸಿಲ್ಲ. ಪದಾಧಿಕಾರಿಗಳು ಸ್ವಂತ ಖರ್ಚಿನಲ್ಲಿ ಓಡಾಡಿ ಕೆಲಸಗಳನ್ನು ಮಾಡುದ್ದೇವೆ. ತೆರಿಗೆ ವಿನಾಯಿತಿ ಪಡೆಯುವ ಸಲುವಾಗಿ ಚಾಲ್ತಿ ಖಾತೆ ತೆರೆಯಲಾಗಿದೆ. ಸಮಿತಿಯವರು ಇತಿಹಾಸ ಪುರಾತನ ಶ್ರೀ ಅರ್ಕೇಶ್ವರಸ್ವಾಮಿ ಮೂಲ ದೇವಾಲಯ ನಿರ್ಮಿಸಬೇಕೆಂದು ಸೇವಾ ಮನೋಭಾವದಿಂದ ಎಲ್ಲರು ಶ್ರಮಿಸುತ್ತಿದ್ದೇವೆ ಎಂದು ವೆಂಕಟೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ನಾಗೇಶ್, ನಂದೀಶ್, ಎಸ್.ಆರ್. ನಾಗರಾಜು, ಗೂಳಿಕುಮಾರ್, ನರಸಿಂಹಯ್ಯ, ರಾಜು, ಆರ್.ವಿ. ಸುರೇಶ್, ಚಂದ್ರಶೇಖರ್, ಅರ್ಕೇಶ್ , ವೆಂಕಟೇಶ್, ಮಂಜು, ಬಿ.ನಾಗೇಶ್, ಸುಹಾಸ್, ಜ್ಞಾನೇಶ್, ಮಂಜೇಶ್, ಚಂದನ್, ರಾಮಣ್ಣ, ಪ್ರಶಾಂತ್ ಪಾರುಪತ್ತೇದಾರ್ ಮಧುರೈ ವೀರನ್ ಇದ್ದರು.1ಕೆಆರ್ ಎಂಎನ್ 3.ಜೆಪಿಜಿ
ಶ್ರೀ ಅರ್ಕೇಶ್ವರ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸಿಎನ್ಆರ್ ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ದೇಗುಲ ನಿರ್ಮಾಣ ಕಾರ್ಯವನ್ನು ವಿವರಿಸಿದರು.