;Resize=(412,232))
ಬೆಳಗಾವಿ : ಸದನದಲ್ಲಿ ಸಿ.ಟಿ. ರವಿ ಆಶ್ಲೀಲ ಪದ ಬಳಕೆ ಘಟನೆ ಆಗಿ ಹೋಗಿದೆ. ಮುಂದುವರಿಸುವುದರಲ್ಲಿ ಅರ್ಥ ಇಲ್ಲ. ದೇಶದಲ್ಲಿ ಇಂತಹ ಘಟನೆಗಳು ಹೊಸದಲ್ಲ. ಸಂಸತ್ತು, ವಿಧಾನಸಭೆಯಲ್ಲಿ ನಡೆದಿವೆ. ಕ್ಷಮೆ ಕೇಳಿದ ಬಳಿಕ ಮುಗಿದು ಹೋಗಿವೆ. ಇದನ್ನೂ ಮುಗಿಸೋದು ಒಳ್ಳೆಯದು. ಸಾರ್ವಜನಿಕವಾಗಿ ಪ್ರಕರಣ ಮುಂದುವರಿಸುವುದು ಅನವಶ್ಯಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಾಚ್ಯ ಶಬ್ದ ಬಳಿಸಿಲ್ಲವೆಂದು ಅವರೇ ಹೇಳುತ್ತಿದ್ದಾರೆ. ಹೀಗಾಗಿ ಕೇಸ್ ಇಲ್ಲಿಗೆ ಮುಗಿಸಿದರೆ ಒಳ್ಳೆಯದು. ಬೆಳಗಾವಿ ಸುವರ್ಣ ವಿಧಾನಸೌದಲ್ಲಿ ಇಂತಹ ಪ್ರಕರಣ ಈ ಹಿಂದೆ ಆಗಿರಲಿಲ್ಲ ಎಂದು ಹೇಳಿದರು.
ಸಿ.ಟಿ.ರವಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಪೊಲೀಸರು ಖಾನಾಪುರದಿಂದ ಶಿಫ್ಟ್ (ಸ್ಥಳಾಂತರ) ಮಾಡಿದ್ದರು. ಅಲ್ಲಿ ಬಿಜೆಪಿಯವರು ಬಂದು ತೊಂದರೆ ನೀಡಿದ್ದರಿಂದ ಸಿ.ಟಿ.ರವಿ ಅವರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಪೊಲೀಸರು ಅವರನ್ನು ರೌಂಡ್ಸ್ ಹೊಡಿಸಿದ್ದಾರೆ. ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ. ಯಾರ ನಿರ್ದೇಶನ ಮೇರೆಗೆ ಸಿ.ಟಿ.ರವಿಯನ್ನು ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದಾರೆ ಎಂಬುದು ನಂಗೆ ಗೊತ್ತಿಲ್ಲ. ಸಿ.ಟಿ.ರವಿಯನ್ನು ರಾತ್ರಿಯೇ ಕೋರ್ಟ್‌ಗೆ ಹಾಜರು ಮಾಡುವಂತೆ ನಾನು ಪೊಲೀಸರಿಗೆ ಹೇಳಿದ್ದೆ. ಬೆಳಗಾವಿ ಪೊಲೀಸರು ಅಷ್ಟು ಮಾಡಿದ್ರೆ ಇಷ್ಟೆಲ್ಲ ಆಗುತ್ತಿರಲಿಲ್ಲ ಎಂದು ಹೇಳಿದರು.