ಮತದಾರರ ಪಟ್ಟಿಯ ಲೋಪ ಪ್ರಶ್ನಿಸುವುದರಲ್ಲಿ ರಾಜಕೀಯವಿಲ್ಲ- ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Jul 06, 2026, 02:15 AM IST
ಬಸವರಾಜ ಬೊಮ್ಮಾಯಿ | Kannada Prabha

ಸಾರಾಂಶ

ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ಲೋಪದೋಷಗಳನ್ನು ಜನರ ಗಮನಕ್ಕೆ ತರುವುದು ಮತ್ತು ಅದನ್ನು ಸರಿಪಡಿಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸುವುದು ಒಬ್ಬ ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ಲೋಪದೋಷಗಳನ್ನು ಜನರ ಗಮನಕ್ಕೆ ತರುವುದು ಮತ್ತು ಅದನ್ನು ಸರಿಪಡಿಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸುವುದು ಒಬ್ಬ ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಮಾಜಿ ಸಚಿವ ಶಾಸಕ ಎಚ್.ಕೆ. ಪಾಟೀಲ್ ಅವರ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ಗದಗ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಎಚ್.ಕೆ. ಪಾಟೀಲ ಎಂಬ ಹೆಸರು ಮೂರು ಕಡೆ ನಮೂದಾಗಿದೆ ಎಂದು ನಾನು ನಿನ್ನೆ ಹೇಳಿದ್ದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಇದನ್ನು ಪರಿಶೀಲಿಸಬೇಕು ಎಂದು ಕೋರಿದ್ದೆ. ಕೇವಲ ಅವರ ಹೆಸರಷ್ಟೇ ಅಲ್ಲದೇ, ಗದಗದಲ್ಲಿ ಇಂತಹ ಸುಮಾರು 3,000ಕ್ಕೂ ಹೆಚ್ಚು ಹೆಸರುಗಳು ಎರಡು, ಮೂರು ಅಥವಾ ನಾಲ್ಕು ಕಡೆ ಇವೆ. ಇದರ ಪಟ್ಟಿಯನ್ನೂ ಸಹ ನಾವು ನೀಡಿದ್ದೇವೆ ಮತ್ತು ಇದನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಬೊಮ್ಮಾಯಿ ವಿವರಿಸಿದರು.

ಎಚ್.ಕೆ. ಪಾಟೀಲ್ ಹೇಳಿಕೆಗೆ ಆಕ್ಷೇಪ: ನನ್ನ ಹೇಳಿಕೆಗೆ ಎಚ್.ಕೆ. ಪಾಟೀಲ್ ಅವರು ಪ್ರತಿಕ್ರಿಯಿಸಿ, ಇದನ್ನು ಕೀಳುಮಟ್ಟದ ರಾಜಕಾರಣ ಎಂದು ಕರೆದಿದ್ದಾರೆ. ಆದರೆ ನಾನು ಯಾವುದೇ ರಾಜಕೀಯ ಮಾತನಾಡಿಲ್ಲ. ಮ್ಯಾಪಿಂಗ್ ಮಾಡಿದಾಗ ಕಂಡುಬಂದ ಲೋಪಗಳನ್ನು ಮಾತ್ರ ಪ್ರಸ್ತಾಪಿಸಿದ್ದೇನೆ. ನಮ್ಮ ಕಡೆಯಿಂದ ಯಾವುದೇ ಆಪಾದನೆಯನ್ನು ಮಾಡಿಲ್ಲ. ಆದರೆ, ತಮ್ಮ ಬಗ್ಗೆ ಮಾತನಾಡಿದ್ದೇ ಕೀಳುಮಟ್ಟದ ರಾಜಕೀಯ ಎನ್ನುವ ಅವರ ಧೋರಣೆ ಸರಿಯಲ್ಲ ಮತ್ತು ಸಮಂಜಸವೂ ಅಲ್ಲ. ಅವರು ತಮ್ಮ ಈ ಮಾತನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಚುನಾವಣಾ ಆಯೋಗವೇ ಸ್ಪಷ್ಟನೆ ನೀಡಲಿ: ಮತದಾರರ ಪಟ್ಟಿಯ ಈ ಲೋಪಗಳಿಗೆ ಚುನಾವಣಾ ಆಯೋಗದ ಅಧಿಕಾರಿಗಳೇ ಸೂಕ್ತ ಸ್ಪಷ್ಟನೆ ನೀಡಬೇಕಾಗಿದೆ. ಪಟ್ಟಿಯನ್ನು ಸರಿಪಡಿಸಬೇಕು ಎಂಬ ನಮ್ಮ ಆಗ್ರಹ ಈಗಲೂ ಇದೆ. ಒಬ್ಬ ಜನಪ್ರತಿನಿಧಿಯಾಗಿ ಯಾವುದೇ ಒತ್ತಡಕ್ಕೆ ಮಣಿಯದೇ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ಇದರಲ್ಲಿ ಕ್ಷಮಾಪಣೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಲೋಪಗಳಿಗೆ ಸೂಕ್ತ ಸ್ಪಷ್ಟನೆ ನೀಡುವುದನ್ನು ಬಿಟ್ಟು ಈ ರೀತಿ ಮಾತನಾಡುತ್ತಿರುವುದನ್ನು ನೋಡಿದರೆ ಅವರ ರಾಜಕಾರಣವೇ ಕೀಳುಮಟ್ಟಕ್ಕೆ ಹೋಗಿದೆ ಎಂದು ಅನಿಸುತ್ತದೆ. ಈ ಇಡೀ ವಿಚಾರದಲ್ಲಿ ಚುನಾವಣಾ ಆಯೋಗವು ಶೀಘ್ರದಲ್ಲೇ ಸ್ಪಷ್ಟನೆ ನೀಡುವುದು ಸೂಕ್ತ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೊಮ್ಮಾಯಿ ಆರೋಪ ಹಸಿ ಸುಳ್ಳು, ಬಹಿರಂಗ ಕ್ಷಮೆ ಕೇಳಲಿ: ಎಚ್‌.ಕೆ. ಪಾಟೀಲ
ಹೈಟೆಕ್ ಶೌಚಾಲಯ ಅಪೂರ್ಣ