ಕನ್ನಡಪ್ರಭ ವಾರ್ತೆ ಮಂಡ್ಯ
ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಅವರು ನಿಯಮ ೩೫೧ರಡಿಯಲ್ಲಿ ಕೇಳಿದ ಗಮನಸೆಳೆಯುವ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಅ.೩೧ರಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬರೆದಿರುವ ಪತ್ರದಲ್ಲಿ ಅಮೆರಿಕಾ ಮೂಲದ ಸ್ಯಾನ್ಸನ್ ಗ್ರೂಪ್‌ಗೆ ರಾಜ್ಯ ಸರ್ಕಾರದಿಂದ ಮಂಡ್ಯ ಜಿಲ್ಲೆಯ ಸುತ್ತ ೧೦೦ ಎಕರೆ ಭೂಮಿಯನ್ನು ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪನೆಗೆ ಹಂಚಿಕೆ ಮಾಡಲು ಕೋರಿದ್ದಾರೆ. ಈ ಪ್ರಸ್ತಾವ ಪರಿಶೀಲನೆಯಲ್ಲಿರುವುದಾಗಿ ಹೇಳಿದ್ದಾರೆ.
ಆದರೆ, ಅಮೆರಿಕಾ ಮೂಲದ ಸ್ಯಾನ್ಸನ್ ಗ್ರೂಪ್‌ನ ವತಿಯಿಂದ ಯೋಜನಾ ಅನುಮೋದನೆ ಹಾಗೂ ಭೂಮಿ ಹಂಚಿಕೆ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಇದುವರೆಗೆ ಸಲ್ಲಿಕೆಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಸದ್ಯಕ್ಕೆ ಮಂಡ್ಯ ಜಿಲ್ಲೆಯೊಳಗೆ ಸಿದ್ಧಪಡಿಸಿದ ಕೈಗಾರಿಕಾ ಪ್ರದೇಶದ ಭೂಮಿಯು ಲಭ್ಯವಿಲ್ಲ. ಮಂಡ್ಯ ತಾಲೂಕಿನ ನೊದೆಕೊಪ್ಪಲು ಗ್ರಾಮದಲ್ಲಿ ೨೮೪.೨೫ ಎಕರೆ ಭೂಮಿ ಭೂಸ್ವಾಧೀನಪಡಿಸಿಕೊಳ್ಳಲು ೨೮ ಜನವರಿ ೨೦೨೨ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಅಂತಿಮ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ನಾಗಮಂಗಲ ತಾಲೂಕಿನ ಚನ್ನಾಪುರ, ಬೀಚನಹಳ್ಳಿ, ಹಟ್ನ, ಬಿಳಗುಂದ ಗ್ರಾಮಗಳಲ್ಲಿ ೧೨೭೭.೦೨ ಎಕರೆ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳಲು ೧೪ ಆಗಸ್ಟ್ ೨೦೨೦ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಅಂದಿನಿಂದಲೂ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ರೈತರು ಮತ್ತು ಅಧಿಸೂಚಿತ ಖಾತೆದಾರರು ವಿರೋಧಿಸುತ್ತಿರುವುದರಿಂದ ಅಂತಿಮ ಅಧಿಸೂಚನೆ ಹೊರಡಿಸುವುದಕ್ಕೆ ಸಾಧ್ಯವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ಅಮೆರಿಕಾ ಮೂಲದ ಪ್ರತಿಷ್ಠಿತ ತಂತ್ರಜ್ಞಾನ ಉದ್ಯಮವಾದ ಸ್ಯಾನ್ಸನ್ ಗ್ರೂಪ್‌ನ ಕಂಪನಿಯು ಭಾರತದಲ್ಲಿ ಸಿಲಿಕಾಕ್ ಮತ್ತು ಸಿಲಿಕಾನ್ ಕಾರ್ಬೈಟ್ ಉತ್ಪಾದನಾ ಸೌಲಭ್ಯಕ್ಕಾಗಿ ಎಂಡ್ ಟು ಎಂಡ್ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಘಟಕವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಈ ಹೈಟೆಕ್ ಹಾರ್ಡ್‌ವೇರ್ ಎಂಜಿನಿಯರಿಂಗ್ ಯೋಜನೆಯನ್ನು ಕರ್ನಾಟಕದಲ್ಲೇ ಇರಿಸಲು ಬಲವಾದ ಆದ್ಯತೆಯನ್ನು ಹೊಂದಿದೆ.
ಈ ಯೋಜನೆಯನ್ನು ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಉಪಕ್ರಮಗಳ ದೃಷ್ಟಿಗೆ ಅನುಗುಣವಾಗಿ ಅರೆವಾಹಕ ವಲಯದಲ್ಲಿ ಗಮನಾರ್ಹ ತಂತ್ರಜ್ಞಾನ ಸೇರ್ಪಡೆ, ಹೆಚ್ಚಿನ ಮೌಲ್ಯದ ಉದ್ಯೋಗ ಸೃಷ್ಟಿ, ಸಾಮರ್ಥ್ಯ ವೃದ್ಧಿಗೆ ಭರವಸೆ ನೀಡುತ್ತದೆ ಎನ್ನಲಾಗಿದೆ.