ಕನ್ನಡಪ್ರಭ ವಾರ್ತೆ ರಾಯಚೂರು
ತುಂಗಭದ್ರ ಆಣೇಕಟ್ಟಿನ 19ನೇ ಗೇಟ್‌ನ ಚೈನ್ ಕಟ್ಟಾದ ಮಾಹಿತಿ ತಿಳಿದ ತಕ್ಷಣ ತುಂಗಭದ್ರ ಆಣೇಕಟ್ಟಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹಾಗೂ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವ ಎನ್.ಎಸ್. ಬೋಸರಾಜು ಅವರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಸೀಲಿಸಿದರು.ನಂತರ ಮಾತನಾಡಿದ ಅವರು, ಕಟ್ಟಾಗಿರುವ ಕ್ರಸ್ಟ್ ಗೇಟ್ ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈತರು ಯಾವುದೇ ರೀತಿಯ ಆತಂಕ ಪಡಬೇಕಾಗಿಲ್ಲ ಜಲಾಶಯದಲ್ಲಿ ನೀರು ಉಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶೀಘ್ರ ಗೇಟ್ ದುರಸ್ತಿಗಾಗಿ ತಾಂತ್ರಿಕ ಅಧಿಕಾರಿಗಳ ಸಲಹೆಗಳೊಂದಿಗೆ ಎಲ್ಲಾ ಗೇಟ್‌ಗಳನ್ನು ಓಪನ್ ಮಾಡಿಸಿ 80 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಹೊಸ ಗೇಟ್ ಅಳವಡಿಕೆ ಮಾಡಬೇಕಾದರೆ 60 ರಿಂದ 50 ಟಿಎಂಸಿ ನೀರಿನ ಮಟ್ಟ ಕಡಿಮೆ ಮಾಡಲಾಗುತ್ತಿದೆ. ನೀರಿನ ಪ್ರಮಾಣ ನಿಯಂತ್ರಣದ ನಂತರ ಗೇಟ್ ಕೂಡಿಸಲು ಪ್ರಯತ್ನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗೇಟ್ ದುರಸ್ತಿ ಕಾಮಗಾರಿ ತ್ವರಿತವಾಗಿ ಮುಗಿಸಿ, ನೀರು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ರೈತರು ನೀರು ಇಲ್ಲ ಅಂತ ಆತಂಕ ಪಡಬೇಕಾಗಿಲ್ಲ. ಶೀಘ್ರದಲ್ಲಿ ಗೇಟ್ ದುರಸ್ತಿ ಮೂಲಕ ಜಲಾಶಯದಲ್ಲಿ ನೀರು ಉಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ತುಂಗಭದ್ರಾ ಅಣೆಕಟ್ಟಿಗೆ 28,000 ಕ್ಯುಸೆಕ್ ಒಳಹರಿವು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ 50 ಟಿಎಂಸಿ ಅಂದಾಜು ನೀರು ಬರುವ ಅವಕಾಶ ಇದೆ ಎಂದರು.
ಆಣೆಕಟ್ಟು ವೀಕ್ಷಣೆ ನಂತರ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚೆ ಮಾಡಿ ಆದ್ಯತೆ ಮೇರೆಗೆ ಕೆಲಸ ಪೂರ್ಣಗೊಳಿಸಲು ಆದೇಶ ನೀಡಲಾಗಿದೆ ರೈತರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಎಂದರು.